ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಘೋಷಿತ ಹಾಗೂ ಅಘೋಷಿತ ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆಗಳ ಕುರಿತು ವಾಸ್ತವ ವರದಿಯನ್ನು ಪಡೆದು ಕ್ರಮ ಕೈಗೊಳ್ಳಲು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹಾಗೂ ಪ್ರಸನ್ನಕುಮಾರ್ ನೇತೃತ್ವದಲ್ಲಿ 10ಜನರ ತಂಡವನ್ನು ರಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಮೇ 01ರಂದು ಪೌರಾಡಳಿತ ಸಚಿವ ಭೈರತಿ ಬಸವರಾಜು ಅವರು ಶಿವಮೊಗ್ಗ ನಗರಕ್ಕೆ ಆಗಮಿಸಿ, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆ ವತಿಯಿಂದ ಕೈಗೊಂಡಿರುವ ಕಾಮಗಾರಿ ಹಾಗೂ ಅಭಿವೃದ್ಧಿ ಚಟುವಟಿಕೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸುವ ಹಿನ್ನೆಲೆಯಲ್ಲಿ ಪಾಲಿಕೆಯ ಕಾರ್ಪೊರೇಟರ್‍ಗಳು ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಘೋಷಿಸಲಾಗಿರುವ ಹಾಗೂ ಘೋಷಿಸದಿರುವ ಕೊಳಚೆ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ, ಕಂದಾಯ ನಿಗಧಿಪಡಿಸುವ ಹಾಗೂ ಅಲ್ಲಿನ ಅರ್ಹ ನಿವಾಸಿಗಳಿಗೆ ಹಕ್ಕುಪತ್ರ ಒದಗಿಸುವ ಬಗ್ಗೆಯೂ ಸಮಿತಿ ವರದಿ ನೀಡಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದರಿಂದಾಗಿ ಪಾಲಿಕೆಯ ಆದಾಯವೂ ಹೆಚ್ಚಾಗಲಿದೆ ಎಂದರು.
ಮುಂದಿನ ಒಂದು ವಾರದ ಅವಧಿಯೊಳಗಾಗಿ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯ ಯಾವುದೇ ವಾರ್ಡುಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಕಂಡುಬರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಆಶ್ರಯ ಮನೆ, ಚರಂಡಿಗಳ ನಿರ್ಮಾಣ ಮುಂತಾದ ಅಭಿವೃದ್ದಿ ಕಾರ್ಯಗಳಲ್ಲಿ ಕಾವiಗಾರಿ ಅಪೂರ್ಣವಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬರುತ್ತಿವೆ. ಅಂತಹ ಗುತ್ತಿಗೆದಾರರನ್ನು ಕರೆದು ಎಚ್ಚರಿಕೆ ನೀಡಬೇಕಲ್ಲದೆ ಅಂತಹ ಗುತ್ತಿಗೆದಾರರ ಮೇಲೆ ಕಾನೂನು ರೀತ್ಯ ಮೊಕದ್ದಮೆ ದಾಖಲಿಸಬೇಕು ಎಂದವರು ನುಡಿದರು.
ನಗರದ ಬಹುತೇಕ ವಾರ್ಡುಗಳಲ್ಲಿ ಕೈಗೊಳ್ಳಲಾಗಿರುವ ಯು.ಜಿ.ಡಿ. ಕಾಮಗಾರಿ ಪೂರ್ಣಗೊಳ್ಳದೆ ಉಳಿದಿವೆ. ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇಂತಹ ಕಾರ್ಯನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಸಿದ ಅವರು, ನಗರದ ಕೆಲವು ಭಾಗಗಳಲ್ಲಿ ಪಾಲಿಕೆಯ ಆಸ್ತಿ ಒತ್ತುವರಿಯಾಗಿರುವ ಬಗ್ಗೆ ದೂರುಗಳಿವೆ. ಆ ವಾರ್ಡಿನ ಪ್ರತಿನಿಧಿಗಳು ಒತ್ತುವರಿಯಾದ ಆಸ್ತಿಗಳ ವಿವರಗಳನ್ನು ನೀಡುವಂತೆ ಅವರು ಸೂಚಿಸಿದರು.
