ಮೊನ್ನೆ ಪತ್ರಿಕೆಯ ಸಂಪಾದಕರೊಬ್ಬರು ದೂರವಾಣಿ ಕರೆಮಾಡಿ “ ಕೆಚ್ಚಲು ಬಾವಿನ ಬಗ್ಗೆ ಒಂದು ಲೇಖನ ಬರೆದು ಕೊಡಲು ಸಾಧ್ಯವೇ? ಒಂದು ವಾರ ಸಮಯಾವಕಾಶ ತೆಗೆದುಕೊಳ್ಳಿ ಬೇಕಾದರೆ” ಅಂದರು. ನಾನು “ ಕೆಚ್ಚಲು ಬಾವಿನ ಬಗ್ಗೆ ಸಾಕಷ್ಟು ಬರೆದು ಬಿಟ್ಟಿದ್ದಾರೆ. ನಾನು ಬರೆಯಬಹುದೇನಾದರೂ ಇದ್ದರೆ ನೋಡುತ್ತೇನೆ” ಎಂದು ಫೋನು ಇಟ್ಟೆ. ಈ ಕೆಚ್ಚಲು ಬಾವಿನ ಬಗ್ಗೆ ಲೇಖನ ಬರೆಯಲು ನನಗೆ ಒಂಚೂರೂ ಆಸಕ್ತಿ ಇಲ್ಲ. ಯಾಕೆಂದರೆ ಸುಮಾರು ೫೦ ವರ್ಷಗಳಿಂದ ಇದರ ಬಗ್ಗೆ ಎಷ್ಟೋ ಸಂಶೋಧನೆಗಳು, ಪುಸ್ತಕಗಳು, ವಿಶ್ವ ಸಮ್ಮೇಳನಗಳು, ದುಂಡು ಮೇಜಿನ ಪರಿಷತ್ತುಗಳು, ವಿಚಾರ ಸಂಕಿರಣಗಳು ನಡೆದು ಸಾಕಷ್ಟು ಮಾಹಿತಿ ವಿನಿಮಯವಾದರೂ ಸಹ ಈ ಕಾಯಿಲೆ ಕಗ್ಗಂಟಾಗಿಯೇ ಉಳಿದು ಹೋಗಿದೆ. ರೈತರಿಗೆ ಕೆಚ್ಚಲು ಬಾವು ಬರದಂತೆ ತಡೆಯಲು “ಸ್ವಚ್ಚ ಹಾಲಿನ ಉತ್ಪಾದನೆ” ಯ ಬಗ್ಗೆ ೩೦ ವರ್ಷಗಳಿಂದ ಹೇಳಿ ಹೇಳಿ ನನಗಂತೂ ಸಾಕಾಗಿದೆ. ನನ್ನ ಅನುಭವದ ೩೦ ವರ್ಷಗಳಲ್ಲಿ ಅನೇಕ ವಿಸ್ತರಣಾ ಚಟುವಟಿಕೆಗಳಲ್ಲಿ ಈ ವಿಷಯದ ಬಗ್ಗೆ ಯಾಂತ್ರಿಕವಾಗಿ ಹೇಳಿ ಮುಗಿಸುತ್ತೇನೆ. ನನಗಂತೂ ಈ ಕಾಯಿಲೆ ನನ್ನ ಜೀವ ಮಾನದಲ್ಲಿ ಹೋಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ.
ಇನ್ನು ನನ್ನ ಸ್ನೇಹಿತ ಗೋಪಾಲಕರು “ ನಮ್ಮ ದನಕ್ಕೆ ಕೆಚ್ಚಲು ಗಟ್ಟಿಯಾಗಿ ಬಿಟ್ಟಿದೆ. ೭೫೦ ರೂಪಾಯಿಯ ಎಂಟಿಬಯಾಟಿಕ್ ಹಾಕ್ಸಿದ್ದೀವಿ. ಲೋಳೆಸರ ಅರಿಷಿಣ ಹಚ್ಚಿದ್ದೀವಿ. ಹೊಸದೇನಾದರೂ ಔಷಧಿ ಬಂದಿದೆಯೇ?” ಎಂದು ಪೋನಾಯಿಸುತ್ತಾರೆ. ನನ್ನ ಪಶುವೈದ್ಯ ಮಿತ್ರರೂ ಅಷ್ಟೇ. ಸಾರ್. ಕಂಪನಿಯೊಂದರ ಹೊಚ್ಚ ಹೊಸ ಆಂಟಿಬಯೋಟಿಕ್ ಬಂದಿದೆ. ಇದೇನಾದರೂ ಕೆಚ್ಚಲು ಬಾವಿನ ಮೇಲೆ ಪರಿಣಾಮವಾಗಬಲ್ಲದೇ? ಹೇಳಿ” ಎನ್ನುತ್ತಾರೆ. ಆಗ ಅವರ ಮೇಲೆ ಅನುಕಂಪ ಮತ್ತು ಒಂದಿಷ್ಟು ಅಸಹನೆ ಬಂದೇ ಬರುತ್ತದೆ.
