ಉದರ ಪೋಷಣೆಗಾಗಿ ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಹಾಗೂ ದೇಶದ ಹೊರರಾಜ್ಯಗಳಿಂದ ಕೆಲಸವನ್ನರಸಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಆಗಮಿಸಿರುವ 246 ವಲಸೆ ಕಾರ್ಮಿಕರನ್ನು ತಮ್ಮ ಹುಟ್ಟೂರುಗಳಿಗೆ ತಲುಪಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಅವರು ಇಂದು ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಈಗಾಗಲೇ ತಾಲೂಕಿನಿಂದ ಕಳುಹಿಸಿಕೊಡಲಾಗಿದ್ದ ರಾಜ್ಯದ ಬೇರೆಬೇರೆ ಜಿಲ್ಲೆಗಳ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತದ ವೆಚ್ಚದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಗಳಲ್ಲಿ ಅವರ ಊರಿಗೆ ತಲುಪಿಸಲಾಗುತ್ತಿದ್ದು, ಇನ್ನೂ ಒಂದೆರೆಡು ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಖಾಸಗಿ ವಾಹನಗಳಲ್ಲಿ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ ಎಂದವರು ತಿಳಿಸಿದ್ದಾರೆ.
ಹೊರರಾಜ್ಯಗಳಿಂದ ಆಗಮಿಸಿರುವ ಕಾರ್ಮಿಕರಿಗೆ ಸರ್ಕಾರದ ಪ್ರತಿನಿಧಿಗಳಾಗಿ ಭರವಸೆಯ ಮಾತುಗಳನ್ನು ಹೇಳಿ, ಸದ್ಯದಲ್ಲಿಯೇ ಆಡಳಿತ ವ್ಯವಸ್ಥೆ ಎಲ್ಲರಿಗೂ ಪೂರಕವಾಗಿ ಆದೇಶ ಹೊರಡಿಸಲಿದ್ದು, ಮೊದಲಿನಂತೆ ಕೆಲಸ-ಕಾರ್ಯಗಳು ನಿರಂತರವಾಗಿ ನಡೆಯಲಿವೆ. ಆದ್ದರಿಂದ ಈಗಾಗಲೇ ಹೊರರಾಜ್ಯಗಳಿಂದ ಬಂದಿರುವ ಕಾರ್ಮಿಕರು ಊರಿಗೆ ಹೋಗುವ ಅಗತ್ಯವಿಲ್ಲ ಎಂದು ತಿಳಿಸಿ, ತಾತ್ಕಾಲಿಕ ಅವಧಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಉಳಿಸಿಕೊಳ್ಳುವ ಯತ್ನ ಮಾಡಲಾಗುವುದು. ಒಂದು ವೇಳೆ ಅವರು ಹೋಗಲು ಬಯಸಿದ್ದಲ್ಲಿ ಅಂತಹವರ ವಿವರ, ರಾಜ್ಯ ಮತ್ತಿತರ ಮಾಹಿತಿಗಳನ್ನು ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ ಎಂದರು.
ರಾಜ್ಯದ ಹಸಿರು ವಲಯದ ಎಂದು ಗುರುತಿಸಲಾಗಿರುವ ಜಿಲ್ಲೆಗಳಿಗೆ ಕೆಲವು ವಿಷಯಗಳಲ್ಲಿ ನಿರ್ಬಂಧ ಸಡಿಲಿಸಿದೆ. ಆದಾಗ್ಯೂ ಕೇಂದ್ರ ಸರ್ಕಾರವು ಮೇ 03ರಂದು ಹೊರಡಿಸಲಿರುವ ಮುಂದಿನ ಆದೇಶದವರೆಗೆ ಲಾಕ್ಡೌನ್ ವ್ಯವಸ್ಥೆ ಮುಂದುವರೆಯಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಕೆಲಸಕ್ಕಾಗಿ ಊರಿಗೆ ಹೋಗಬೇಕಾಗಿದ್ದಲ್ಲಿ ