ಶಿವಮೊಗ್ಗ, ಫೆ.2 : ಶಿವಮೊಗ್ಗ ರಂಗಾಯಣದ ಆವರಣದಲ್ಲಿ ಕಳೆದ 15ದಿನಗಳಿಂದ ರೂಪುಗೊಳ್ಳುತ್ತಿರುವ ರಂಗಶಿಲ್ಪಗಳು ಲೋಕಾರ್ಪಣೆಗೆ ಸಿದ್ಧವಾಗಿವೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸಹಯೋಗದಲ್ಲಿ ನಡೆಯುತ್ತಿರುವ ಈ ಶಿಲ್ಪಕಲಾ ಶಿಬಿರದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದವರ ಕೈಯಲ್ಲಿ ಅರಳಿರುವ ಸಿಮೆಂಟ್ ಶಿಲ್ಪಗಳು ಶಿವಮೊಗ್ಗ ರಂಗಾಯಣಕ್ಕೆ ಹೊಸ ಜೀವಕಳೆ ನೀಡಿದೆ. ಕೆಲವು ಪ್ರಸಿದ್ಧ ನಾಟಕಗಳ ಸನ್ನಿವೇಶಗಳು ಮತ್ತು ಪಾತ್ರಗಳನ್ನೇ ಶಿಲ್ಪವಾಗಿ ರೂಪಿಸಿರುವುದು ಶಿಲ್ಪಶಿಬಿರದ ಹಿರಿಮೆ. ಗೋಕುಲ ನಿರ್ಗಮನ ನಾಟಕದ ರಾಧೆ ಮತ್ತು ಕೃಷ್ಣ, ಕನ್ನೇಶ್ವರ ರಾಮ ನಾಟಕದ ಕನ್ನೇಶ್ವರ, ಮಹಿಳೆ ಮತ್ತು ಪೊಲೀಸ್, ಜೋಕುಮಾರ ಸ್ವಾಮಿ ನಾಟಕದ ಗೌಡ, ಗೌಡನ ಆಳು ಮತ್ತು ಗೌಡನ ಸಾಲಗಾರ, ಇದಕ್ಕೆ ಕೊನೆಯೆಂದು ನಾಟಕದ ನೀರಿನ ಕೊಡ ಕೆಳಗೆ ಬಿದ್ದು ಒಡೆಯುವ ಕಡೆ ದೃಶ್ಯ, ಕುವೆಂಪು ಅವರ ಕಾದಂಬರಿ ಮಲೆನಾಡ ಮದುಮಗಳು ನಾಟಕದ ಗುತ್ತಿ ಮತ್ತು ನಾಯಿ, ನಾಟಕದ ಕೊನೆಯ ದೃಶ್ಯಗಳು ಕಣ್ಣಿಗೆ ಕಟ್ಟುವಂತಿವೆ. ಇದರೊಂದಿಗೆ ನಾಡಿನ ಜಾನಪದ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಶಿಲ್ಪಗಳು ನೋಡುಗರ ಗಮನ ಸೆಳಯುತ್ತವೆ.

ತುಳುನಾಡಿನ ಭೂತದಕೋಲ, ಯಕ್ಷಗಾನ, ಕೇರಳದ ಪ್ರಸಿದ್ಧ ಕಥಕ್ಕಳಿಯ ಪಾತ್ರಗಳು ರಂಗಶಿಲ್ಪಗಳಿಗೆ ಮೆರುಗು ನೀಡಿವೆ. ಫೈಬರ್‍ನಲ್ಲಿ ರೂಪಿಸಲಾಗಿರುವ ರಂಗಭೀಷ್ಮ ಕೆ.ವಿ.ಸುಬ್ಬಣ್ಣ ಅವರ ಶಿಲ್ಪ ಮತ್ತು ರಂಗಾಯಣದ ಲೋಗೊ ಕೃತಿಗಳು ಆಕರ್ಷಕವಾಗಿವೆ. ಲೋಕಾರ್ಪಣೆ: ಬುಧವಾರ ಸಂಜೆ ನಡೆಯಲಿರುವ ಶಿಲ್ಪಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಅವರು ರಂಗಶಿಲ್ಪಗಳ ಲೋಕಾರ್ಪಣೆ ಮಾಡಲಿದ್ದಾರೆ. ಸಂಜೆ 5ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ 30ಹಿರಿಯ ಮತ್ತು ಸಹಾಯಕ ಕಲಾವಿದರಿಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪ್ರಮಾಣ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣಾ ಮಾ ಅರ್ಕಸಾಲಿ, ಮುಖ್ಯ ಅತಿಥಿಗಳಾಗಿ ರಂಗಸಮಾಜ ಸದಸ್ಯ ಆರ್.ಎಸ್.ಹಾಲಸ್ವಾಮಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್.ಹೆಚ್ ಆಗಮಿಸಲಿದ್ದಾರೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ತಿಳಿಸಿದ್ದಾರೆ. ನಾಟಕ ಪ್ರದರ್ಶನ: ಸಮಾರೋಪ ಸಮಾರಂಭದ ಬಳಿಕ ಸಂಜೆ 6.30 ಕ್ಕೆ ಗಣೇಶ್ ಮಂದಾರ್ತಿಯವರ ಸಂಗೀತ, ಪರಿಕಲ್ಪನೆ ಮತ್ತು ನಿರ್ದೇಶನದ‘ಕಣ್ಣಂತೆ ಕಾಣ್ಕೆ’ಎಂಬ ನಾಟಕ ಪ್ರದರ್ಶನ ನಡೆಯಲಿದೆ. ಟಿಕೆಟ್ ದರ ಒಬ್ಬರಿಗೆ ರೂ.20 ಇದ್ದು, ರಂಗಾಯಣ ಕಛೇರಿ 08182-256353 ಸಂಪರ್ಕಿಸಿ ಮುಂಗಡ ಕಾಯ್ದಿರಿಸಬಹುದಾಗಿದೆ ಎಂದು ಆಡಳಿತಾಧಿಕಾರಿ ಶಫಿ ಸಾದುದ್ದೀನ್ ತಿಳಿಸಿದ್ದಾರೆ. 

error: Content is protected !!