ಶಿವಮೊಗ್ಗ, ಜನವರಿ 15 : ಜಿಲ್ಲೆಯಲ್ಲಿ ಅನುಕಂಪ ಆಧಾರಿತ ನೇಮಕಾತಿಗಳಲ್ಲಿ ತೀವ್ರಗತಿಯ ವಿಳಂಬವಾಗುತ್ತಿದ್ದು, ಸದರಿ ಪ್ರಕರಣದ ಕಡತಗಳನ್ನು ತ್ವರಿತವಾಗಿ ವಿಲೇ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇಲಾಖೆಯಲ್ಲಿ ಖಾಯಂಪೂರ್ವ ಸೇವಾವಧಿ ಘೋಷಣೆ, ಕಾಲಮಿತಿ ಬಡ್ತಿ ಮತ್ತು ವೇತನ ವಿಳಂಬವಾಗುತ್ತಿರುವ ಬಗ್ಗೆಯೂ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳು ಗಮನಕ್ಕೆ ತಂದಿದ್ದು, ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಿಬ್ಬಂಧಿಗಳ ವೇತನ ಸಕಾಲದಲ್ಲಿ ಮಾಡುವಂತೆ ಸೂಚನೆ ನೀಡಲಾಗುವುದು ಎಂದವರು ನುಡಿದರು.
ವಿವಿಧ ಇಲಾಖೆಗಳ ಕಟ್ಟಡಗಳಲ್ಲಿ ಶೌಚಾಲಯ ವ್ಯವಸ್ಥೆಯ ಕೊರತೆ, ಕಟ್ಟಡದ ಮೇಲ್ಭಾಗದಲ್ಲಿ ಗಿಡಗಂಟೆಗಳು ಬೆಳೆದಿರುವುದು, ಆವರಣದಲ್ಲಿ ಕಳೆ ಬೆಳೆದಿರುವುದು, ಕೊಠಡಿಗಳಲ್ಲಿ ಬಳಕೆಯಾಗದ ವಸ್ತುಗಳನ್ನು ಸಂಗ್ರಹಿಸಿರುವುದು, ಅನುಪಯುಕ್ತ ವಾಹನಗಳನ್ನು ವಿಲೇಮಾಡದೆ ಉಳಿಸಿಕೊಂಡಿರುವುದು, ಇಂತಹ ಹಲವು ಕಾರಣಗಳಿಂದ ಕಟ್ಟಡದ ಅಂದ ಹಾಳಾಗುತ್ತಿದೆ. ಇಂತಹವುಗಳಿಂದ ಕಟ್ಟಡಗಳನ್ನು ಸುಸ್ಥಿತಿಯಲ್ಲಿಡಲು, ಅನುಪಯುಕ್ತ ವಸ್ತುಗಳನ್ನು ವಿಲೆಮಾಡಲು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳ ಜಾಗ ಒತ್ತುವರಿಯಾಗುತ್ತಿರುವ ಪ್ರಕರಣಗಳು ಅಲ್ಲಲ್ಲಿ ಆಗಾಗ್ಗೆ ಕೇಳಿ ಬರುತ್ತಿವೆ. ಅದಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಿ, ಸರ್ವೇ ಮಾಡಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಆರಂಭದ ಹಂತವಾಗಿ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸೇರಿದಂತೆ ಆಯ್ದ ಹತ್ತು ಇಲಾಖೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದವರು ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ನಿವೃತ್ತ ನೌಕರರ ಪಿಂಚಣಿ ಕಡತಗಳ ವಿಲೇವಾರಿಯಲ್ಲಿ ಅನಗತ್ಯವಾಗಿ ವಿಳಂಬವಾಗುತ್ತಿವೆ. ನೌಕರರ ಬಡ್ತಿ, ಜೇಷ್ಟತೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವಂತೆ ಹಾಗೂ ಏಕಗವಾಕ್ಷಿ ಪದ್ದತಿಯಲ್ಲಿ ಪಿಂಚಣಿ ಕಡತಗಳನ್ನು ಇತ್ಯರ್ಥಪಡಿಸಲು ಮನವಿ ಮಾಡಿದರು.
ಕರ್ತವ್ಯ ನಿರತ ಕಂದಾಯ ಮತ್ತು ಅರಣ್ಯ ನೌಕರರ ಮೇಲೆ ಪ್ರಕರಣಗಳನ್ನು ದಾಖಲಿಸುವ ಮುನ್ನ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನಂತರ ನಿರ್ಣಯ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದ ಅವರು, ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರು ತಮ್ಮ ಅಹವಾಗಲುಗಳನ್ನು ಸಲ್ಲಿಸಲು ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ತಪ್ಪಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಕೇಂದ್ರಕ್ಕೆ ಹೋದಾಗ ಅಹವಾಲುಗಳನ್ನು ಆಲಿಸಬೇಕು. ಅದಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಕೇಂದ್ರಕ್ಕೆ ಭೇಟಿ ನೀಡುವ ದಿನಾಂಕವನ್ನು ಸಂಬಂಧಿಸಿದ ನೌಕರರಿಗೆ ತಿಳಿಸುವಂತೆ ಕೋರಿದರು.
ಜಿಲ್ಲೆಯಲ್ಲಿ ಗುರುಭವನ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ 2ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಕಟ್ಟಡ ನಿರ್ಮಿಸುವ ಸ್ಥಳದಲ್ಲಿನ ಹಳೆ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯ ಬಾಕಿ ಉಳಿದಿದೆ. ಅಲ್ಲದೇ ಈ ಹಿಂದೆ ಅನೇಕಬಾರಿ ಮನವಿ ಮಾಡಲಾಗಿದೆ. ಈ ಸಂಬಂಧ ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದರು.
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ-ಸಿಬ್ಬಂಧಿಗಳಿಗೆ ಗುಣಮಟ್ಟದ ತರಬೇತಿ ನೀಡಲು ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಉತ್ತಮ ತರಬೇತಿಯನ್ನು ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಅವರು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ ಜಿ., ನೌಕರರ ಸಂಘದ ಬೆಂಗಳೂರು ವಿಭಾಗದ ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್ಕುಮಾರ್, ಐ.ಪಿ.ಶಾಂತರಾಜ್ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು, ತಾಲೂಕು ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.