ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂತರ್ಜಲವನ್ನು ಹೆಚ್ಚಿಸುವ ಅಂತರ್ಜಲ ಚೇತನ ಯೋಜನೆಗೆ ನಾಳೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಚಾಲನೆ ನೀಡಲಾಗುತ್ತಿದ್ದು, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಶಿವಮೊಗ್ಗ ತಾಲೂಕಿನ ಸೂಗೂರಿನಲ್ಲಿ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮ ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಚಾಲನೆ ನೀಡುವರು.
ಮಳೆ ನೀರು ಸಂಗ್ರಹಣೆ ಮತ್ತು ಮಣ್ಣಿ ಸವಕಳಿ ತಡೆಯುವುದು, ಮಣ್ಣಿನ ತೇವಾಂಶ ಹೆಚ್ಚಿಸುವುದು, ಸ್ವಾಭಾವಿಕ ಹಳ್ಳಗಳುದ್ದಕ್ಕೂ ಕೃತಕ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸುವುದು ಹಾಗೂ ಸ್ವಾಭಾವಿಕ ಸಸ್ಯವರ್ಗ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಈ ಯೋಜನೆಯ ಅನುಷ್ಠಾನದಿಂದಾಗಿ ನೈಸರ್ಗಿಕ ನೀರಿನ ಮೂಲಗಳ ಮತ್ತು ಮಳೆನೀರಿನ ಕೊಯ್ಲಿನ ಜೊತೆಗೆ ನೈಸರ್ಗಿಕ ಹಳ್ಳಗಳ ಜಾಲಗಳನ್ನು ಪುನಶ್ಚೇತನಗೊಳಿಸುವಲ್ಲಿ ಸಹಕಾರಿಯಾಗಲಿದೆ. ನೀರಿನ ಮೂಲಗಳಲ್ಲಿ ಮಣ್ಣಿನ ಸವಕಳಿ ಹಾಗೂ ಹೂಳು ತುಂಬುವಿಕೆ ಕಡಿಮೆಯಾಗಲಿದೆ. ಕೆರೆಗಳಲ್ಲಿ ನೀರಿನ ಹರಿವು ಹೆಚ್ಚಾಗಲಿದೆ ಅಲ್ಲದೇ ಕೆರೆಗಳ ಪುನರುಜ್ಜೀವಗೊಳಿಸಲು ಹಾಗೂ ನದಿ ಜಲಾನಯನ ಪ್ರದೇಶಗಳಲ್ಲಿ ಸ್ವಾಭಾವಿಕ ಸಸ್ಯವರ್ಗ ಅಭಿವೃದ್ಧಿಪಡಿಸುವಲ್ಲಿ ನೆರವಾಗಲಿದೆ.
ಮಣ್ಣಿ ಸವಕಳಿ ನಿಯಂತ್ರಿಸಲು ಮತ್ತು ಅಂತರ್ಜಲ ಮರುಪೂರಣ ಮಾಡುವಲ್ಲಿ ಅರಣ್ಯೀಕರಣ, ಹರಿಯುವ ನೀರಿನ ವೇಗವನ್ನು ನಿಧಾನಗೊಳಿಸಿ ಮಳೆನೀರನ್ನು ಇಂಗಿಸಲು ಕಲ್ಲುಗುಂಡುತಡೆ, ತ್ವರಿತವಾಗಿ ಅಂತರ್ಜಲ ಮರುಪೂರಣಗೊಳಿಸಲು ಮರುಪೂರಣ ಬಾವಿಗಳು ಮತ್ತು ಕೊಳವೆಬಾವಿಗಳು ಮತ್ತು ದೀರ್ಘಕಾಲದವರೆಗೆ ಮೇಲ್ಮೈ ನೀರು ಲಭಿಸುವಂತೆ ನೋಡಿಕೊಳ್ಳಲು ಕರೆಹೊಂಡ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಯೋಜನೆಯ ಆರಂಭದ ಹಂತದಲ್ಲಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಅಂತರ್ಜಲ ಚೇತನ ಯೋಜನೆಗೆ ಚಾಲನೆ ದೊರೆಯಲಿದೆ. ಈ ಯೋಜನೆಯಡಿ ರಾಜ್ಯದ ಸುಮಾರು 23,000ಕೆರೆಗಳಲ್ಲಿ 5300ಕೆರೆಗಳು ಶಿವಮೊಗ್ಗ ಜಿಲ್ಲೆಯೊಂದರಲ್ಲಿರುವುದು ವಿಶೇಷ. ಒಂದು ವರ್ಷದ ಅಲ್ಪಾವಧಿಯಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಇದರ ಅನುಷ್ಠಾನ ಮತ್ತು ಮೇಲುಸ್ತುವಾರಿಯನ್ನು ನೋಡಿಕೊಳ್ಳಲಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲೆಗೆ ಸುಮಾರು 252ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ.
