ಯುರೋಪ್ ರಾಷ್ಟçದಿಂದ ಭಾರತ ದೇಶಕ್ಕೆ ೧೭ನೇ ಶತಮಾನದಲ್ಲಿ ಪರಿಚಯವಾದ ದಿನದಿಂದ ಇದುವರೆಗೂ ಆಲೂಗಡ್ಡೆ ಬೆಳೆಯಲು ಗಡ್ಡೆಗಳನ್ನು ಬಳಸಿ ಬೆಳಯಲಾಗುತ್ತಿದೆ. ಈ ಒಂದು ಪದ್ಧತಿಯಲ್ಲಿ ಉತ್ಪಾದಿಸಿದ ಶೇಖಡಾ ೧೦೦ ರಷ್ಟು ಗಡ್ಡೆಗಳಲ್ಲಿ ಸುಮಾರು ೨೦ ರಿಂದ ೨೫ ರಷ್ಟು ಗಡ್ಡೆಗಳನ್ನು ಬೆಳೆ ಬೆಳೆಯಲು ಬೀಜ ಗಡ್ಡೆಗಳಾಗಿ ಉಪಯೋಗಿಸಲಾಗುತ್ತಿದೆ. ಈ ೨೫ ರಷ್ಟು ಬಿತ್ತನೆ ಗಡ್ಡೆಗಳು ಬೀಜೋತ್ಪಾದನೆಗೆ ಬಳಸಿ ಸೂಕ್ತವಾದ ಸ್ಥಳವೆಂದು ಗುರುತಿಸಿರುವ ಪಂಜಾಬ್‌ನ ಜಲಂದರ್ ಪ್ರದೇಶದಲ್ಲಿ ಉತ್ಪಾದಿಸಿ ಇಡೀ ದೇಶಕ್ಕೆ ಪೂರೈಕೆಯಾಗುತ್ತಿದೆ. ಈ ಪ್ರದೇಶದಲ್ಲಿ ಬೀಜೋತ್ಪಾದನೆ ಮಾಡಲು ಆಲೂಗಡ್ಡೆ ಬೀಜೋತ್ಪಾದಕರು ತಳಿವರ್ಧಕ ಬೀಜವನ್ನು ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ, ಶಿಮ್ಲಾದಿಂದ ಖರೀದಿಸುತ್ತಾರೆ. ಈ ಪದ್ಧತಿಯು ಹಲವಾರು ದಶಕಗಳಿಂದ ಮುಂದುವರಿದುಕೊಂಡು ಬರುತ್ತಿದೆ. ಆದರೆ ಇತ್ತೀಚಿಗೆ ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ, ಶಿಮ್ಲಾದಿಂದ ಗಡ್ಡೆಗಳಲ್ಲಿ ಉಬ್ಬಿದ ಕಣ್ಣುಗಳನ್ನು ಅಂಗಾಂಶ ಕೃಷಿಯಿಂದ ಬಾಟಲಿಗಳ ಮೂಲಕ ಖರೀದಿಸಿ, ಅವುಗಳಿಂದ ಇನ್ನಷ್ಟು ಅಂಗಾಂಶ ಕೃಷಿ ಸಸಿಗಳನ್ನು ಉತ್ಪಾದಿಸಿ ತದನಂತರ ಹಸಿರು ಮನೆಗಳಲ್ಲಿ ಏರೋಪೊನಿಕ್ಸ್ ಪದ್ಧತಿಯಲ್ಲಿ ಸಣ್ಣ ಗಡ್ಡೆಗಳನ್ನು ಉತ್ಪಾದಿಸುತ್ತಾರೆ. ನಂತರ ಬೀಜೋತ್ಪಾದಕರು ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೀಜೋತ್ಪಾದನೆ ಮಾಡಲು ಸಣ್ಣ ಗಡ್ಡೆಗಳನ್ನು ಇತರೆ ಬೀಜೋತ್ಪಾದಕರಿಗೆ ಮಾರಾಟ ಮಾಡುವುದರ ಜೊತೆಗೆ ಸ್ವಯಂ ಬೀಜೋತ್ಪಾದಕ ಕಂಪನಿಗಳು ಆರರಿಂದ ಏಳು ಸಂತಾನದವರೆಗೆ ಬೀಜೋತ್ಪಾದನೆ ಮುಂದುವರಿಸುತ್ತಾರೆ.
