ಕರೋನಾ ನಂಜಾಣು ಸೋಂಕಿನಿಂದ ಕೃಷಿ ಚಟುವಟಿಕೆಗಳೇನೂ ನಿಲ್ಲಲಿಲ್ಲ, ಆದರೆ ರೈತರಿಗೆ ಅವರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು, ಅದರಲ್ಲೂ ಹಣ್ಣ, ಹಂಪಲು, ತರಕಾರಿಗಳನ್ನು ಮಾರಾಟ ಮಾಡಲು ತೊಂದರೆಯಾಗಿ ರೈತರಿಗೆ ನಷ್ಟವಾಯಿತು. ಆದರೆ ಇದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯ ಉಂಟಾಗಿದೆ.
ಈ ನಿಟ್ಟಿನಲ್ಲಿ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ವ್ಯವಸ್ಥೆಯಿಂದ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆತು ಲಾಭ ಗಳಿಸಬಹುದೆಂದು ತಮ್ಮ ಗ್ರಾಮದ ರೈತರಿಗೆ ಮನವರಿಕೆ ಮಾಡಿದ ಡಾ.ಟಿ.ಹೆಚ್.ಗೌಡ, ನಿವೃತ್ತ ವಿಸ್ತರಣಾ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ಮಾವು, ಪಪ್ಪಾಯ ಮತ್ತು ನುಗ್ಗೆ ಬೆಳೆದ ರೈತರನ್ನು ಒಗ್ಗೂಡಿಸಿ, ಚನ್ನಗಿರಿ ತಾಲ್ಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ದಿನಾಂಕ 31-05-2020ರಂದು ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಿದರು. ಈ ದಿನ ಬೆಂಗಳೂರಿನ ಟಿ.ಸಿ.ಎಸ್. ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ರವರು ಅವರ ತಾಯಿಯವರೊಂದಿಗೆ ಸಾವಯವ ಮಾವಿನ ಹಣ್ಣುಗಳನ್ನು ಖರೀದಿಸುವುದರ ಮೂಲಕ ಉದ್ಘಾಟಿಸಿದರು. ಖರೀದಿಸಿ, ನೆರೆದ ರೈತರನ್ನು, ಗ್ರಾಮಸ್ಥರನ್ನು ಕುರಿತು ಮಾತನಾಡಿದ ಟೆಕ್ಕಿ, ನಮ್ಮಂತಹ ಟೆಕ್ಕಿಗಳು ಜೊತೆಗೆ ಇತರೆ ಕೃಷಿಯೇತರ ಕೆಲಸ ಮಾಡುತ್ತಿದ್ದ ಯುವಕರೂ ಸಹ ಕೃಷಿ ಮತ್ತು ತೋಟಗಾರಿಕೆಯಲ್ಲಿ ಇತ್ತೀಚಿಗೆ ಆಸಕ್ತಿ ತೋರಿಸುತ್ತಿರುವುದು ಕೃಷಿಯಲ್ಲಿ ಉತ್ತಮವಾದ ಬೆಳವಣಿಗೆ ಎಂದರು. ಆದರೆ, ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಗಳಾಗಬೇಕಿದೆ.
ರೈತರು ಗ್ರಾಹಕರಿಗೆ ನೇರ ಮಾರಾಟ ಮಾಡುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು, ಅಲ್ಲದೆ, ಈ ರೀತಿ ನೇರ ಮಾರಾಟದಿಂದ ರೈತರು ಮತ್ತು ಗ್ರಾಹಕರ ಮಧ್ಯ ಉತ್ತಮ ಸಂಬಂಧ ಬೆಳೆದು ಗುಣಮಟ್ಟದ ಉತ್ಪನ್ನಗಳು ದೊರೆಯುತ್ತವೆ ಎಂದರು. ಡಾ. ಟಿ.ಹೆಚ್.ಗೌಡರವರು ಮಾಡನಾಡುತ್ತಾ, ರೈತರ ನೇರ ಮಾರಾಟ ವ್ಯವಸ್ಥೆ ಇತರೆ ರೈತರಿಗೆ ಪ್ರೇರಣೆಯಾಗುವುದು ಎಂದು ಅಭಿಪ್ರಾಯಿಸಿದರು. ಈ ರೀತಿಯ ನೇರ ಮಾರಾಟದ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಿದ ಡಾ. ಟಿ.ಹೆಚ್.ಗೌಡರವರ ಸಲಹೆಯನ್ನು ರೈತರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು ಗ್ರಾಮದ ರೈತರಾದ ಹಾಲೇಶಪ್ಪ, ಹುಮಾಯೂನ್, ಓಂಕಾರಪ್ಪ ಇತರರು ಇದ್ದರು.