ಪ್ರತಿ ಮಳೆಗಾಲದಲ್ಲೂ ನಗರದ ರಾಜಾ ಕಾಲುವೆಗಳಲ್ಲಿ ನೀರು ತುಂಬಿ ಜನವಸತಿ ಪ್ರದೇಶಕ್ಕೆ ಹರಿದು ತೀವ್ರ ತೊಂದರೆ ಉಂಟು ಮಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಈಗಾಗಲೇ ಆರಂಭಿಸಲಾಗಿರುವು ರಾಜಾಕಾಲುವೆಗಳ ಕಾಮಗಾರಿಗಳನ್ನು ಮಳೆ ಬೀಳುವುದರೊಳಗಾಗಿ ಅಥವಾ ಮುಂದಿನ 15ದಿನಗಳೊಳಗಾಗಿ ಪೂರ್ಣಗೊಳಿಸುವಂತೆ ಅವರು ಗುತ್ತಿಗೆದಾರರಿಗೆ ಸೂಚಿಸಿದರು.
ನಗರದಲ್ಲಿ ಆಶ್ರಯ ಫಲಾನುಭವಿಗಳ ಸಮಸ್ಯೆಯನ್ನು ತಹಶೀಲ್ದಾರ್ ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳ ಉಪಸ್ಥಿತರಿಯಲ್ಲಿ 94ಸಿಸಿ. ಯೋಜನೆಯಡಿ ಅರ್ಜಿಗಳನ್ನು ಪರಿಶೀಲಿಸಿ, ಅದಾಲತ್ ಮೂಲಕ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ವ್ಯಾಪ್ತಿಯ 5ಕೆರೆಗಳ ಅಭಿವೃದ್ಧಿಗೊಳಿಸಲು ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೊಳಪಟ್ಟು ನಗರದ ಒಟ್ಟು 72ಕೆರೆಗಳಲ್ಲಿ 25ಕೆರೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಹಾನಗರಪಾಲಿಕೆ ವಿರೋಧಪಕ್ಷದ ಮುಖಂಡ ಯೋಗೀಶ್ ಅವರು ಮಾತನಾಡಿ, ನಗರದ ರಾಜಾಕಾಲುವೆಗೆ ಶಿಕಾರಿಪುರದಲ್ಲಿ ಮಾಡಿರುವಂತೆ ಇಲ್ಲಿಯೂ ಸ್ಮಾರ್ಟ್‍ಸಿಟಿ ಯೋಜನೆಯಡಿ ಕವರ್ ಡಕ್ಟ್ ಮಾಡಲು ಕ್ರಮ ಕೈಗೊಳ್ಳಬೇಕು. ಇದರಿಂದಾಗಿ ನಗರದ ಸೌಂದರ್ಯ ಹೆಚ್ಚಲಿದೆ ಎಂದ ಅವರು, ನಿವೃತ್ತಿಯಿಂದ ತೆರವಾಗಿರುವ 124ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಕೇಂದ್ರದ ಮೂಲಕ 14ನೇ ಹಣಕಾಸು ಯೋಜನೆಯಡಿ ಬರಬೇಕಾದ ಅನುದಾನ ನಿಧಾನವಾಗಿದ್ದು, ಕೂಡಲೇ ಬಿಡುಗಡೆಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಸಚಿವರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಮೇಯರ್ ಶ್ರೀಮತಿ ಸುವರ್ಣ ಶಂಕರ್, ಉಪಮೇಯರ್ ಶ್ರೀಮತಿ ಸುರೇಖಾ, ಆಯುಕ್ತ ಚಿದಾನಂದ ಎಸ್.ವಟಾರೆ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್ ಸೇರಿದಂತೆ ಪಾಲಿಕೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.