ಸಂಜೆ ಹಾಲು ಕರೆದುಕೊಂಡು ಬಂದ ನಂತರ ಶಾರದಮ್ಮ ಗಂಡನಿಗೆ ಹೇಳಿದಳು, “ಇವತ್ಯಾಕೋ ಹಿಂದಿನ ಮೊಲೇಲಿ ಭಾಳ ಕಡಿಮೆ ಹಾಲು ಬಂತು ಕಣ್ರೀ, ಹಾಲು ಕರೆವಾಗ ಯಾವತ್ತೂ ಕಾಲು ಎತ್ತಿರಲಿಲ್ಲ, ಕೆಚ್ಚಲಿನಲ್ಲಿ ನೋವಿದೆ ಅನ್ಸುತ್ತೆ, ಹಾಲೂ ಜಂಡಾಗಿತ್ತು. ಏನಾದ್ರೂ ತೊಂದ್ರೆ ಆಗಿರ‍್ಬಹುದು ಅಂತೀರಾ?” ಎಂದಳು. ಅದಕ್ಕೆ ಗಂಡ ವೆಂಕಣ್ಣ, “ದೃಷ್ಟಿಯಾಗರ‍್ಬೇಕು ಕಣೇ. ನಾಳೆ ಮೇಲಿನಮನೆ ಭಟ್ರನ್ನ ಕಂಡು ನಿಂಬೆ ಹಣ್ಣು ಮಂತ್ರಿಸಿಕೊಂಡು ಹಸುವಿನ ಕೊರಳಿಗೆ ಕಟ್ಟಿದ್ರೆ ಎಲ್ಲಾ ಸರಿಹೋಗುತ್ತೆ ಬಿಡು” ಎಂದ. ಬೆಳಗ್ಗೆ ನೋಡುವಷ್ಟರಲ್ಲಿ ಕೆಚ್ಚಲು ವಿಪರೀತ ಬಾತುಕೊಂಡಿತ್ತು. ಭಟ್ರ ನಿಂಬೆಹಣ್ಣು ಬಂತು. ವೈದ್ಯರೂ ಬಂದ್ರು. ಸಾವಿರಾರು ರೂಪಾಯಿ ಖರ್ಚೂ ಆಯಿತು. ಆದ್ರೆ ಹಾಲು ಮಾತ್ರ ಬರಲೇ ಇಲ್ಲ. ಕೆಚ್ಚಲು ಊದಿಕೊಂದಿದ್ದು ಹಾಗೆಯೇ ಉಳಿಯಿತು. ಸ್ವಲ್ಪ ಅಲಕ್ಷ್ಯ ಮಾಡಿದ್ದರ ಫಲ ಇದು. ಇದು ಬರೀ ವೆಂಕಣ್ಣನ ಮನೆಯ ವಿಷಯ ಮಾತ್ರ ಅಲ್ಲ, ಬಹುತೇಕ ಎಲ್ಲ ಹೈನುಗಾರರ ಅನುಭವಕ್ಕೆ ಬಂದಿರಬಹುದಾದ ವಿಷಯ. ಕೆಚ್ಚಲು ಬಾವಿನ ತೀವ್ರತೆಯೇ ಹೀಗಿರುತ್ತದೆ. ಅದಕ್ಕೇ ಇರಬೇಕು, ಉತ್ತರ ಕರ್ನಾಟಕ ಭಾಗದಲ್ಲಿ ಇದಕ್ಕೆ “ಬೆಂಕಿ ರೋಗ” ವೆಂತಲೂ ಕರೆಯುತ್ತಾರೆ. ರಾಸುಗಳಿಗೆ ಹೈನುಗಾರಿಕೆಯಲ್ಲಿ ತೀವ್ರ ನಷ್ಟವುಂಟು ಮಾಡುವ ಸಮಸ್ಯೆಗಳಲ್ಲಿ ಕೆಚ್ಚಲುಬಾವು ಪ್ರಮುಖವಾದುದು. ಇದರ ಚಿಕಿತ್ಸೆಯೂ ದುಬಾರಿ. ನಿರ್ಲಕ್ಷಿಸಿದರೆ ಹಸುವಿನ ಮೌಲ್ಯವೇ ಕುಸಿದು, ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ.
ವಚನಕಾರರ ನುಡಿಯಂತೆ “ಮನದೊಳಗಿನ ಕಿಚ್ಚು ತನ್ನ ಮನೆಯ ಸುಡದಲ್ಲದೇ ನೆರೆ ಮನೆಯ ಸುಡದು” ಆದರೆ ಕೆಚ್ಚಲ ಬಾವಿನಿಂದ ಆ ರಾಸಿನ ಕೆಚ್ಚಲು ಮಾತ್ರವಲ್ಲದೇ ಹೈನುಗಾರನ ಜೀವನವನ್ನು ಬುಡಮೇಲು ಮಾಡಬಹುದು. ಕೆಚ್ಚಲು ಬಾವಿನ ನಂತರದ ಪರಿಣಾಮವಾಗಿ ಆಕಳು ಕಾಲು ಗಂಟು ನೋವಿನಿಂದ ಬಳಲುತ್ತದೆ.
ಹೈನುಗಾರರಿಗೆ ವೈದ್ಯರನ್ನು ಅತಿ ತುರ್ತಾಗಿ ಕರೆಯುವ ಕೆಲವು ಸಂದರ್ಭಗಳಿರುತ್ತವೆ. ಅವುಗಳಲ್ಲಿ ಕಷ್ಟಕರ ಹೆರಿಗೆ, ತೀವ್ರರೀತಿಯ ಹೊಟ್ಟೆ ಉಬ್ಬರ, ವಿಷಪ್ರಾಶನ, ಬೆಂಕಿ ಅನಾಹುತ, ರಸ್ತೆ ಅಪಘಾತ ಇತ್ಯಾದಿ. ಈ ಪಟ್ಟಿಗೆ ಕೆಚ್ಚಲು ಬಾವು ಕೂಡಾ ಸೇರುತ್ತದೆ!!. ಕೆಚ್ಚಲು ಬಾವು ಬಂದಿರುವುದನ್ನು ಕಂಡುಕೊಳ್ಳುವುದು ತುಂಬಾ ಸುಲಭ. ಕೆಚ್ಚಲನ್ನು ನೋಡಿದರೆ ಸಾಕು ಹೇಳಿಬಿಡಬಹುದು. ಆದರೆ ಚಿಕಿತ್ಸೆ ಅಷ್ಟೇ ಕ್ಲಿಷ್ಟ. “ಪ್ರಾರಂಭಿಕ ಹಂತದಲ್ಲಿ ಕೂಡಲೇ ಸೂಕ್ತ ಚಿಕಿತ್ಸೆ ನೀಡಿದರೆ ಮಾತ್ರ ಗುಣವಾಗುವ ಸಾಧ್ಯತೆ ಇದೆ” ಎನ್ನತ್ತಾರೆ ಬಹುತೇಕ ತಜ್ಞರು. ಒಂದು ಸಲ ಕೆಚ್ಚಲು ಗಟ್ಟಿಯಾದರೆ ಅದನ್ನು ಸರಿ ಪಡಿಸುವುದು ಅಸಾಧ್ಯ.
ಹಾಲು ಕೊಡುವ ಹಸುವಿನ ಕೆಚ್ಚಲಿನ ಉರಿಯೂತವೇ ಕೆಚ್ಚಲುಬಾವು. ಇದರಲ್ಲಿ ಒಂದು ಅಥವಾ ಹೆಚ್ಚು ಮೊಲೆಗಳು ಕಾಯಿಲೆಗೆ ಒಳಗಾಗಬಹುದು. ಅನೇಕ ಜಾತಿಯ ಸೂಕ್ಷ್ಮಾಣು ಜೀವಿಗಳಿಂದ ಈ ರೋಗವು ದನ ಮತ್ತು ಎಮ್ಮೆ ಆಡುಗಳಲ್ಲಿ ಕಂಡುಬ೦ದರೂ ಹೆಚ್ಚು ಹಾಲು ಕೊಡುವ ಮಿಶ್ರತಳಿ ಹಸುಗಳಲ್ಲಿ ಇದರ ತೀವ್ರತೆ ಹೆಚ್ಚು.
ಕೆಚ್ಚಲು ಬಾವು ಬರಲು ಕಾರಣಗಳೇನು?
ಸದಾ ಗಲೀಜಿನಿಂದ ಕೂಡಿದ ಕೊಟ್ಟಿಗೆ, ಹಾಲು ಕರೆಯುವ ಪಾತ್ರೆಗಳು, ಹಾಲು ಕರೆಯುವ ವ್ಯಕ್ತಿ ಮೂಲಕ ರೋಗ ಹರಡುತ್ತದೆ. ರೋಗದಿಂದ ನರಳುತ್ತಿರುವ ರಾಸುಗಳು, ಮೊಲೆ ತೊಟ್ಟುಗಳ ಗಾಯ, ಕಲುಷಿತ ಹಾಲು ಕರೆಯುವ ಯಂತ್ರ ಇವೆಲ್ಲ ರೋಗಾಣುಗಳ ಮೂಲಗಳು. ರೋಗಾಣುಗಳು ಮೊಲೆ ತೊಟ್ಟುಗಳ ಮೂಲಕ ಕೆಚ್ಚಲಿನೊಳಗೆ ಪ್ರವೇಶ ಪಡೆದು ತೀವ್ರಗತಿಯಲ್ಲಿ ಅಲ್ಲಿಯೇ ವೃದ್ಧಿ ಹೊಂದಿ ಹಾಲು ಉತ್ಪಾದಿಸುವ ಗ್ರಂಥಿಗಳನ್ನು ಹಾಳು ಮಾಡುತ್ತವೆ. ಹಾಲು ಅಮೃತಕ್ಕೆ ಸಮಾನ ಎಂದು ಹೇಳುತ್ತೇವೆ, ಹಾಲು ಇಷ್ಟಪಡದ ವ್ಯಕ್ತಿಗಳು ವಿರಳ. ಅದರಂತೆ ಸೂಕ್ಷ್ಮಾಣು ಜೀವಿಗಳು ಸಹಾ ಕೆಚ್ಚಲಿನ ಹಾಲಿನ ಮಾಧ್ಯಮವನ್ನು ಬಳಸಿಕೊಂಡು ತೀವೃಗತಿಯಲ್ಲಿ ಬೆಳೆಯುತ್ತವೆ. ಇದರಿಂದಾಗಿ ಬಾವು ಕಾಣಿಸಿಕೊಳ್ಳುತ್ತದೆ. ಇದೇ ಕೆಚ್ಚಲು ಬಾವು.
ಲಕ್ಷಣಗಳಾವುವು?
ಅತಿ ತೀವ್ರತರದ ಕೆಚ್ಚಲುಬಾವು ಉಂಟಾದರೆ ಕೆಲವೇ ಗಂಟೆಗಳಲ್ಲಿ ಕೆಚ್ಚಲು ಊದಿಕೊಂಡು ಕೆಂಪಾಗುತ್ತದೆ. ತೀವ್ರ ಜ್ವರ, ಮೇವು ನೀರು ಬಿಡುವುದು, ಕೆಚ್ಚಲು ಮುಟ್ಟಿದರೆ ನೋವಿನಿಂದ ಕಾಲು ಎತ್ತುವುದು ಅಥವಾ ಕಾಲು ಜಾಡಿಸುವುದು ಇತ್ಯಾದಿ ಪ್ರಮುಖ ಲಕ್ಷಣಗಳು. ಹಿಂಡಿದರೆ ನೀರಿನಂತಹ ದ್ರವ ಅಥವಾ ಮೊಸರಿನಂಥ ಹಾಲು ಬರುತ್ತದೆ. ಒಟ್ಟಾರೆ ಹಾಲಿನ ಪ್ರಮಾಣ ಬಹಳ ಕಡಿಮೆ ಇರುವುದು. ಅತ್ಯಂತ ಶೀಘ್ರದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಆ ಭಾಗದ ಕೆಚ್ಚಲು ಗಟ್ಟಿಯಾಗಬಹುದು. ಒಮ್ಮೊಮ್ಮೆ ರೋಗಕಾರಕ ಬ್ಯಾಕ್ಟೀರಿಯಾಗಳು ಉತ್ಪಾದಿಸಿದ ವಿಷದ ನಂಜು ರಕ್ತಕ್ಕೆ ಸೇರಿ ಹಸು ಸಾವಿಗೀಡಾಗಲೂಬಹುದು.
ಕೆಲವೊಮ್ಮೆ ಹಿಂಡಿದೊಡನೆ ರಕ್ತ ಮಿಶ್ರಿತ ಹಾಲು ಕರೆಯುತ್ತವೆ. ಇದಕ್ಕೆ ಹಾಲು ಕರೆಯುವ ಮೊಲೆಗಳನ್ನು ಅತೀಯಾಗಿ ಜಗ್ಗುವುದು, ಅಥವಾ ರಾಸುಗಳು ಮಲಗಿದಾಗ ದೇಹದ ಒತ್ತಡ ಕೆಚ್ಚಲಿನ ರಕ್ತ ನಾಳಗಳ ಮೇಲೆ ಬಿದ್ದಾಗ ರಕ್ತ ನಾಳಗಳು ಒಡೆದು ಹಾಲಿನಲ್ಲಿ ರಕ್ತ ಬರುತ್ತದೆ. “ಕರುಹಾಕಿದ ಪ್ರಾರಂಭದಲ್ಲಿ ಕೆಲವೊಮ್ಮೆ ದೇಹದಲ್ಲಿ ಆಗುವ ಹಾರ‍್ಮೋನುಗಳ ವ್ಯತ್ಯಾಸದಿಂದ ಕೆಚ್ಚಲಿನ ರಕ್ತನಾಳಗಳು ಒಡೆದು ಹಾಲಿನಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ. ಇದು ಸಹಜ ಕ್ರಿಯೆಯಾಗಿದ್ದು ನಾಲ್ಕೈದು ದಿನಗಳಲ್ಲಿ ಸರಿಯಾಗುತ್ತದೆ. ಆಗದಿದ್ದರೆ ತಜ್ಞ ಪಶುವೈದ್ಯರನ್ನು ಕರೆದು ಚಿಕಿತ್ಸೆ ಕೊಡಿಸಬೇಕು.