ತದನಂತರ ಉತ್ಪಾದಿಸಿದ ಬೀಜ ಗಡ್ಡೆಗಳನ್ನು ದೇಶಾದ್ಯಂತ ಆಲೂಗಡ್ಡೆ ಬೆಳೆಯುವ ಪ್ರದೇಶಗಳಿಗೆ ಪೂರೈಸಲಾಗುತ್ತಿದೆ. ಹಾಗೆಯೇ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆಯುವ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ ಮತ್ತು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಲೂಗಡ್ಡೆ ಬೆಳೆಗಾರರು ಸಂಪೂರ್ಣವಾಗಿ ಜಲಂಧರ್‌ನಲ್ಲಿ ಉತ್ಪಾದಿಸುವ ಬೀಜ ಗಡ್ಡೆಗಳ ಮೇಲೆ ಅವಲಂಭಿತರಾಗಿರುತ್ತಾರೆ. ಆದರೆ ಇತ್ತೀಚೆಗೆ ಜಲಂಧರ್‌ನಿಂದ ಪೂರೈಕೆಯಾಗುತ್ತಿರುವ ಗಡ್ಡೆಗಳು ಗುಣಮಟ್ಟ ಕಳೆದುಕೊಂಡಿದ್ದು ಜೊತೆಗೆ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿರುವುದು ರೈತರಿಗೆ ಕ್ಲಿಷ್ಟಕರವಾಗಿರುತ್ತದೆ. ಈ ಕಾರಣಗಳಿಂದ ರೈತರು ಬೀಜ ಖರೀಧಿಸಲು ಕಂಗಾಲಾಗಿದ್ದಾರೆ ಮತ್ತು ದುಬಾರಿ ಬೆಲೆಯಾದ ಬೀಜ ಗಡ್ಡೆಗಳಿಂದ ಆರ್ಥಿಕವಾಗಿ ಬೆಳೆ ಬೆಳೆಯಲು ವಿಫಲರಾಗಿದ್ದಾರೆ. ಅಲ್ಲದೇ ಪ್ರತಿವರ್ಷ ಬಿತ್ತನೆ ಸಮಯದಲ್ಲಿ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆಯಿಂದ ಅಥವಾ ಬಿತ್ತನೆ ಬೀಜದ ಲಭ್ಯತೆಯ ಕೊರತೆ ಅಥವಾ ದುಬಾರಿ ಬೆಲೆ ಏರಿಕೆಯಂತ ವಿಚಾರಗಳಿಂದ ಪ್ರಮುಖ ಆಲೂಗಡ್ಡೆ ಬೆಳೆಯುವ ಹಾಸನ ಜಿಲ್ಲೆಯಾದ್ಯಂತ ಗಲಭೆಯಾಗುತ್ತಿರುವುದು ಪ್ರತಿ ವರ್ಷ ಸಹಜವಾಗಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಪೂರೈಕೆಯಲ್ಲಾಗುತ್ತಿರುವ ತಾರತಮ್ಯಗಳನ್ನು ಪರಿಗಣಿಸಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯು ನೂತನ ಸಂಶೋಧನೆಯನ್ನು ರೂಪಿಸಿ ಅಂಗಾಂಶ ಕೃಷಿಯಿಂದ ಕುಡಿ ಕಾಂಡ ಕಡ್ಡಿಗಳ ಸಸ್ಯಾಭಿವೃದ್ಧಿ ಮಾಡಲು ಪ್ರಾದೇಶಿಕ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಜಿ.ಕೆ.ವಿ.