ಇದು ಶಾರೀರಿಕ ವ್ಯತ್ಯಾಸದಿಂದ ಬರುವ ಖಾಯಿಲೆ, ಇದಕ್ಕೆ ಯಾವುದೇ ರೋಗಾಣು ಅಥವಾ ಕೀಟಾಣು ಕಾರಣವಲ್ಲವೆಂದು ತಿಳಿದುಬಂದಿದೆ. ಹಿಡಿಮುಂಡಿಗೆ ರೋಗವು ಅಡಿಕೆ ಬೆಳೆಯುವ ಮೈದಾನ ಪ್ರದೇಶಗಳಲ್ಲಿ ಹಾಗೂ ನಾಲೆ ನೀರಾವರಿ ತೋಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ರೋಗದ ತೀವ್ರತೆ ಸುಮಾರು ಶೇ.5 ರಿಂದ 50 ರ ವರೆವಿಗೂ ಇರುವುದು ಕಂಡುಬಂದಿದೆ. ರೋಗ ಪೀಡಿತ ಮರಗಳ ಬೆಳವಣಿಗೆ ಕುಂಠಿತವಾಗುವುದರಿಂದ ಇದಕ್ಕೆ ಬಂದ್ ರೋಗವೆಂತಲೂ ಕರೆಯುತ್ತಾರೆ.

ಈ ರೋಗಕ್ಕೆ ಕಾರಣಗಳು :
 ಅಷ್ಷೇನೂ ಯೋಗ್ಯವಲ್ಲದ ಅಂಟು ಮತ್ತು ಗೋಡು ಮಣ್ಣಿನ ಪ್ರದೇಶಗಳಲ್ಲಿ ಅಡಿಕೆ ಬೆಳೆದಿರುವುದು.
 ಸದಾ ನೀರು ನಿಲ್ಲುವ ಅಣೆಕಟ್ಟು ಪ್ರದೇಶದಲ್ಲಿ ಬೆಳೆ ಬೆಳೆಯುವುದು.
 ತೋಟಕ್ಕೆ ಹೆಚ್ಚು ಕೆರೆಗೋಡು ಮಣ್ಣನ್ನು ಹಾಕುತ್ತಿರುವುದು.
 ತೋಟದಲ್ಲಿ ಸೂಕ್ತವಾದ ಬಸಿಗಾಲುವೆ ವ್ಯವಸ್ಥೆ ಇಲ್ಲದಿರುವುದು.
 ಪದೇ ಪದೇ ಟ್ರ್ಯಾಕ್ಟರ್ ಉಳುಮೆ ಮಾಡುವುದು.
 ಪ್ರತಿವರ್ಷ ಅಡಿಕೆ ಬೆಳೆಯ ಬೇರುಗಳನ್ನು ಕತ್ತರಿಸುತ್ತಿರುವುದು.
 ಸಾರಜನಕಯುಕ್ತ ಸಾವಯವ ವಸ್ತುಗಳಾದ ಕೊಟ್ಟಿಗೆ ಗೊಬ್ಬರ, ಕುರಿಗೊಬ್ಬರ ಮುಂತಾದವುಗಳನ್ನು ಯಥೇಚ್ಛವಾಗಿ ಒದಗಿಸುತ್ತಿರುವುದು.
 ದೀರ್ಘಕಾಲ ತೋಟಗಳಲ್ಲಿ ನೀರನ್ನು ನಿಲ್ಲಿಸುತ್ತಿರುವುದು.
 ಅಸಮತೋಲನ ರಸಗೊಬ್ಬರಗಳ ಬಳಕೆ.

ಇಂತಹ ಸನ್ನಿವೇಶವಿರುವ ತೋಟಗಳಲ್ಲಿ ಗಟ್ಟಿ ಮಣ್ಣಿನ ಪದರಗಳುಂಟಾಗಿ ಬೇರಿನ ಉಸಿರಾಟಕ್ಕೆ ತೊಂದರೆಯಾಗುವುದು. ಇದರಿಂದ ಆರೋಗ್ಯವಂತ ಬೇರುಗಳ ಸಂಖ್ಯೆ ಕಡಿಮೆಯಾಗಿ ನೀರು ಮತ್ತು ಆಹಾರ ಹೀರಿಕೊಳ್ಳುವ ಬೇರುಗಳ ಸಂಖ್ಯೆ ಕಡಿಮೆ ಇರುವುದು ಕಂಡುಬಂದಿದೆ.