ಚಿಕಿತ್ಸೆ ಏನು? ಹೇಗೆ?
ಕೆಚ್ಚಲು ಬಾವಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ತಜ್ಞ ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸುವುದು ಅತ್ಯಗತ್ಯ. ‘‘ಸಲೀಸಾಗಿ ಹಾಲು ಕೊಡುವ ಹಸುಗಳು ಹಾಲು ಕರೆಯುವಾಗ ನೋವಿನಿಂದ ಕಾಲು ಎತ್ತಿದರೆ, ಹಾಲಿನ ಬಣ್ಣ ಬದಲಾದರೆ ತಡಮಾಡುವುದಿಲ್ಲ. ಸಂಪೂರ್ಣ ಹಾಲು ಕರೆದು ನಮ್ಮ ಮನೆಯಲ್ಲಿಯೇ ಇಟ್ಟುಕೊಂಡ ಮಲೆಗೇರಿಸುವ ಟ್ಯೂಬ್ ಏರಿಸಿ, ತಕ್ಷಣ ಪಶುವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸುತ್ತೇವೆ. ಹಾಗಾಗಿ ಕೆಚ್ಚಲು ಬಾವು ಬೇಗ ವಾಸಿಯಾಗುತ್ತದೆ’’ ಎನ್ನುತ್ತಾರೆ 20 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿದ ಸೈದೂರಿನ ದಯಾನಂದರವರು.
ಈ ಕಾಯಿಲೆ ತಡೆಯುವ ಬಗೆ ಹೇಗೆ?
ಕೊಟ್ಟಿಗೆಯ ಸ್ವಚ್ಛತೆ, ಹಾಲು ಕರೆಯುವರ ಸ್ವಚ್ಚತೆ ಹಾಗೂ ಹಾಲುಕರೆಯುವ ಪಾತ್ರೆಗಳ ಸ್ವಚ್ಚತೆ ಕಾಪಾಡಿಕೊಳ್ಳುವುದು ಬಹು ಮುಖ್ಯ. ನಿಗಧಿಪಡಿಸಿದ ಕಾಲಕ್ಕೆ ಹಾಲು ಕರೆಯುವುದು ಹಾಗೂ ಕೊಟ್ಟಿಗೆ ಹಸಿ ಇರದಂತೆ ನೋಡಿಕೊಳ್ಳವುದು ಸಹ ಅಷ್ಟೇ ಮುಖ್ಯ. “ನಾವು ಕೊಟ್ಟಿಗೆ ನೆಲ ಸ್ವಚ್ಚಗೊಳಿಸಲು ಹಾಗೂ ರಾಸುಗಳ ಮೈತೊಳೆಯಲು ಪ್ರೆಶರ್ ಪಂಪ ಬಳಸುತ್ತೇವೆ. ಹಾಗಾಗಿ ನಾಲ್ಕೈದು ವರ್ಷಗಳಿಂದ ನಮ್ಮ ರಾಸುಗಳಿಗೆ ಕೆಚ್ಚಲು ಬಾವು ಬಂದಿಲ್ಲ” ಎನ್ನುತ್ತಾರೆ ಹತ್ತಾರು ವರ್ಷಗಳಿಂದ ನೂರೆಂಟು ಹಸುಗಳನ್ನು ಸಾಕಿದ ಶಿರಸಿಯ ಶ್ರೀಮತಿ ವೇದಾವತಿ ಹೆಗಡೆಯವರು.
ಹಾಲು ಕರೆಯುವಾಗ ಉಗುರು ಬೆಚ್ಚಗಿನ ಶುದ್ಧ ನೀರಿನಲ್ಲಿ ಕೆಚ್ಚಲು ಹಾಗೂ ಮೊಲೆಗಳನ್ನು ತೊಳೆಯಬೇಕು. ಹಾಲು ಹಿಂಡಿದ ನಂತರ ಶುದ್ಧ ನೀರಿನಿಂದ ತೊಳೆದು ಕ್ರಿಮಿನಾಶಕ ಔಷಧಿಯಲ್ಲಿ ಮೊಲೆಗಳನ್ನು ಅದ್ದುವುದರಿಂದ ಕೆಚ್ಚಲು ಬಾವು ತಡೆಗಟ್ಟಬಹುದು. ಹಾಲು ಕರೆದಾದ ಒಂದರಿಂದರಿಂದ ಒಂದುವರೆ ಗಂಟೆಯ ಕಾಲ ಮೊಲೆತೊಟ್ಟುಗಳ ರಂದ್ರ ತೆರೆದಿರುತ್ತದೆ. ಈ ಸಂದರ್ಭದಲ್ಲಿ ರಾಸುಗಳು ಮಲಗಿದರೆ ರೋಗಾಣುಗಳು ಮೊಲೆ ತೊಟ್ಟಗಳ ತೆರೆದ ರಂದ್ರಗಳ ಮೂಲಕ ಕೆಚ್ಚಲಿಗೆ ಪ್ರವೇಶ ಪಡೆಯುವುದರಿಂದ ಕೆಚ್ಚಲು ಬಾವು ಬರುತ್ತದೆ. ಕಾರಣ ರಾಸುಗಳು ತಕ್ಷಣ ಮಲಗದಂತೆ ತಡೆಯಲು ಹಾಲುಕರೆದ ನಂತರ ಮೇವು ಹಾಕುವುದು ಅಥವಾ ಓಡಾಡಲು ಕೊಟ್ಟಿಗೆಯ ಹೊರಗೆ ಬಿಡುವುದು ಒಳ್ಳೆಯದು.
ಮಶಿನಿನಿಂದ ಹಾಲು ಕರೆಯುವವರು ಇನ್ನೂ ಹುಶಾರಾಗಿರಬೇಕು, ಏಕೆಂದರೆ ಒಂದು ಹಸುವಿಗೆ ಬಂದ ಕೆಚ್ಚಲು ಬಾವು ಉಳಿದೆಲ್ಲಾ ಹಸುಗಳಿಗೆ ಹರಡುವ ಸಾಧ್ಯತೆ ಇದೆ ಎನ್ನುತ್ತಾರೆ ಶ್ರೀ ಸೀತಾರಾಮ ಹೆಗಡೆ, ನೀರ್ನಳ್ಳಿ, ಸಿರಸಿ.
ಮಂದ ಸ್ವರೂಪದ ಕೆಚ್ಚಲು ಬಾವನ್ನು ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ಮಾಡಿ ಅದು ಬರದಂತೆ ಚಿಕಿತ್ಸೆ ಮಾಡಿದರೆ ಅದರಿಂದ ತೀವ್ರ ಸ್ವರೂಪದ ಕೆಚ್ಚಲು ಬಾವು ಬರುವುದಿಲ್ಲ. ಕೆಚ್ಚಲು ಬಾವು ಬಂದು ಕೆಚ್ಚಲು ಗಟ್ಟಿಯಾದ ನಂತರ ಚಿಕಿತ್ಸೆಗೆ ಓಡಾಡುವ ಬದಲು ಮಂದ ಸ್ವರೂಪದ ಕೆಚ್ಚಲು ಬಾವನ್ನು ಸರಳವಾದ “ಸರ್ಫ಼್ ಕೆಚ್ಚಲು ಬಾವು ಪರೀಕ್ಷೆ”ಯಿಂದ ಮೊದಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಕೊಡಿಸುವುದು ಕೆಚ್ಚಲುಬಾವು ತಡೆಯುವಲ್ಲಿ ಒಂದು ಮಹತ್ತರ ಹೆಜ್ಜೆಯಾಗಬಲ್ಲದು.
ಏನಿದು ಸರ್ಫ಼್ ಕೆಚ್ಚಲು ಬಾವು ಪರೀಕ್ಷೆ?