ಕೆ, ಬೆಂಗಳೂರು ಮತ್ತು ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಹಾಸನದಲ್ಲಿ ಇಸವಿ-೨೦೧೭ರಲ್ಲಿ ರಾಜ್ಯ ಸರ್ಕಾರದ ರಾಷ್ಟಿಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಅಂತರಾಷ್ಟಿಯ ಆಲೂಗಡ್ಡೆ ಸಂಸ್ಥೆ ಪೆರುರವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದಲ್ಲಿ ಬೆಳೆಯುವ ಪ್ರದೇಶಕ್ಕೆ ಸಾಕಾಗುವಷ್ಟು ಆಲೂಗಡ್ಡೆ ಬೀಜ ಉತ್ಪಾದಿಸುವ ಗುರಿಯೊಂದಿಗೆ ಅಂಗಾAಶ ಕೃಷಿ ತಂತ್ರಜ್ಞಾನದಿಂದ ಕುಡಿ ಕಾಂಡ ಕಡ್ಡಿಗಳಿಂದ ಹಾಸನ, ಚಿಕ್ಕಮಗಳೂರು ಮತ್ತು ಕೆಲವೊಂದು ಗುರುತಿಸಿದ ಜಿಲ್ಲೆಗಳಲ್ಲಿ ಬೀಜೋತ್ಪಾದನೆ ಕೈಗೊಳ್ಳುವುದು ಒಂದು ಮಹತ್ವಕಾಂಕ್ಷಿಯ ಯೋಜನೆಯಾಗಿರುತ್ತದೆ.ಅಂಗಾಂಶ ಕೃಷಿಯಿಂದ ಆಲೂಗಡ್ಡೆ ಸಸಿಗಳ ಉತ್ಪಾದನೆ :
ಈ ಯೋಜನೆಯಡಿಯಲ್ಲಿ ಅಂಗಾಶ ಕೃಷಿ ಪ್ರಯೋಗಾಲಯ ಮತ್ತು ಹಸಿರು ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಇವುಗಳಲ್ಲಿ ಅಂಗಾAಶ ಕೃಷಿ ಸಸಿಗಳನ್ನು ಉತ್ಪಾದಿಸಿ ನಂತರ ತಾಯಿ ಮಡಿಗಳಲ್ಲಿ ನಾಟಿ ಮಾಡಿ ೨೦ ದಿವಸಗಳ ನಂತರ ಎಳೆಯ ಮೂರು ಎಲೆಗಳುಳ್ಳ ಕುಡಿ ಕಾಂಡ ಕಡ್ಡಿಗಳನ್ನು ಚಿವುಟಲಾಗುತ್ತದೆ, ತರುವಾಯ ಪ್ರತಿವಾರಕ್ಕೊಮ್ಮೆ ೭ ರಿಂದ ೮ ಕುಡಿ ಕಾಂಡ ಕಡ್ಡಿಗಳನ್ನು ಚಿವುಟಬಹುದು ನಂತರ ಅವುಗಳನ್ನು ೯೮ ಕುಳಿಗಳುಳ್ಳ ಪ್ಲಾಸ್ಟಿಕ್ ತಬಕಗಳನ್ನು ಬಳಸಿ ಅದಕ್ಕೆ ಚೆನ್ನಾಗಿ ಕಳಿತ ಕೊಕೋಪಿಟ್ ಮಾದ್ಯಮವನ್ನು ತುಂಬಿ ಕುಡಿಕಾಂಡ ಕಡ್ಡಿಗಳನ್ನು ನಾಟಿ ಮಾಡಿ ಸುಮಾರು ೧೨ ರಿಂದ ೧೫ ದಿವನಸಗಳ ಅವಧಿಯಲ್ಲಿ ಬೇರು ಬಿಟ್ಟು ಸಸಿಗಳು ಕ್ಷೇತ್ರದಲ್ಲಿ ನಾಟಿ ಮಾಡಲು ಸಿದ್ಧಗೊಳ್ಳುತ್ತವೆ.

ಹಸಿರು ಮನೆಗಳಲ್ಲಿ ತಾಯಿ ಗಿಡಗಳ ಅಭಿವೃದ್ಧಿ:
ಈ ರೀತಿಯ ಸಸ್ಯಾಭಿವೃದ್ಧಿ ಚಟುವಟಿಕೆಯಲ್ಲಿ ಅಂಗಾಂಶ ಕೃಷಿ ಸಸಿಗಳ ಉತ್ಪಾದನೆ, ಅಂಗಾಂಶ ಕೃಷಿ ಪ್ರಯೋಗಾಲಯದಲ್ಲಿ ದೊಡ್ಡ ಪ್ರಮಾಣದ ಮರು ಉತ್ಪಾದನೆ, ನಂತರ ಹಸಿರು ಮನೆಗಳಲ್ಲಿ ಒಂದು ಮೀಟರ್ ಅಗಲದ ಮತ್ತು ಅನುಕೂಲಕ್ಕೆ ತಕ್ಕಂತೆ ಉದ್ದದ ತಾಯಿ ಮಡಿಗಳನ್ನು ತಯಾರಿಸಿ ಸುತ್ತಲೂ ಇಟ್ಟಿಗೆಗಳನ್ನು ಜೋಡಿಸಿ ಮಡಿಯಲ್ಲಿ ೪ ರಿಂದ ೫ ಇಂಚಿನಷ್ಟು ತೆಂಗಿನ ನಾರಿನ ಮಾದ್ಯಮವನ್ನು ತುಂಬಿ ೫ ಸೆಂ.