ಜಿಲ್ಲೆಯ ಎಲ್ಲಾ ತಾಲೂಕುಗಳ ಪರೀಕ್ಷಾ ಕೇಂದ್ರಗಳಲ್ಲಿ ನಿರೀಕ್ಷೆಯಂತೆ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಸುಗಮವಾಗಿ ಆರಂಭಗೊಂಡು ಮೊದಲ ದಿನದ ಪರೀಕ್ಷೆಗಳು ಮುಕ್ತಾಯಗೊಂಡಿವೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಅವರು ಇಂದು ನಗರದ ದುರ್ಗಿಗುಡಿ ಸೇರಿದಂತೆ ಕೆಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಪರೀಕ್ಷಾರ್ಥಿಗಳು ಸಾಮಾಜಿಕ ಅಂತರಕಾಯ್ದುಕೊಂಡು ಕೇಂದ್ರ ಪ್ರವೇಶಿಸುವುದನ್ನು ಖುದ್ದು ಗಮನಿಸಿದ್ದೇನೆ. ಇದಕ್ಕೆ ಮಕ್ಕಳ ಪೋಷಕರ ಸಹಕಾರವೂ ಕೂಡ ಮುಖ್ಯವಾಗಿದೆ ಎಂದರು.
ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ಎಲ್ಲಾ ಪರೀಕ್ಷಾರ್ಥಿಗಳ ಆರೋಗ್ಯ ಹಾಗೂ ಸುರಕ್ಷತೆಗೆ ಅಗತ್ಯ ಕ್ರಮ ವಹಿಸಲಾಗಿದ್ದು, ಪ್ರತಿ ವಿದ್ಯಾರ್ಥಿ ವೈದ್ಯಕೀಯ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೆ ಪ್ರತಿ ವಿದ್ಯಾರ್ಥಿಗೆ ಸ್ಯಾನಿಟೈಜರ್ ಹಾಗೂ ಮಾಸ್ಕ್ಗಳನ್ನು ವಿತರಿಸಲಾಗಿದೆ ಎಂದವರು ತಿಳಿಸಿದರು.
ಇಲಾಖೆಯ ಮಾರ್ಗಸೂಚಿಯಂತೆ ನಿಗಧಿತ ಅಂತರ ಕಾಯ್ದುಕೊಳ್ಳುವಲ್ಲಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಹಾಗೂ ಸಿಬ್ಬಂಧಿಗಳು ಅಗತ್ಯ ಕ್ರಮ ವಹಿಸಿದ್ದಾರೆ ಎಂದ ಅವರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವ ಹಾಗೆ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗಿತ್ತು. ಅಂತೆಯೇ ದೂರದ ಊರುಗಳಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಹಾಗೂ ಖಾಸಗಿ ಶಾಲೆಗಳಿಂದ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಸುಗಮವಾಗಿ ನಡೆಯಲು ಸಹಕಾರಿಯಾಗಿತ್ತು ಎಂದವರು ನುಡಿದರು.
ದೂರದ ಊರುಗಳಿಂದ ಪರೀಕ್ಷಾ ಕೇಂದ್ರಕ್ಕೆ ಬೇಗನೆ ಬರುವ ವಿದ್ಯಾರ್ಥಿಗಳಿಗಾಗಿ ಬಿಸ್ಕತ್ ಹಾಗೂ ಕುಡಿಯುವ ನೀರಿನ ಬಾಟಲ್ಗಳನ್ನು ಒದಗಿಸಲು ಕ್ರಮವಹಿಸಲಾಗಿದೆ. ಅಲ್ಲದೇ ಪ್ರತಿ ವಿದ್ಯಾರ್ಥಿಯು ಪರೀಕ್ಷಾ ಕೇಂದ್ರಕ್ಕೆ ಬರುವ ಮುನ್ನ ಕುಡಿಯುವ ನೀರು, ಅಲ್ಪ ಉಪಹಾರವನ್ನು ಸಂಗಡ ತೆಗೆದುಕೊಂಡು ಬರುವಂತೆ ಸೂಚಿಸಲಾಗಿದೆ ಎಂದವರು ತಿಳಿಸಿದರು.
ಅಲ್ಲದೇ ಹಾಸ್ಟೆಲ್ನಲ್ಲಿದ್ದು, ಪರೀಕ್ಷೆಗೆ ಹಾಜರಾಗಬಯಸುವ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯವೆನಿಸಿದಲ್ಲಿ ವಿದ್ಯಾರ್ಥಿಗಳು ತಮ್ಮ ಓರ್ವ ಪೋಷಕರೊಂದಿಗೆ ಹಾಸ್ಟೆಲ್ನಲ್ಲಿ ತಂಗಲು ಅವಕಾಶ ನೀಡಲಾಗಿದೆ ಎಂದ ಅವರು, ಪರೀಕ್ಷಾರ್ಥಿಗಳು ಪರೀಕ್ಷೆಯ ನಂತರ ಅನಗತ್ಯವಾಗಿ ನಗರದಲ್ಲಿ ಓಡಾಡುವುದನ್ನು, ಸುರಕ್ಷತಾ ಕ್ರಮಗಳನ್ನು ಅನುಸರಿದೆ ಎಲ್ಲೆಂದರಲ್ಲಿ ಓಡಾಡುವುದು ಸೂಕ್ತವಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಲು ಕಾರಣರಾಗುವಂತೆ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರಣಾಂತರಗಳಿಂದ ಹಾಗೂ ನಿರ್ಬಂಧಿತ ಪ್ರದೇಶಗಳಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಇಲಾಖೆಯು ತೀರ್ಮಾನಿಸಿದೆ. ಅವಕಾಶ ವಂಚಿತರು ಈ ಅವಕಾಶವನ್ನು ಪಡೆದು ಪರೀಕ್ಷೆ ಬರೆಯಬಹುದಾಗಿದೆ ಎಂದವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್ ಅವರು ಮಾತನಾಡಿ, ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ಅನೇಕ ಪರೀಕ್ಷಾ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ ವೀಕ್ಷಣೆ ನಡೆಸಲಾಗಿದೆ. ಭೇಟಿ ನೀಡಿದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಪರೀಕ್ಷೆಗಳು ನಡೆದಿದ್ದು, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ ಜಿಲ್ಲೆಯ 752ವಿದ್ಯಾರ್ಥಿಗಳು ಹಾಸ್ಟೆಲ್ಗಳಲ್ಲಿ ಉಳಿದುಕೊಂಡಿದ್ದು, ಶೇ.99ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದರು.
ಪರೀಕ್ಷೆಗೆ ಹಾeರಾಗುತ್ತಿರುವ ವಿದ್ಯಾರ್ಥಿಗಳಿಗೆ ಶುಭಕೋರಿರುವ ಸಂಸದ ಬಿ.ವೈ.ರಾಘವೇಂದ್ರ ಅವರು ಸಂದೇಶ ನೀಡಿದ್ದು, ಎಸ್.ಎಸ್.ಎಲ್.ಸಿ. ಪರೀಕ್ಷೆ ಪ್ರತಿ ವಿದ್ಯಾರ್ಥಿಯ ಜೀವನದ ಪ್ರಮುಖ ಘಟ್ಟವಾಗಿದೆ. ಕೊರೋನ ಸೋಂಕಿನ ಕಾರಣಕ್ಕಾಗಿ ಪೋಷಕರು ಮತ್ತು ಮಕ್ಕಳು ಆತಂಕಪಡುವ ಅಗತ್ಯವಿಲ್ಲ. ಸರ್ಕಾರ ಮಕ್ಕಳಿಗೆ ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದವರು ತಿಳಿಸಿದ್ದಾರೆ.
ಪರೀಕ್ಷಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸುವಂತೆ ಹಾಗೂ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಶುಭ ಹಾರೈಸಿದ್ದಾರೆ.