ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಡಾ. ಬಿ.ಸಿ. ಹನುಮಂತಸ್ವಾಮಿ,ತಂಡ ಶಿಕಾರಿಪುರ ತಾಲ್ಲೂಕಿನ ಚನ್ನಳ್ಳಿ ಮತ್ತು ಸುತ್ತ ಮುತ್ತ ಹಳ್ಳಿಗಳ ರೈತರ ಸಮಸ್ಯಾತ್ಮಕ ಮೆಕ್ಕೆಜೋಳದ ತಾಕಿಗೆ ಭೇಟಿ ನೀಡಿ ರೈತರ ಮೆಕ್ಕೆಜೋಳದ ಬೆಳೆಯ ಸಸ್ಯ ಸಂರಕ್ಷಣಾಕ್ರಮಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಶಿಕಾರಿಪುರ ತಾಲ್ಲೂಕಿನಲ್ಲಿ ಕೆಲವು ಭಾಗಗಳಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿ 20-30 ದಿನಗಳಾಗಿದ್ದು ಬೆಳೆಗಳಿಗೆ ಸೈನಿಕ ಹುಳುವಿನ ಬಾಧೆ ಕಂಡು ಬಂದಿದೆ.
ಆದ್ದರಿಂದ ನಿರ್ವಹಣೆ ಕ್ರಮ ಕೈಗೊಳ್ಳಲು ವಿಜ್ಞಾನಿಗಳು ಸೂಚಿಸಿದರು. ಹೆಣ್ಣು ಪತಂಗವು ಎಲೆಗಳ ಮೇಲೆ ಅಥವಾ ಕೆಳಗೆ ಅಥವಾ ಸುಳಿಯಲ್ಲಿ ಗುಂಪು ಗುಂಪಾಗಿ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯಿಂದ ಹೊರಬರುವ ಮೊದಲ ಹಂತದ ಮರಿ ಹುಳುಗಳು ಗುಂಪಾಗಿದ್ದು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ನಂತರ ಬೆಳೆದ ಮರಿಹುಳುಗಳು ಪಕ್ಕದ ಗಿಡಗಳಿಗೆ ಹರಡಿ ಜೋಳದ ಸುಳಿಯಲ್ಲಿ ಇದ್ದುಕೊಂಡು ಎಲೆಗಳನ್ನು ತಿನ್ನುತ್ತವೆ. ಹಾನಿಗೊಳಗಾದ ಎಲೆಗಳಲ್ಲಿ ಸಾಲಾಗಿ ಉದ್ದನೆಯ ರಂಧ್ರಗಳು ಕಂಡುಬರುತ್ತವೆ. ನಂತರ ಬೆಳೆದಂತಹ ಮರಿಹುಳುಗಳು ಎಲೆಗಳನ್ನು ತುದಿಯಿಂದ ಮಧ್ಯದ ಎಲೆ ಚಿಗುರು ತಿನ್ನುವುದರಿಂದ ಎಲೆಗಳು ಹರಿದಂತೆ ಗೋಚರವಾಗುತ್ತದೆ. ಕೀಟದ ಬಾಧೆಯು ತೀವ್ರವಾದಲ್ಲಿ ಸುಳಿಯನ್ನು ತಿಂದು ಅಧಿಕ ಪ್ರಮಾಣದಲ್ಲಿ ಹಿಕ್ಕೆಗಳನ್ನು ಹೊರಹಾಕುತ್ತದೆ. ಒಣಗಿದ ಈ ಹಿಕ್ಕೆಗಳು ತೌಡನ್ನು ಹೋಲುವುದರಿಂದ ಗಿಡದ ಮೇಲೆಲ್ಲಾ ತೌಡು ಬಿದ್ದಿರುವಂತೆ ಕಾಣಿಸುತ್ತದೆ.
ನಿರ್ವಹಣಾ ಕ್ರಮಗಳು
• ಬದುಗಳನ್ನು ಸ್ವಚ್ಛವಾಗಿಡುವುದು
• ಮೊಟ್ಟೆಗಳ ಗುಂಪು ಹಾಗೂ ಮರಿ ಹುಳುಗಳನ್ನು ಆರಿಸಿ ನಾಶಪಡಿಸುವುದು
• ಬೇವಿನ ಮೂಲದ ಕೀಟನಾಶಕವಾದ ಅಜಾಡಿರಕ್ಟಿನ್ 10000 ಪಿಪಿಎಂ @ 1 ಮಿ.ಲೀ. ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಿಸುವುದು.
• ಕೀಟನಾಶಕಗಳಾದ ಎಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ. @ 0.5 ಗ್ರಾಂ ಅಥವಾ ಸ್ಪೈನೋಸ್ಯಾಡ್ 45 ಎಸ್.ಸಿ. @ 0.3 ಮಿ. ಲೀ. ಅಥವಾ ಕ್ಲೋರ್ಯಾಂಟ್ರಿ ನಿಲಿಫ್ರೋಲ್ 18.5 ಎಸ್.ಸಿ. @ 0.4 ಮಿ. ಲೀ. ಅಥವಾ ಲ್ಯಾಮ್ಡಸಯಲೊತ್ರಿನ್ 4.9 ಸಿ.ಎಸ್. @ 1 ಮಿ. ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಯ ಸುಳಿಯಲ್ಲಿ ಬೀಳುವಂತೆ ಸಿಂಪಡಿಸಬೇಕು.
ಹೆಚ್ಹಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಸಂಪಕಿ೯ಸಬಹುದಾಗಿದೆ
Dr. B.C.HANUMANTHA SWAMY
Senior Scientist and Head, Krishi Vigyan Kendra, Savalanga Road, Navile, Shivamogga – 577 204, Karnataka Phone : 08182-267017Mobile : 94808 38976