ಮೀ. ಅಥವಾ ೧೦ ಸೆಂ.ಮೀ. ಸಸಿಯಿಂದ ಸಸಿಗೆ ಅಥವಾ ಸಾಲಿನಿಂದ ಸಾಲಿಗೆ ಅಂತರ ಕೊಟ್ಟು ಅಂಗಾಂಶ ಕೃಷಿ ಸಸಿಗಳನ್ನು ನಾಟಿ ಮಾಡಬೇಕು, ತದನಂತರ ನಾಟಿ ಮಾಡಿದ ದಿನದಿಂದ ೧೮ ರಿಂದ ೨೦ ದಿವಸಗಳ ಅವಧಿಯಲ್ಲಿ ಮೊದಲನೇ ಕುಡಿ ಕಾಂಡ ಕಡ್ಡಿಯನ್ನು ಕತ್ತರಿಸಲು ಸಿದ್ಧವಾಗಿರುತ್ತದೆ. ಅನಂತರ ವಾರದಲ್ಲಿ ಪ್ರತಿ ಅಂಗಾಂಶ ಕೃಷಿ ಸಸಿಯು ೭ ರಿಂದ ೮ ಎಳೆಯ ಕುಡಿಕಾಂಡ ಸಸಿಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಈ ಸಾಮರ್ಥ್ಯದ ಉತ್ಪಾದನೆ ಸುಮಾರು ೩ ರಿಂದ ೪ ತಿಂಗಳು ಕಾಲ ಮುಂದುವರೆಯುತ್ತದೆ. ಈ ಬೆಳವಣೆಗೆಯ ಅವಧಿಯಲ್ಲಿ ಬಹುಮುಖ್ಯವಾಗಿ ಪೋಷಕಾಂಶಗಳ ಪೂರೈಕೆ, ರೋಗ ಮತ್ತು ಕೀಟಗಳ ನಿರ್ವಹಣೆಯು ತುಂಬಾ ಅತ್ಯಗತ್ಯವಾಗಿರುತ್ತದೆ. ಏಕೆಂದರೆ ಹೆಚ್ಚಿನ ಜಾಗೃತಿ ವಹಿಸಿ ರಸ ಹೀರುವ ಕೀಟ ವಾಹಕಗಳಾದ ಹೇನು, ಬಿಳಿನೊಣ ಮತ್ತು ಜಿಗಿಹುಳುಗಳಿಂದ ನಂಜಾಣು ರೋಗಗಳು ಹರಡುವುದನ್ನು ತಪ್ಪಿಸಬಹುದಾಗಿದೆ. ಎಳೆ ಕುಡಿ ಕಾಂಡ ಕಡ್ಡಿಗಳನ್ನು ತಾಯಿ ಗಿಡಗಳಿಂದ ಕತ್ತರಿಸಿದ ನಂತರ ನೀರು ಮತ್ತು ಶಿಲೀಂದ್ರ ನಾಶಕವಿರುವ ದ್ರಾವಣದಲ್ಲಿ ಅದ್ದಿ ಅವುಗಳನ್ನು ಒಣಗದಂತೆ ಕಾಪಾಡಿಕೊಳ್ಳಬೇಕು.
ಹಸಿರುಮನೆಗಳಲ್ಲಿ ಕುಡಿ ಕಾಂಡ ಸಸಿಗಳ ನರ್ಸರಿ ಉತ್ಪಾದನೆ:
ತದನಂತರ ಈ ಒಂದು ಕುಡಿ ಕಾಂಡ ಸಸಿಗಳನ್ನು ಚೆನ್ನಾಗಿ ಕಳಿತಿರುವ ತೆಂಗಿನ ನಾರಿನ ಪುಡಿಯ ಮಾಧ್ಯಮವನ್ನು ತಬಕಗಳಲ್ಲಿ ತುಂಬಿ ನಾಟಿ ಮಾಡಬೇಕು. ಸುಮಾರು ೧೨ ರಿಂದ ೧೫ ದಿವಸಗಳ ನಂತರ ನಾಟಿ ಮಾಡಿದ ಸಸಿಗಳು ಸಂಪೂರ್ಣವಾಗಿ ಬೇರು ಬಿಟ್ಟು ಕ್ಷೇತ್ರಗಳಲ್ಲಿ ನಾಟಿ ಮಾಡಲು ಸಿದ್ದಗೊಳ್ಳುತ್ತವೆ. ಈ ಒಂದು ಅವಧಿಯಲ್ಲಿ ಪೋಷಕಾಂಶಗಳು, ರೋಗ ಮತ್ತು ಕೀಟಗಳ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗುತ್ತದೆ. ಈ ಒಂದು ಪದ್ಧತಿಯಲ್ಲಿ ಸುಮಾರು ೯೫ ರಿಂದ ೯೮ ರಷ್ಟು ಸಸಿಗಳು ತಬಕಗಳಲ್ಲಿ ಬದುಕುಳಿದು ಅಭಿವೃದ್ದಿಗೊಳ್ಳುತ್ತವೆ.

