ನಗರದ ಹೃದಯ ಭಾಗದಲ್ಲಿರುವ ನೆಹರೂ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣವನ್ನು ದೇಶದ ಮಾದರಿ ಕ್ರೀಡಾಂಗಣಗಳಲ್ಲೊಂದನ್ನಾಗಿ ಮಾರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳು, ಮಹಾನಗರಪಾಲಿಕೆ ಆಯುಕ್ತರು, ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಕ್ರೀಡಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಈಗಾಗಲೇ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನೆಹರೂ ಕ್ರೀಡಾಂಗಣದ ಸರ್ವಾಂಗೀಣ ವಿಕಾಸ ಹಾಗೂ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕಾಗಿ ಹತ್ತು ಕೋಟಿ ರೂ.ಗಳನ್ನು ಹಾಗೂ ಗೋಪಾಳದಲ್ಲಿನ ಕ್ರೀಡಾಂಗಣಕ್ಕೆ ಈಜುಕೊಳ ಹಾಗೂ ವಿವಿಧ ಉದ್ಧೇಶಿತ ಕಾಮಗಾರಿಗಳಿಗಾಗಿ ಎಂಟೂವರೆ ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದರು. ಪ್ರಸ್ತುತ ಸದರಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಜಿಲ್ಲಾಡಳಿತ, ಸ್ಮಾರ್ಟ್‍ಸಿಟಿ ಯೋಜನೆಯ ನಿರ್ದೇಶಕರು ಹಾಗೂ ಕ್ರೀಡಾಸಂಸ್ಥೆಗಳ ಪ್ರತಿನಿಧಿಗಳ ಸಲಹೆಯನ್ನು ಪಡೆದು, ಸ್ಮಾರ್ಟ್‍ಸಿಟಿ ಯೋಜನೆಯಡಿ ವಿವಿಧ ಹಂತಗಳಲ್ಲಿ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ರೂಪಿಸಿ, ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಉದ್ದೇಶಿತ ಕಾಮಗಾರಿಗಳು ನಿಗಧಿತ ಕಾಲಮಿತಿಯಲ್ಲಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದವರು ನುಡಿದರು.
ನಿರೀಕ್ಷೆಯಂತೆ ಎಲ್ಲಾ ಕೆಲಸ ಪೂರ್ಣಗೊಂಡ ನಂತರ ಕ್ರೀಡಾಂಗಣದ ನಿರ್ವಹಣೆ ವ್ಯವಸ್ಥಿತವಾಗಿ ನಡೆಯಬೇಕು. ಇದರ ಉಸ್ತುವಾರಿ, ನಿರ್ವಹಣೆ ಹಾಗೂ ಮೇಲ್ವಿಚಾರಣೆಗಾಗಿ ಅಧಿಕಾರಿಗಳು, ಕ್ರೀಡಾಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಆಸಕ್ತ ಸಾರ್ವಜನಿಕರ ಸಮಿತಿಯೊಂದನ್ನು ರಚಿಸಲು ಉದ್ದೇಶಿಸಲಾಗಿದೆ. ಈ ಸಮಿತಿಯು ಇಲ್ಲಿನ ನಿರ್ವಹಣೆಯ ಖರ್ಚು ವೆಚ್ಚ ಹಾಗೂ ಆಗಾಗ್ಗೆ ಬರುವ ಸಮಸ್ಯೆಗಳು, ಅನುದಾನ ಹಾಗೂ ಶಾಶ್ವತ ನಿರ್ವಹಣೆಯ ಕುರಿತು ಸಮಿತಿ ಅಗತ್ಯ ನಿರ್ಣಯ ಕೈಗೊಳ್ಳಲಿದೆ ಎಂದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಆಯಾಮಗಳಲ್ಲಿ ಅನುದಾನ ಪಡೆದು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.
ಶಿವಮೊಗ್ಗದಲ್ಲಿರುವ ಕ್ರೀಡಾಂಗಣವು ಬಹು ವಿಶಾಲವಾಗಿದ್ದು, ಕ್ರೀಡಾಸಕ್ತರಿಗೆ ಪೂರಕ ವಾತಾವರಣ ಕಲ್ಪಿಸಿದೆ. ಯುವ ಕ್ರೀಡಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಾಲಕ-ಬಾಲಕಿಯರಿಗಾಗಿ ಪ್ರತ್ಯೇಕವಾದ ವಸತಿ ನಿಲಯ ವ್ಯವಸ್ಥೆ ಕಲ್ಪಿಸಬೇಕಾದ ಅಗತ್ಯವಿದೆ ಎಂದ ಅವರು, ಸ್ಮಾರ್ಟ್‍ಸಿಟಿಯಂತೆಯೇ ಸ್ಮಾರ್ಟ್ ಕ್ರೀಡಾಂಗಣವೂ ಆಗಲಿದೆ. ಕ್ರೀಡಾಂಗಣದಲ್ಲಿ ಇರುವ ಸಿಂಥೆಟಿಕ್ ಟ್ರ್ಯಾಕನ್ನು ತಜ್ಞರ ಅಭಿಪ್ರಾಯ ಪಡೆದು ಅಭಿವೃದ್ಧಿಪಡಿಸಲಾಗುವುದು ಎಂದರು.
ಒಳಾಂಗಣ ಕ್ರೀಡಾಂಗಣದಲ್ಲಿ ಆರು ಷಟಲ್‍ಬ್ಯಾಡ್ಮಿಂಟನ್ ಕೋರ್ಟ್ ಇದ್ದು, ಅವುಗಳಲ್ಲಿ 2ಕೋರ್ಟುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳ ಅನುಕೂಲಕ್ಕಾಗಿ ಸಿಂಥೆಟಿಕ್ ಟ್ರ್ಯಾಕನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಂತೆಯೇ ಹ್ಯಾಂಡ್‍ಬಾಲ್, ಫುಟ್‍ಬಾಲ್, ಕಬ್ಬಡ್ಡಿ, ಹಾಕಿ ಕೋರ್ಟು ಅಲ್ಲದೇ ವಾಕಿಂಗ್ ಟ್ರ್ಯಾಕ್ ಅಭಿವೃದ್ದಿಪಡಿಸಲಾಗುವುದು. ಈ ಎಲ್ಲಾ ಕಾಮಗಾರಿಗಳು ಮುಂದಿನ 2-3ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸ ತಮಗಿದೆ. ಅಂತೆಯೇ ಗೋಪಾಳದ ಕ್ರೀಡಾಂಗಣವನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಉದ್ದೇಶಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮಹಾನಗರಪಾಲಿಕೆ ಆಯುಕ್ತ ಚಿದಾನಂದ ಎಸ್.ವಟಾರೆ, ಯುವ ಸಬಲೀಕರಣ ಕ್ರೀಡಾ ಇಲಾಖೆಯ ನಿರ್ದೇಶಕ ಮಂಜುನಾಥ್, ರಾಜ್ಯ ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಜ್ಯೋತಿಪ್ರಕಾಶ್, ದಿವಾಕರಶೆಟ್ಟಿ, ಬಳ್ಳೆಕೆರೆ ಸಂತೋಷ್, ಮಾಲತೇಶ್ ಸೇರಿದಂತೆ ಕ್ರೀಡಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಕೋಚ್‍ಗಳು ಉಪಸ್ಥಿತರಿದ್ದರು.