ಈ ವಿಧಾನ ರೈತರೇ ಸುಲಭವಾಗಿ ಅವರ ಮನೆಯಲ್ಲೇ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಮಂದ ಸ್ವರೂಪದ ಕೆಚ್ಚಲು ಬಾವನ್ನು ಪತ್ತೆ ಮಾಡಬಹುದು. ಅದಕ್ಕೆ ಬೇಕಾದ ಸಾಮಗ್ರಿಗಳು ಇಷ್ಟೆ. ರೂ: 2 ಕ್ಕೆ ಸಿಗುವ 12 ಗ್ರಾಂನ ಸರ್ಫ್ ಪೌಡರ್, 400 ಮಿಲಿ ನೀರು, ಒಂದು ಚಮಚ ಅಥವಾ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳ. ಮತ್ತೇನೂ ಇಲ್ಲ. ಈ ಕೆಚ್ಚಲು ಬಾವು ಪತ್ತೆಯ ವಿಧಾನ ಬಹಳ ಸುಲಭ. ಸರ್ಫ್ ಕೆಚ್ಚಲು ಬಾವು ಪತ್ತೆ ವಿಧಾನ ಹೀಗಿದೆ;
1) ಮೊದಲು ಶೇ 3 ರ ಸರ್ಫ್ ದ್ರಾವಣ ತಯಾರಿಸಿಕೊಳ್ಳಬೇಕು. ಇದನ್ನು ತಯಾರಿಸುವುದೂ ಸುಲಭ. ಅರ್ಧ ಲೀಟರ್ ನೀರಿನ ಬಾಟಲಿ ತೆಗೆದುಕೊಂಡು ಅದರಲ್ಲಿ ನೂರು ಮಿಲಿ ನೀರು ತೆಗೆದರೆ 400 ಮಿಲಿ ಆಗುತ್ತದೆ. ಇದರಲ್ಲಿ ರೂ: 2 ಕ್ಕೆ ಸಿಗುವ 12 ಗ್ರಾಂ ನ ಸರ್ಫ್ ಪೌಡರ್ ಅನ್ನು ಮಿಶ್ರಣ ಮಾಡಬೇಕು. ಈ ದ್ರಾವಣವನ್ನು ಸುಮಾರು 100 ಆಕಳುಗಳ ಕೆಚ್ಚಲು ಬಾವು ಪರೀಕ್ಷೆ ಮಾಡಲು 3 ತಿಂಗಳವರೆಗೆ ಬಳಸಬಹುದು.
2) ಆಕಳಿನಿಂದ 10-15 ಮಿಲಿ ಹಾಲನ್ನು ಕರೆದು ಬಾಟಲಿಯ ಮುಚ್ಚಳ ಅಥವಾ ಅಗಲವಾದ ಚಮಚದಲ್ಲಿ ಅಥವಾ ಟೀ ಕಪ್ನಲ್ಲಿ ಹಾಕಿಕೊಳ್ಳಬೇಕು.
3) ಇದಕ್ಕೆ ಸಮ ಪ್ರಮಾಣದಲ್ಲಿ (10-15 ಮಿಲಿ) ಸರ್ಫ್ ದ್ರಾವಣವನ್ನು ಹಾಕಬೇಕು. ನಂತರ 10-15 ಸೆಕೆಂಡ್ವರೆಗೆ ನಿಧಾನವಾಗಿ ಮಿಶ್ರಣ ಮಾಡಬೇಕು.
4) ನಂತರ ಮಿಶ್ರಣ ಮಡ್ಡಿಯಾದರೆ ಅಥವಾ ಲೋಳೆಯ ತರವಾದರೆ ಆ ಕೆಚ್ಚಲಿಗೆ ಕೆಚ್ಚಲು ಬಾವು ಇದೆ ಎಂದು ಅರ್ಥ. ಇಲ್ಲದೇ ಇದು ತಿಳಿಯಾಗಿದ್ದರೆ ಕೆಚ್ಚಲು ಬಾವು ಇಲ್ಲ ಎಂದರ್ಥ.
5) ಈ ಸುಲಭವಾದ ಪದ್ದತಿಯಿಂದ ರೈತರು ಕೆಚ್ಚಲು ಬಾವನ್ನು ಸುಲಭವಾಗಿ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಬಹುದು.
ಇಡೀ ಲೇಖನವನ್ನು ಈ ಕೆಳಗಿನಂತೆ ಸರಳೀಕರಿಸಬಹುದು.
ಕೆಚ್ಚಲು ಬಾವು ಮಹಾ ಮಾರಿ. ಇದನ್ನು ಬರದಂತೆ ತಡೆಯುವುದು ಬಹಳ ಮುಖ್ಯ.ಬಂದ ನಂತರ ಚಿಕಿತ್ಸೆ ಬಹಳ ಕಷ್ಟ.ಗೋವು ಅತ್ಯಂತ ನೋವಿನ ದಿನಗಳಲ್ಲಿ ಕಳೆಯುತ್ತದೆ. ಕೆಚ್ಚಲು ಬಾವನ್ನು ಸರಿಯಾಗಿ ನಿರ್ವಹಿಸದೇ ಗೋವು ನೋವು ಅನುಭವಿಸಿದರೆ ಇದನ್ನು “ಗೋಹಿಂಸೆ” ಎನ್ನಬಹುದು. ಕಾರಣ ಇದರಲ್ಲಿ ರಾಜಿ ಬೇಡವೇ ಬೇಡ.