ಹಸಿರುಮನೆಗಳಲ್ಲಿ ಕುಡಿ ಕಾಂಡ ಸಸಿಗಳ ಸಸ್ಯಾಭಿವೃದ್ಧಿಯ ಆರ್ಥಿಕತೆ:
ಅಂದಾಜು ಒಂದು ಸಸಿ ಉತ್ಪಾದಿಸಲು ಒಟ್ಟು ಉತ್ಪಾದನಾ ವೆಚ್ಚವು ೩೦ ಪೈಸೆ ತಗಲಬಹುದು. ಇದರ ಜೊತೆಗೆ ಹೆಚ್ಚುವರಿಯಾಗಿ ೩೦ ಪೈಸೆ ಸೇರಿಸಿದರೆ ಉತ್ತಮ ಲಾಭ ಪಡೆಯಲು ಸಸ್ಯಗಾರರಿಗೆ ಅನುಕೂಲವಾಗುತ್ತದೆ. ಒಟ್ಟಾರೆ ಪ್ರತಿ ಸಸಿಯನ್ನು ೬೦ ಪೈಸೆಗೆ ಮಾರಾಟ ಮಾಡಿದರೆ ಸೂಕ್ತವೆನಿಸುತ್ತದೆ. ಈ ರೀತಿಯ ಸಸ್ಯಾಭಿವೃದ್ಧಿಯು ಒಂದು ಉದ್ಯಮವಾಗಿ ಮಾರ್ಪಟಾಗಿ ಆರ್ಥಿಕವಾಗಿ ಲಾಭಗಳಿಸಲು ತುಂಬಾ ನೆರವಾಗುತ್ತದೆ. ಹಾಗೆಯೇ ಕುಡಿ ಕಾಂಡ ಕಡ್ಡಿಗಳ ನರ್ಸರಿ ಉತ್ಪಾದನೆಯಿಂದ ಉತ್ಪಾದಕರಿಗೆ ದೊಡ್ಡ ಉದ್ಯೋಗವಕಾಶ ಸೃಷ್ಟಿಯಾಗಿ ಹಾಸನ, ಚಿಕ್ಕಮಗಳೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವರ್ಷ ಪೂರ್ತಿ ಮುಂದುವರಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗೆಯೇ ಇದರ ಜೊತೆಯಾಗಿ ಸಾಮಾನ್ಯವಾಗಿ ನಾಟಿ ಮಾಡುವ ತರಕಾರಿಗಳಾದ ಟೊಮ್ಯಾಟೊ, ಬಜ್ಜಿ ಮೆಣಸಿನಕಾಯಿ, ಬದನೆ, ಮೆಣಸಿನಕಾಯಿ, ಎಲೆಕೋಸು, ಹೂಕೋಸು ಮತ್ತು ಬಳ್ಳಿ ತರಕಾರಿಗಳನ್ನು ಉತ್ಪಾದಿಸಿ ಹೆಚ್ಚಿನ ಲಾಭಗಳಿಸಬಹುದಾಗಿದೆ. ಇನ್ನೂ ಭವಿಷ್ಯದಲ್ಲಿ ಆಲೂಗಡ್ಡೆ ಬೆಳೆಯುವ ಪ್ರದೇಶದಲ್ಲಿ, ಕುಡಿಕಾಂಡ ಸಸಿಗಳ ಉತ್ಪಾದನೆ ಬಹು ದೊಡ್ಡ ಉದ್ಯಮವಾಗಲಿದೆ ಎಂದರೆ ತಪ್ಪಾಗಲಾರದು. ಜೊತೆಗೆ ಕುಡಿಕಾಂಡ ಕಡ್ಡಿಗಳನ್ನು ಬಳಸಿ ಬೀಜೋತ್ಪಾದನೆ ಅಥವಾ ತರಕಾರಿಗಾಗಿ ಆಲೂಗಡ್ಡೆ ಉತ್ಪಾದಿಸಿದ್ದಲ್ಲಿ ಮತ್ತೊಂದು ದೊಡ್ಡ ವ್ಯಾಪಾರ ವೈಟಾಟಾಗಿ ಮಾರ್ಪಟ್ಟು ಆರ್ಥಿಕವಾಗಿ ಹೆಚ್ಚಿನ ಲಾಭಗಳಿಸಲು