ರೋಗ ಲಕ್ಷಣಗಳು :
 ರೋಗಪೀಡಿತ ಮರಗಳ ಸೋಗೆಗಳು ಚಿಕ್ಕದಾಗಿ ಕಡು ಹಸಿರು ಬಣ್ಣಕ್ಕೆ ತಿರುಗುತ್ತವೆ.
 ತುದಿ ಅಥವಾ ಸುಳಿಭಾಗದಲ್ಲಿ ಸೋಗೆಗಳು ಗುಂಪಾಗಿ ಸೇರಿ ಬೆಳೆಯುವುದರಿಂದ ಸುಳಿ ತಿಗಣೆ ಮತ್ತು ಹಿಟ್ಟು ತಿಗಣೆಗಳ ಬಾಧೆ ಹೆಚ್ಚಾಗಿ ಕಂಡುಬರುತ್ತದೆ.
 ಗೆಣ್ಣುಗಳ ಅಂತರ ಕಡಿಮೆಯಾಗುವುದು.
 ಸುಳಿ ಭಾಗದಲ್ಲಿ ನೀರು ನಿಲ್ಲುವುದರಿಂದ ಸುಳಿ ಕೊಳೆರೋಗ ಬರುವುದು.
 ಬೇರುಗಳು ರೋಗ ಪೀಡಿತವಾಗಿದ್ದು, ಗಡುಸಾಗಿ ಕಂದು ಬಣ್ಣಕ್ಕೆ ತಿರುಗುತ್ತವೆ.
 ಹಿಂಗಾರ ಮತ್ತು ಅಡಿಕೆ ಕಾಯಿಗಳ ಇಳುವರಿ ಕಡಿಮೆಯಾಗುತ್ತದೆ.
 ಹಿಡಿಮುಂಡಿಗೆ ಚಿಹ್ನೆಗಳು ಕಂಡು ಬಂದ ಕೆಲವೇ ವರ್ಷಗಳಲ್ಲಿ ರೋಗ ಪೀಡಿತ ಮರ ಸಾಯುತ್ತದೆ.

ನಿರ್ವಹಣಾ ಕ್ರಮಗಳು :
 ಪ್ರತಿ 2 ಸಾಲಿಗೊಂದರಂತೆ ಒಂದೂವರೆ ಯಿಂದ ಎರಡು ಅಡಿ ಆಳ ಹಾಗೂ ಒಂದು ಅಡಿ ಅಗಲದ ಉಪ ಬಸಿಗಾಲುವೆಗಳನ್ನು ನಿರ್ಮಿಸುವುದು. ತೋಟದ ಸುತ್ತ ಎರಡೂವರೆ ಅಡಿಯಿಂದ ಮೂರು ಅಡಿ ಆಳ ಮತ್ತು ಎರಡು ಅಡಿ ಅಗಲದ ಮುಖ್ಯ ಬಸಿಗಾಲುವೆಗಳನ್ನು ನಿರ್ಮಿಸುವುದು.
 ಪ್ರತಿ ಮರಕ್ಕೆ 25 ಕೆ.ಜಿ ಯಷ್ಟು ಕೊಟ್ಟಿಗೆ ಗೊಬ್ಬರ / ಕಾಂಪೋಸ್ಟ್ ಕೊಡುವುದು.
 ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಸಾ:ರಂ:ಪೊ (100:40:140 ಗ್ರಾಂ) ರಸಗೊಬ್ಬರಗಳನ್ನು ಪ್ರತಿ ಮರಕ್ಕೆ 6 ತಿಂಗಳಿಗೊಮ್ಮೆ ಎರಡು ಬಾರಿ ಕೊಡುವುದು. ಕೊರತೆ ಇದ್ದರೆ ಮಾತ್ರ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುವುದು.
 ಬೇಸಾಯದ ಸಮಯದಲ್ಲಿ ಬೇರುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು.
 ಕೆರೆಗೋಡು ಮಣ್ಣನ್ನು ತೋಟಕ್ಕೆ ಹಾಕುವ ಪದ್ಧತಿಯನ್ನು ಕಡಿಮೆ ಮಾಡುವುದು.
 ಅಡಿಕೆ ಮರದ ಸುತ್ತ ಎರಡು ಅಡಿ ದೂರದವರೆಗೂ ಟ್ರ್ಯಾಕ್ಟರ್ ನಿಂದ ತೋಟದಲ್ಲಿ ಉಳುಮೆ ಮಾಡುವುದನ್ನು ನಿಲ್ಲಿಸುವುದು.
 ಕೋಕೋ ಅಥವಾ ಬಾಳೆ ಬೆಳೆಯನ್ನು ಮಿಶ್ರ ಬೆಳೆಯಾಗಿ ಬಾಧಿತ ತೋಟಗಳಲ್ಲಿ ಬೆಳೆಸುವುದು.
 ಸಾಧ್ಯವಾದ ಮಟ್ಟಿಗೆ ಹನಿ ನೀರಾವರಿ ಹಾಗೂ ಸಿಂಚನ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು.
 ತೋಟದಲ್ಲಿ ದೊರೆಯುವ ತ್ಯಾಜ್ಯ ವಸ್ತುಗಳಿಂದ ಮರದ ಬುಡಕ್ಕೆ ಹೊದಿಕೆ ಮಾಡುವುದು.
 ರಸ ಹೀರುವ ಕೀಟಗಳ ಬಾಧೆಯನ್ನು ಸೂಕ್ತವಾಗಿ ನಿಯಂತ್ರಿಸುವುದು.

ತೋಟಗಾರಿಕೆ ಉಪ ನಿರ್ದೇಶಕರು
ಶಿವಮೊಗ್ಗ.

error: Content is protected !!