ಹಾಲು ಕರೆದು ಆದ ಕೂಡಲೇ ಆಕಳನ್ನು ೧-೨ ಗಂಟೆ ಮಲಗಲು ಬಿಡಲೇ ಬಾರದು. ಈ ಸಂದರ್ಭದಲ್ಲಿ ಮೊಲೆಯ ರಂದ್ರಗಳು ಮುಚ್ಚುತ್ತಾ ಇರುತ್ತವೆ. ಹಾಲು ಕರೆದ ತಕ್ಷಣ ಹಸುವಿನ ಗಮನವನ್ನು ಬೇರೆಡೆ ಸೆಳೆಯಲು ಅದಕ್ಕೆ ಹಿಂಡಿ ಹುಲ್ಲು ನೀಡುವ ಅಭ್ಯಾಸ ಮಾಡಿದರೆ ಅದು ಮಲಗಲಾರದು. ಇದು ರಾತ್ರಿ ಮತ್ತು ಹಗಲು ಎರಡೂ ಹೊತ್ತು ಸಾಧ್ಯ.
ಹಾಲು ನಂತರ ಹಿಂಡಿ ಹುಲ್ಲು ಹಾಕಿದ ೨-೩ ಗಂಟೆ ನಂತರ ಜಾನುವಾರನ್ನು ಸ್ವಲ್ಪ ಹೊತ್ತು ಹೊರಗೆ ಓಡಾಡಲು ಬಿಡಲೇ ಬೇಕು. ಮಲೆನಾಡಿನ ಭಾಗದ ರೈತರು ದನ ಓಡಾಡಲು ಪ್ರತಿ ದನಕ್ಕೆ ಕನೀಷ್ಟ ೨೦೦ ಚದರ ಅಡಿ ಸ್ಥಳ ಹೊಂದಿಸಿಕೊಳ್ಳಲೇಬೇಕು. ಜಾನುವಾರು ಯಾವಾಗಲೂ ಓಡಾಡಿಕೊಂಡಿರುವ ಪ್ರಾಣಿ. ಅದೂ ಓಡಾಡಿ ಕೊಂಡಿರಲಿ. ಸ್ಥಳ ಇಲ್ಲ ಎಂಬ ಸಬೂಬು ಬೇಡ. ಸ್ಥಳ ಇಲ್ಲದಿದ್ದರೆ ಜಾನುವಾರು ಸಾಕಲು ಪ್ರಶಸ್ಥವಲ್ಲ ಎಂಬುದು ಅರಿಯಿರಿ.
ಕೊಟ್ಟಿಗೆಯಲ್ಲಿ ಸ್ವಚ್ಚತೆ ಕಾಪಾಡಿ. ರಬ್ಬರ್ ಮ್ಯಾಟ್ ಬಳಸಿ. ಹಾಲು ಕರೆದ ನಂತ ಪೊಟ್ಯಾಸಿಯಂ ಪರಮ್ಯಾಂಗನೇಟ್ ದ್ರಾವಣ,ಡೆಟ್ಟಾಲ್,ಲೈಫ಼್ ಬಾಯ್ ಅಥವಾ ಇನ್ಯಾವುದೇ ಕ್ರಿಮಿನಾಶಕದ ದ್ರಾವಣ ಬಳಸಿ ಕೆಚ್ಚಲುಗಳ ಸ್ವಚ್ಚತೆ ಕಾಪಾಡಿ.
ಆಕಳಿಗೆ ನಿಯಮಿತವಾಗಿ ಉತ್ತಮ ಗುಣಮಟ್ಟದ ಖನಿಜ ಮಿಶ್ರಣ, ಹಾಲಿನ ಇಳುವರಿಗೆ ಅನುಸಾರವಾಗಿ ಸಮತೋಲಿತ ಪಶುಅಹಾರ, ನೀಡಿ.
ಪ್ರತಿ ೧೫ ದಿನಕ್ಕೊಮ್ಮೆ ಸುಲಭವಾದ “ಸರ್ಫ಼್ ಕೆಚ್ಚಲು ಬಾವು ಪರೀಕ್ಷೆ” ಯನ್ನು ಮಾಡಿ,ಮಂದ ಸ್ವರೂಪದ ಕೆಚ್ಚಲು ಬಾವು ಪತ್ತೆಯಾದರೆ ಅದನ್ನು ತಜ್ಞ ಪಶುವೈದ್ಯರಿಂದ ಚಿಕಿತ್ಸೆ ಮಾಡಿಸಿ.
ಹೀಗಿದ್ದಲ್ಲಿ ಮಾತ್ರ ಕೆಚ್ಚಲು ಬಾವೆಂಬ ಮಹಾಮಾರಿಯಿಂದ ಹೈನುರಾಸುಗಳನ್ನು ಬಚಾವು ಮಾಡಬಹುದು.