ಸಾದ್ಯವಾಗುತ್ತದೆ. ಆದರೆ ಬಿತ್ತನೆ ಬೀಜವಾಗಿ ಉತ್ಪಾದಿಸುವುದಾದರೆ ಹೆಚ್ಚಿನ ಕಾಳಜಿ ವಹಿಸಿ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿ ನಂಜಾಣು ರೋಗಮುಕ್ತ ಗಡ್ಡೆಗಳನ್ನು ಉತ್ಪಾದಿಸುವುದು ಪ್ರಮುಖ ಗುರಿ ಮತ್ತು ಆದ್ಯತೆಯಾಗಿರುತ್ತದೆ. ಈ ಒಂದು ನವೀನ ತಂತ್ರಜ್ಞಾನದಿಂದ ಕೇವಲ ಒಂದು ವರ್ಷದಲ್ಲಿ ಶೂನ್ಯ ಸಂತಾನ ಬೀಜ ಗಡ್ಡೆಗಳನ್ನು ಉತ್ಪಾದಿಸಲು ಸಾಧ್ಯವಾಗುವಂತಹ ವೈಜ್ಞಾನಿಕತೆಯಾಗಿರುತ್ತದೆ. ಅಲ್ಲದೇ ಬೀಜೋತ್ಪಾದನೆ ನಂತರ ಬೀಜ ಗಡ್ಡೆಗಳನ್ನು ಸಾಮಾನ್ಯ ಗಡ್ಡೆಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅವಕಾಶ ಸಿಗಲಿದೆ. ಮತ್ತೊಂದು ಸದಾವಕಾಶವೆಂದರೆ ಹಾಸನ ಮತ್ತು ಚಿಕ್ಕಮಗಳೂರು ಪ್ರಾಂತ್ಯದ ಆಲೂಗಡ್ಡೆ ಬೆಳೆಗಾರರು ಮುಂಗಾರು ಮತ್ತು ಹಿಂಗಾರು ಎರಡು ಹಂಗಾಮಿನಲ್ಲಿ ಬೆಳೆಯಲು ವಿಪುಲ ಅವಕಾಶವಿರುತ್ತದೆ.

ಆಲೂಗಡ್ಡೆ ಕುಡಿ ಕಾಂಡ ಕಡ್ಡಿಗಳ ಸಸ್ಯಾಭಿವೃಧಿಯಿಂದಾಗುವ ಉಪಯೋಗಗಳು:
• ಅಂಗಾಂಶ ಕೃಷಿಯಿಂದ ಅಭಿವೃದ್ಧಿಪಡಿಸುವುದರಿಂದ ನಂಜಾಣು ರೋಗಮುಕ್ತ ಬಿತ್ತನೆ ಗಡ್ಡೆಗಳನ್ನು ಉತ್ಪಾದಿಸಬಹುದು.
• ಅತಿ ಕಡಿಮೆ ಅವಧಿಯಲ್ಲಿ ಶೂನ್ಯ ಸಂತಾನ ಗಡ್ಡೆಗಳನ್ನು ಬಿತ್ತನೆ ಗಡ್ಡೆಗಳಾಗಿ ಉತ್ಪಾದಿಸಬಹುದು.
• ಇಡೀ ವರ್ಷ ಪೂರ್ತಿ ಸಸಿಗಳ ಉತ್ಪಾದನೆ ಮತ್ತು ಲಭ್ಯತೆಯಿಂದ ಬೆಳೆ ಬೆಳೆಯುವ ಅವಧಿ ಮತ್ತು ಉತ್ಪಾದನೆಯು ಸಹ ಹೆಚ್ಚಿಸಬಹುದು.
• ಸಂರಕ್ಷಿತ ವಲಯದಲ್ಲಿ ವರ್ಷ ಪೂರ್ತಿ ಸಸ್ಯಾಭಿವೃದ್ಧಿ ಮಾಡಲು ಸಧಾವಕಾಶ.
• ನರ್ಸರಿ ಉತ್ಪಾದನೆಯಲ್ಲಿ ಸಸಿಗಳು ಬದುಕುಳಿಯುವ ಪ್ರಮಾಣ ಶೇ.೯೫ ರಿಂದ ೯೮ರಷ್ಟು.
