ಶಿವಮೊಗ್ಗ, ಜನವರಿ 16; : ಕರೋನಾ ಪಿಡುಗಿನ ವಿರುದ್ಧ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಸಿದ್ಧಪಡಿಸಿರುವ ಲಸಿಕೆ ಅತ್ಯಂತ ಕಡಿಮೆ ದರದ್ದಾಗಿದಾಗಿ ಬಡವರಿಗೂ ಕೈಗೆಟಕುವಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

    ಅವರು ಶನಿವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಬೇರೆ ದೇಶಗಳ ಲಸಿಕೆಯನ್ನು ಮೈನಸ್ ಡಿಗ್ರಿಯಲ್ಲಿ ಸಂಗ್ರಹಿಸಿಡುವ ಅನಿವಾರ್ಯತೆ ಇದ್ದು, ನಮ್ಮ ದೇಶದಲ್ಲಿ ತಯಾರಿಸಿರುವ ಲಸಿಕೆಯನ್ನು ಸುಲಭವಾಗಿ ದಾಸ್ತಾನು ಮಾಡಬಹುದಾಗಿದೆ. ಕರೋನಾ ವಿರುದ್ಧ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಿ ಯಶಸ್ವಿಯಾಗಿ ಎದುರಿಸಿದ್ದೇವೆ. ಇದೀಗ ಪ್ರತಿಯೊಬ್ಬರಿಗೂ ಲಸಿಕೆಯನ್ನು ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ವಿಜ್ಞಾನಿಗಳು ಯಶಸ್ವಿಯಾಗಿ ಲಸಿಕೆಯನ್ನು ಸಿದ್ಧಪಡಿಸಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.

    ಕರೋನಾ ಲಸಿಕೆಯನ್ನು ಉಚಿತವಾಗಿ ನೀಡುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಬೇರೆ ದೇಶಗಳ ಮೇಲೆ ಅವಲಂಬಿತಾಗದೆ ನಮ್ಮ ವಿಜ್ಞಾನಿಗಳು ಸ್ವದೇಶಿಯಾಗಿ ಕರೋನಾ ಲಸಿಕೆಯನ್ನು ಸಿದ್ಧಪಡಿಸಿರುವುದು ಎಲ್ಲರಿಗೂ ಹೆಮ್ಮೆ ಮೂಡಿಸಿದೆ. ಮೊದಲ ಹಂತದಲ್ಲಿ ಕರೋನಾ ವಾರಿಯರ್ಸ್‍ಗಳಿಗೆ ಲಸಿಕೆಯನ್ನು ಹಾಕಲಾಗುತ್ತಿದ್ದು, ಸುಮಾರು 3ಕೋಟಿ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ನಮ್ಮ ಜಿಲ್ಲೆಯಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ ಸುಮಾರು 25ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುವುದು ಎಂದು ಹೇಳಿದರು.

    ಮುಂದಿನ ಹಂತದಲ್ಲಿ ಪ್ರತಿಯೊಬ್ಬರಿಗೂ ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಲಾಗಿದ್ದು, ಕರೋನಾ ವಿರುದ್ಧ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ಲಸಿಕೆ ಬಂದಿದೆ ಎಂದು ನಿರ್ಲಕ್ಷ್ಯ ತಾಳದೆ ಕರೋನಾ ವಿರುದ್ಧ ಹೋರಾಟ ಮುಂದುವರೆಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧಾರಣೆಯನ್ನು ಕಡ್ಡಾಯವಾಗಿ ಮುಂದುವರೆಸಬೇಕು ಎಂದು ಅವರು ಮನವಿ ಮಾಡಿದರು.

    ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಶಾಸಕ ಅಶೋಕ ನಾಯ್ಕ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಮೆಗ್ಗಾನ್ ನಿರ್ದೇಶಕ ಡಾ.ಸಿದ್ಧಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಮೆಗ್ಗಾನ್ ನಿರ್ದೇಶಕರಾದ ಡಾ.ವಾಣಿ ಕೋರಿ, ಡಾ.ಗೌತಮ್, ದಿವಾಕರ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
error: Content is protected !!