ವಿಶೇಷವಾಗಿ ಜಿಲ್ಲೆಯ 1650 ಗ್ರಾಮಗಳ ವ್ಯಾಪ್ತಿಯಲ್ಲಿ 345 ಕಿರು ಜಲಾನಯನಗಳ ಸುಮಾರು 5,000 ಚ.ಕೀ. ಪ್ರದೇಶದಲ್ಲಿ ಅಂತರ್ಜಲ ವೃದ್ಧಿಗೊಳಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯ ಎಲ್ಲಾ 271ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈ ಅಂತರ್ಜಲ ಸಂರಕ್ಷಣೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಸುಮಾರು 8.82ಲಕ್ಷ ಜನರಿಗೆ ಉಪಯೋಗಲಿದೆ. ಈ ಯೋಜನೆಯಡಿ 16,25ಬೋಲ್ಡರ್ ಚೆಕ್(ಕಲ್ಲುಗುಂಡು ತಡೆ) ನಿರ್ಮಾಣ, 15,948ಇಂಗುಬಾವಿ, 307ಇಂಗುಕೊಳವೆ, 221 ಕೆರೆ ಹೊಂಡ ಸೇರಿದಂತೆ ಒಟ್ಟು 32,731ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕೈಗೊಳ್ಳಲಾಗುವ ಈ 4000ಕಾಮಗಾರಿಗಳನ್ನು ಮೇ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ.
ಶಿವಮೊಗ್ಗ ನಗರದಲ್ಲಿನ 70ಕೆರೆಗಳ ಪೈಕಿ 25ಕೆರೆಗಳ ಅಭಿವೃದ್ಧಿಯನ್ನು ಜಲಾಮೃತ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸರ್ಕಾರವು ಸಣ್ಣ ನೀರಾವರಿ ಯೋಜನೆಯಡಿ 16.00ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಿದೆ.
ಉದ್ದೇಶಿತ ಅಂತರ್ಜಲ ಚೇತನ ಯೋಜನೆಗೆ ನಾಳೆ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಚಾಲನೆ ದೊರೆಯಲಿದೆ. ಶಿವಮೊಗ್ಗ ತಾಲೂಕಿನ ಸೂಗೂರಿನಲ್ಲಿ, ತೀರ್ಥಹಳ್ಳಿ ತಾಲೂಕಿನ ಆರಗ, ಭದ್ರಾವತಿ ತಾಲೂಕಿನ ದೊಡ್ಡೇರಿ, ಸೊರಬ ತಾಲೂಕಿನ ಬಾರಂಗಿ, ಶಿಕಾರಿಪುರ ತಾಲೂಕಿನ ತರಲಘಟ್ಟ, ಹೊಸನಗರ ತಾಲೂಕಿನ ಮೇಲಿನ ಬೇಸಿಗೆ, ಸಾಗರ ತಾಲೂಕಿನ ಕೆಳದಿ ಗ್ರಾಮಗಳಲ್ಲಿ ಉದ್ಘಾಟನಾ ಸಮಾರಂಭಗಳು ನಡೆಯಲಿವೆ.
ಪ್ರತಿ ಪಂಚಾಯಿತಿಗಳಿಂದ ಅವುಗಳ ವ್ಯಾಪ್ತಿಯಲ್ಲಿರುವ ಕಿರು ಜಲಾನಯನದಲ್ಲಿ ಜಲ ಮತ್ತು ಸಸ್ಯ ಸಂಪನ್ಮೂಲ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿದೆ. ಕಿರು ಜಲಾನಯನದಲ್ಲಿ ಆಗುವ ಜಲಮೂಲಗಳ ಮಾಪನ ಮತ್ತು ಅದರ ಅರಿವು ಉಂಟುಮಾಡಿ ಸಂರಕ್ಷಣೆ ಮತ್ತು ಸದ್ಭಳಕೆಗೆ ಜವಾಬ್ದಾರಿ ತೆಗೆದುಕೊಳ್ಳಬೇಕು.
ಜಲತಾಣಗಳ ಸುತ್ತಲೂ ಸ್ಥಳೀಯ ಸ್ವಾಭಾವಿಕ ಸಸ್ಯವರ್ಗಗಳ ಪುನರ್ ಸ್ಥಾಪನೆ ಮತ್ತು ಪರಿಸರ ಸುಸ್ಥಿರತೆಗೆ ಕಿರಿದಾದ ಅರಣ್ಯ ಸ್ಥಾಪನೆ, ಪಕ್ಷಿ, ದುಂಬಿ ಮತ್ತು ಪ್ರಾಣಿ ಹಾಗೂ ಮನುಷ್ಯರ ಪ್ರಕೃತಿಧಾಮಗಳ ಸ್ಥಾಪಿಸುವಲ್ಲಿ ಸಮುದಾಯ ಮುಂದಾಗಬೇಕು. ಕೃಷಿಕರ ಆರ್ಥಿಕ ಅಭಿವೃದ್ಧಿ ಹಾಗೂ ಅವರ ಹೊಲಗಳಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ತಕ್ಕಂತೆ ಕಾರ್ಯಕ್ರಮಗಳ ಅನುಷ್ಠಾನ, ಸ್ವಾಭಾವಿಕ ಸಸ್ಯವರ್ಗ ಶೇಖಡಾವಾರು ವಿಸ್ತರಣೆ, ಕೃಷಿಯಿಂದ ಕೃಷಿ ಅರಣ್ಯ, ಕೃಷಿ ತೋಟಗಾರಿಕೆ ಪ್ರದೇಶ ವಿಸ್ತರಿಸುವಲ್ಲಿ ಗಮನಹರಿಸುವ ಅಗತ್ಯವಿದೆ.
ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದ್ದು, ಮಳೆಯ ನೀರು ಭೂಮಿಯಲ್ಲಿ ಇಂಗಿಸುವ ಮೂಲಕ ಅಂತರ್ಜಲ ಮಟ್ಟದ ಹೆಚ್ಚಿಸುವಲ್ಲಿ ಈ ಯೋಜನೆ ಸಹಕಾರಿಯಾಗಲಿದೆ.