ಶಿವಮೊಗ್ಗ : ಜುಲೈ-22:ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನು ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಿಸುವುದು, ಅಲಂಕಾರಿಕ ಮೀನು ಉತ್ಪಾದನೆ, ಪಾಲನೆ, ಹೊಸ ತಂತ್ರಜ್ಞಾನ ಅಳವಡಿಕೆ, ಮೀನುಗಾರಿಕೆ ಮೂಲಭೂತ ಸೌಕರ್ಯ ಹಾಗೂ ಮೀನು ಹಿಡುವಳಿ ನಂತರದ ನಿರ್ವಹಣೆ, ಮೀನು ಮಾರುಕಟ್ಟೆ ನಿರ್ಮಾಣ ಮತ್ತು ಮಾರಾಟ, ಮೀನುಗಳ ಆರೋಗ್ಯ ನಿರ್ವಹಣೆ, ಮೀನುಗಾರಿಕೆ ವಿಸ್ತರಣೆ ಹಾಗೂ ಮೀನುಗಾರಿಕೆ ಸಹಾಯ ಕಾರ್ಯಗಳು, ಮೀನುಗಾರಿಕೆ ಸಂಪನ್ಮೂಲ ನಿರ್ವಹಣೆ, ಮೀನುಗಾರರ ಜೀವನೋಪಾಯ ಹಾಗೂ ಪೌಷ್ಟಿಕತೆಗೆ ಬೆಂಬಲ ನೀಡುವುದು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಒಳಗೊಂಡಿದೆ ಎಂದು ಶಿವಮೊಗ್ಗದ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀ ಷಡಕ್ಷರಿ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಜಿಲ್ಲಾ ಮಟ್ಟದ ಸಮಿತಿಯ ಪ್ರಥಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಯೋಜನೆಯಾಗಿದ್ದು, 2020-21ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಪಂಚವಾರ್ಷಿಕ ಯೋಜನೆಯಾಗಿದ್ದು, 20 ಸಾವಿರ ಕೋಟಿಗಳ ಯೋಜನೆ ಇದಾಗಿದೆ ಎಂದು ಅವರು ತಿಳಿಸಿದರು.
2020-21ನೇ ಸಾಲಿಗೆ ಒಟ್ಟು ರೂ.3130.40 ಲಕ್ಷ ಯೋಜನಾ ವೆಚ್ಚದೊಂದಿಗೆ ವಿವಿಧ ಕಾರ್ಯಕ್ರಮಗಳನ್ನೊಳಗೊಂಡು ಕ್ರಿಯಾ ಯೋಜನೆ ರೂಪಿಸಲಾಗಿದೆ. ಮೀನುಮರಿ ಪಾಲನೆ ಪ್ರತಿ ಹೆಕ್ಟೇರ್ ವಿಸ್ತೀರ್ಣಕ್ಕೆ ರೂ. 11.00 ಲಕ್ಷವಿದ್ದು ಸಾಮಾನ್ಯ ವರ್ಗದವರಿಗೆ ಶೇ.40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಮಹಿಳೆಯರಿಗೆ ಶೇ.60 ಸಹಾಯಧನವಿರುತ್ತದೆ. ಮೀನು ಕೃಷಿಕೊಳ ನಿರ್ಮಾಣ, ಸಾರಯುಕ್ತ ಮಣ್ಣಿನಲ್ಲಿ ಮೀನು ಉತ್ಪಾದನಾ ಕೊಳ ನಿರ್ಮಾಣ, ಮೀನು ಸಾಕಾಣಿಕೆಗೆ ಹೂಡಿಕೆ ಸಹಾಯ, ಬಯೋಪ್ಲಾಕ್ ಕೊಳ ನಿರ್ಮಾಣ, ಸಣ್ಣ ಮತ್ತು ಮಧ್ಯಮ ಗಾತ್ರದ ಅಲಂಕಾರಿಕ ಮೀನು ಉತ್ಪಾದನೆ ಮತ್ತು ಪಾಲನಾ ಕೇಂದ್ರ ನಿರ್ಮಾಣ, ರೀಸಕ್ರ್ಯೂಲೇಟರಿ ಅಕ್ವಕಲ್ಚರ್ ಸಿಸ್ಟಂ ನಿರ್ಮಾಣ, ಜಲಾಶಯಗಳಲ್ಲಿ ಕೇಜ್‍ಗಳ ಸ್ಥಾಪನೆ, ಜಲಾಶಯಗಳಲ್ಲಿ ಪೆನ್‍ಕಲ್ಚರ್ ನಿರ್ಮಾಣ, ಮಂಜುಗಡ್ಡೆ ಉತ್ಪಾದನಾ ಕಾರ್ಖಾನೆ, ಕೋಲ್ಡ್ ಸ್ಟೋರೇಜ್ ನಿರ್ಮಾಣ, ರೆಫ್ರಿಜರೇಟರ್ ವಾಹನ, ಇನ್ಸುಲೇಟೇಡ್ ವಾಹನ, ಮೋಟಾರ್ ಸೈಕಲ್ ಐಸ್ ಬಾಕ್ಸ್ ಖರೀದಿ, ಸೈಕಲ್ ಮತ್ತು ಐಸ್‍ಬಾಕ್ಸ್ ಖರೀದಿ, ಮೀನು ಮಾರಾಟ ಕಿಯೋಸ್ಕ್ ನಿರ್ಮಾಣ, ಮೀನು ಆರೋಗ್ಯ ತÀಪಾಸಣಾ ಪ್ರಯೋಗಾಲಯಗಳ ಸ್ಥಾಪನೆ, ಮೊಬೈಲ್ ಕ್ಲಿನಿಕ್ ಲ್ಯಾಬ್‍ಗಳು ಹಾಗೂ ಮತ್ಸ್ಯ ಸೇವಾ ಕೇಂದ್ರಗಳ ಸ್ಥಾಪನೆ ಹಾಗೂ ಮೀನುಗಾರರ ಜೀವನೋಪಾಯ ಹಾಗೂ ಪೌಷ್ಟಿಕತೆಗೆ ಒತ್ತು ನೀಡುವುದು, ಮೀನುಗಾರರಿಗೆ ಜೀವ ವಿಮಾ ಸೌಲಭ್ಯ ಯೋಜನೆಗಳಿರುವುದಾಗಿ ಅವರು ಸಭೆಗೆ ತಿಳಿಸಿದರು
ಜಿಲ್ಲೆಯ ಮೀನು ಉತ್ಪಾದನೆ ಹೆಚ್ಚಿಸಲು ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಲು ಅಧ್ಯಕ್ಷರು ತಿಳಿಸಿದರು. ಕ್ರೀಡಾ ಮೀನುಗಾರಿಕೆ, ಸಾಂಪ್ರದಾಯಿಕ ಮೀನುಗಾರರಿಗೆ, ಮಹಿಳೆಯರಿಗೆ ಹೆಚ್ಚು ಸೌಲಭ್ಯ ದೊರೆಯುವಂತೆ ಯೋಜನೆ ತಯಾರಿಸಲು ತಿಳಿಸಿದರು.
ಮೀನುಗಾರರು, ಮೀನುಕೃಷಿಕರು, ಮೀನು ಮಾರಾಟಗಾರರು, ಸ್ವಸಹಾಯ ಸಂಘಗಳು, ಮೀನುಗಾರಿಕೆ ಸಹಕಾರ ಸಂಘಗಳು, ಖಾಸಗಿ ಸಂಸ್ಥೆಗಳು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದ್ದು, ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಆಗಸ್ಟ್-05 ರೊಳಗಾಗಿ ತಾಲ್ಲೂಕು ಮೀನುಗಾರಿಕೆ ಇಲಾಖೆ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಮತ್ತು ತಾಲ್ಲೂಕು ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಕಛೇರಿಗೆ ಹಾಗೂ ಇಲಾಖಾ ಜಾಲತಾಣವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಸಭೆಯಲ್ಲಿ ತಿಳಿಸಿದರು.