• ಕಡಿಮೆ ಬೆಲೆಯಲ್ಲಿ ಬೀಜ ಗಡ್ಡೆಗಳು ಲಭ್ಯವಾಗುವ ಸಾಧ್ಯತೆಗಳು ಹೆಚ್ಚಾಗಲಿವೆ.
• ನರ್ಸರಿ ಉತ್ಪಾದನೆ ಮತ್ತು ಬೀಜೋತ್ಪಾದನೆಯಿಂದ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಠಿಯಾಗಲಿದೆ.
• ಕುಡಿ ಕಾಂಡ ಕಡ್ಡಿಗಳ ನರ್ಸರಿ ಉತ್ಪಾದನೆಯಿಂದ ಮತ್ತು ಬೀಜೋತ್ಪಾದೆನಯಿಂದ ಆರ್ಥಿಕವಾಗಿ ಹೆಚ್ಚಿನ ಲಾಭಗಳಿಸಬಹುದು.
• ಈ ನವೀನ ತಂತ್ರಜ್ಞಾನದಿAದ ಕರ್ನಾಟಕ ರಾಜ್ಯದಲ್ಲಿ ಬೀಜೋತ್ಪಾದನೆ ಮಾಡಲು ವಿಪುಲ ಸೃಷ್ಠಿಯಾಗಲಿದೆ.
ಈ ವಿಚಾರವಾಗಿ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಸೋಮನಹಳ್ಳಿಕಾವಲು ಹಾಸನದಲ್ಲಿ ಕುಫ್ರಿ ಜ್ಯೋತಿ ಮತ್ತು ಕುಫ್ರಿ ಹಿಮಾಲಿನಿ ತಳಿಯ ಕುಡಿ ಕಾಂಡ ಸಸಿಗಳನ್ನು ಬಳಸಿ ಮೌಲ್ಯ ಮಾಪನ, ವಿವಿಧ ಕಾಲಗಳಿಗೆ ಹೊಂದಾಣಿಕೆ, ಗಡ್ಡೆಗಳ ಸಂಖ್ಯೆ, ಒಟ್ಟು ಇಳುವರಿ, ನಂಜಾಣು ರೋಗಕ್ಕೆ ತುತ್ತಾದ ಗಿಡಗಳ ಸಂಖ್ಯೆ ಮತ್ತು ಇತರೆ ವಿಷಯಗಳ ಬಗ್ಗೆ ಅಧ್ಯಯನವನ್ನು ಹಿಂಗಾರು-೨೦೧೯, ಮುಂಗಾರು-೨೦೨೦ ಮತ್ತು ಹಿಂಗಾರು ೨೦೨೦ ರಲ್ಲಿ ರೈತರ ಮತ್ತು ಸಂಶೋಧನಾ ಕೇಂದ್ರದಲ್ಲಿ ಧೀರ್ಘವಾಗಿ ಸಂಶೋಧನೆಯನ್ನು ಕೈಗೊಂಡು ಮುಂದುವರಿಸಲಾಗುತ್ತಿದೆ. ಇದರ ಮೇಲಾಗಿಯು ಮೊದಲನೇ ಹಂತದಲ್ಲಿ ಪ್ರಯೋಗಾಲಯದಲ್ಲಿ ಅಂಗಾAಶ ಕೃಷಿ ಸಸಿಗಳ ಉತ್ಪಾದನೆ, ಎರಡನೇ ಹಂತದಲ್ಲಿ ಹಸಿರು ಮನೆಗಳಲ್ಲಿ ಕುಡಿ ಕಾಂಡ ಕಡ್ಡಿಗಳ ಉತ್ಪಾದನೆಯು ಪರಿಪೂರ್ಣ ಸಾಧನೆಯಾಗಿರುತ್ತದೆ. ಹಾಗೆಯೇ ಕುಡಿ ಕಾಂಡ ಕಡ್ಡಿಗಳನ್ನು ಕ್ಷೇತ್ರಗಳಲ್ಲಿ ನಾಟಿ ಮಾಡಿ ಅವುಗಳಿಂದ ಬಂದ ಇಳುವರಿ ಫಲಿತಾಂಶಗಳು ಹೆಚ್ಚು ಸಮಾಧಾನಕರವಾಗಿರುತ್ತದೆ. ಹಾಗೆಯೇ ಹಿಂದಿನ ವರ್ಷದ ಅಧ್ಯಯನಗಳ ಫಲಿತಾಂಶಗಳ ಪ್ರಕಾರ ಪ್ರತಿ ಗಿಡದಿಂದ ಸರಾಸರಿ ೮ ರಿಂದ ೧೦ ಗಡ್ಡೆಗಳು ಮತ್ತು ೩೦ ರಿಂದ ೫೦ ಗ್ರಾಂ ತೂಕವಿರುವ ಬೀಜಕ್ಕಾಗಿ ಬಳಸಲು ಸೂಕ್ತವಾಗಿರುವ ಗಡ್ಡೆಗಳನ್ನು ಬೆಳೆಯಲ್ಲಿ ಗಮನಿಸಲಾಯಿತು. ಅದರಂತೆ ಅಂದಾಜು ರೈತರು ಒಂದು ಎಕರೆ ಪ್ರದೇಶದಲ್ಲಿ ೮ ರಿಂದ ೧೦ ಟನ್‌ಷ್ಟು ಗಡ್ಡೆಯ ಇಳುವರಿ ಪಡೆಯಲು ಸಾಧ್ಯವಾಗಬಹುದು. ಈ ಸಾಮರ್ಥ್ಯದ ಇಳುವರಿ ಪಡೆಯಲು ವೈಜ್ಞಾನಿಕ ಅಂತರವಾದ ೬೦ ಸೆಂ.ಮೀ x ೨೦ ಸೆಂ.ಮೀ ಅಳವಡಿಸಿ ಸುಮಾರು ೩೩ ಸಾವಿರ ಸಸಿಗಳನ್ನು ನಾಟಿ ಮಾಡಬಹುದಾಗಿದೆ. ಇದರಿಂದ ರೈತರು ಒಂದು ಎಕರೆಗೆ ಒಟ್ಟು ೬೦,೦೦೦/- ಬಂಡವಾಳ ಹೂಡಿದರೆ ರೂ. ೧,೬೦,೦೦೦/- ರಷ್ಟು ಒಟ್ಟು ಲಾಭಗಳಿಸಬಹುದು. ಇನ್ನೂ ಅಂದಾಜು ರೂ. ೧,೦೦,೦೦೦/- ನಿವ್ವಳ ಲಾಭಗಳಿಸಬಹುದಾಗಿದೆ. ಜೊತೆಗೆ ಉತ್ಪಾದಿಸಿದ ಬೀಜ ಗಡ್ಡೆಗಳನ್ನು ಪ್ರತಿ ಕ್ವಿಂಟಾಲ್‌ಗೆ ರೂ. ೨,೦೦೦/- ದಂತೆ ಮಾರಾಟ ಮಾಡಿದರೂ ಸಹ ಇನ್ನೂ ಹೆಚ್ಚು ಲಾಭದಾಯಕವಾಗಿರುತ್ತದೆ. ಮುಂದುವರಿದು ಪ್ರಗತಿಯಲ್ಲಿರುವ ಸಂಶೋಧನೆಯು ಒಂದೆರೆಡು ವರ್ಷಗಳಲ್ಲಿ ಅಧ್ಯಯನದ ಫಲಿತಾಂಶಗಳು ತೃಪ್ತಿಕರವಾಗಿದ್ದಲ್ಲಿ, ಈ ವೈಜ್ಞಾನಿಕತೆಯನ್ನು ವಿಸ್ತರಣೆ ಚಟುವಟಿಕೆ ಮೂಲಕ ವ್ಯಾಪಕವಾಗಿ ರೈತರಿಗೆ ಪರಿಚಯಿಸಿ ಹೆಚ್ಚಿನ ಪ್ರದೇಶದಲ್ಲಿ ಬೀಜೋತ್ಪಾದನೆ ಮಾಡಲು ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಬಲವರ್ಧನೆಗೊಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ:

ಅಮರನಂಜುಂಡೇಶ್ವರ, ಹೆಚ್, ಮಹೇಶ್, ವೈ.ಎಸ್, ಸೌಮ್ಯ ಶೆಟ್ಟಿ., ಸಂಧ್ಯಾ. ಜಿ.ಸಿ,
ಇಂದಿರೇಶ್, ಕೆ. ಎಮ್., ಮತ್ತು ಪಾಟೀಲ್, ಡಿ.ಆರ್

9481031445 / 8971383036

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ
ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಹಾಸನ

ರಾಷ್ಟಿಯ ಕೃಷಿ ವಿಕಾಸ ಯೋಜನೆ – ಆಲೂಗಡ್ಡೆ

error: Content is protected !!