News Next

ಶಿವಮೊಗ್ಗ : ಸೆಪ್ಟಂಬರ್-18: : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಸೆ.19ರ ಮೂರನೇ ಶನಿವಾರದಂದು ರಾಜ್ಯಾದ್ಯಂತ ಬೃಹತ್ ಈ-ಲೋಕ್ ಅದಾಲತ್ ಹಮ್ಮಿಕೊಂಡಿದ್ದು, ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್ ಬೌನ್ಸ್, ರಾಜೀಯಾಗಬಹುದಾದ ಕ್ರಿಮಿನಲ್ ಹಾಗೂ ಇತರೇ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ತೆಗೆದುಕೊಂಡು ಉಭು ಕಕ್ಷಿದಾರರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಕರೆಯಿಸಿಕೊಂಡು ಅವರ ಒಪ್ಪಿಯ ಪ್ರಕಾರ ರಾಜೀ ಸಂಧಾನ ಮೂಲಕ ಪ್ರಕರಣಗಳ ಇತ್ಯರ್ಥ ಮಾಡಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ಕೆ.ಎನ್. ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ.
ಇದೇ ಉದ್ದೇಶಕ್ಕಾಗಿ ವೀಡಿಯೋ ಕಾನ್ಫರೆನ್ಸ್ ನಿಯಮಾಳಿಗಳ ಪ್ರಕಾರ ಶಿವಮೊಗ್ಗದ ಜಿಲ್ಲಾ ನ್ಯಾಯಾಲಯದ ಆವರಣ, ಜಿಲ್ಲಾಧಿಕಾರಿಗಳ ಕಚೇರಿಯ ಆವರಣ, ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಕಚೇರಿಯ ಆವರಣ ಹಆಗೂ ಜಯನಗರ ಪೊಲೀಸ್ ಠಾಣೆಯ ಆವರಣದಲ್ಲಿ ವಿವಿಧ ಪ್ರಕರಣಗಳ ಕಕ್ಷಿದಾರರು ಹಾಗೂ ಅವರ ಪರ ವಕೀಲರು ವೀಡಿಯೋ ಕಾನ್ಫರೆನ್ಸ್ ಮಖೇನ ಹಾಜರಾಗಲು ರಿಮೋಟ್ ಪಾಯಿಂಟ್‍ಗಳನ್ನು ಸ್ಥಾಪಿಲಾಗಿದೆ ಎಂದು ಅವರು ತಿಳಿಸಿದ್ದಾರೆ
ಅಲ್ಲದೇ ಬ್ಯಾಂಕ್‍ಗಳಿಗೆ ಸಂಬಂಧಿಸಿದ ಸಾಲದ ಹಣ ವಸೂಲಾತಿ ಪ್ರಕರಣಗಳು, ವಿದ್ಯುಚ್ಛಕ್ತಿ ಹಾಗೂ ನ್ಯಾಯಾಲಯಕ್ಕೆ ಬರಬಹುದಾದಂತಹ ಇತರೆ ಯಾವುದೇ ಪ್ರಕರಣಗಳನ್ನು ವ್ಯಾಜ್ಯ ಪೂರ್ವ ಪ್ರಕರಣಗಳೆಂದು ಪರಿಗಣಿಸಿ, ಅವುಗಳಲ್ಲಿ ಸಹ ಉಭಯ ಕಕ್ಷಿದಾರರನ್ನು ವೀಡಿಯೋ ಕಾನ್ಫರೆನ್ಸ್ ಮುಖೇನ ಕರೆಯಿಸಿಕೊಂಡು ರಾಜೀ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸಿ ಅವಾರ್ಡ್ ಪಾಸು ಮಾಡಲಾಗುವುದು. ಅಂತಹ ಅವಾರ್ಡ್ ನ್ಯಾಯಾಲಯದಲ್ಲಿ ಮಾಡಬಹುದಾದ ಡಿಕ್ರಿ ಇದ್ದಂತೆ ಆಗುತ್ತಿದ್ದು, ಅಂತಹ ಅವಾರ್ಡ್‍ಗಳನ್ನು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಗಳಲ್ಲಿ ಅಮಲ್ ಬಜಾವಣೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಇದರಿಂದ ಕಕ್ಷಿದಾರರಿಗೆ ನ್ಯಾಯಾಲಯದ ಖರ್ಚು ಹಾಗೂ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಶೀಘ್ರವಾಗಿ ನ್ಯಾಯದಾನವಾಗುತ್ತದೆ. ಆದ್ದರಿಂದ ಕೋವಿಡ್-19 ಪರಿಸ್ಥಿತಿಯಲ್ಲಿಯೂ ಸಹ ಜನ ಸಾಮಾನ್ಯರು ಇಂತಹ ಪ್ರಕ್ರಿಯೆಯ ಉಪಯೋಗವನ್ನು ಪಡೆದುಕೊಳ್ಳಬಹುದೆಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳ ವತಿಯಿಂದ ಕಾಲಕಾಲಕ್ಕೆ ವಿಬಿನಾರ್ ಮುಖೇನ ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಎಲ್ಲಾ ವರ್ಗದ ಜನರಿಗೆ ಸಂಬಂಧಪಟ್ಟ ಕಾನೂನುಗಳ ಅರಿವು ಮೂಡಿಸುವುದು ಮತ್ತು ಅವಶ್ಯಕ ವ್ಯಕ್ತಿಗಳಿಗೆ ನೆರವನ್ನು ಸಹ ಕೊಡುವಂತಹ ಪ್ರಕ್ರಿಯೆ ಈಗಲೂ ಇದೆ. ಈ ರೀತಿ ಕಾನೂನು ಅರಿವು ಮತ್ತು ನೆರವು ಕೊಡುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದವು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಫ್ರಂಟ್ ಆಫೀಸ್ ಕ್ಲಿನಿಕ್, ಕಾನೂನು ಸೇವೆಗಳ ಕ್ಲಿನಿಕ್, ತಾಲೂಕು ಆಫೀಸ್ ಕ್ಲಿನಿಕ್, ಸಿ.ಡಿ.ಪಿ.ಓ. ಕ್ಲಿನಿಕ್, ಜೆ.ಜೆ.ಬಿ.ಕ್ಲಿನಿಕ್, ಜೈಲು ಕ್ಲಿನಿಕ್ ಮತ್ತು ಎ.ಆರ್.ಟಿ. ಕ್ಲಿನಿಕ್ ಗಳನ್ನು ರಚಿಸಿ ಆಯಾ ಕ್ಲಿನಕ್‍ಗಳಲ್ಲಿ ಒಬ್ಬೊಬ್ಬ ಪ್ಯಾನಲ್ ವಕೀಲರುಗಳನ್ನು ನಿಯೋಜಿಸಲಾಗಿದ್ದು, ಅವರು ಮೂಲಕ ಪ್ರಾಧಿಕಾರದಿಂದ ಕಾನೂನು ಅರಿವು ಮೂಡಿಸಿ ನೆರವು ಕೊಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸರ್ವರಿಗೂ ನ್ಯಾಯ ಎಂಬುದು ಕಾನೂನು ಸೇವೆಗಳ ಪ್ರಾಧಿಕಾರಗಳ ಧ್ಯೇಯೋದ್ದೇಶವಾಗಿದ್ದು, ಸಮಾಜದ ದುರ್ಬಲ ವರ್ಗಗಳ ಜನರಿಗೆ ಉಚಿತ ಹಾಗೂ ಸಕ್ಷಮ ಕಾನೂನು ಸೇವೆಗಳನ್ನು ಒದಗಿಸುವುದರ ಮೂಲಕ ನಾಗರಿಕರಿಗೆ ಅವರ ಆರ್ಥಿಕ ಮತ್ತಿತರ ಕಾರಣಕ್ಕಾಗಿ ನ್ಯಾಯವನ್ನು ನಿರಾಕರಿಸುವುದಿಲ್ಲ. ಪ್ರಸ್ತುತ ಕೋವಿಡ್-19 ಹಿನ್ನೆಲೆಯಲ್ಲಿ ಈ-ಲೋಕ್ ಅದಾಲತ್ ಜನರ ಪಾಲಿಗೆ ಒಂದು ಸುವರ್ಣಾವಕಾಶ. ಕಕ್ಷಿದಾರರು ಹಾಗೂ ವಕೀಲರ ಹಿತದೃಷ್ಠಿಯಿಂದ ಈ ಲೋಕ್ ಅದಾಲತ್ ಆಯೋಜಿಸಿದ್ದು, ಕಕ್ಷಿದಾರರು ತಾವಿದ್ದ ಸ್ಥಳದಿಂದಲೇ ತಮ್ಮ ವ್ಯಾಜ್ಯಗಳನ್ನು ರಾಜಿ-ಸಂಧಾನದ ಮೂಲಕ ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.
ಆದ್ದರಿಂದ ಸೆ. 19 ರಂದು ನಡೆಯುವ ಈ-ಅದಾಲತ್‍ನಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಮಯ, ಹಣ ಉಳಿಸಿಕೊಂಡು ಶೀಘ್ರ ನ್ಯಾಯ ಪಡೆಯಲು ಸದುಪಯೋಗಪಡೆದುಕೊಳ್ಳುವಂತೆ ನ್ಯಾಯಾಧೀಶರು ತಿಳಿಸಿದ್ದಾರೆ.

error: Content is protected !!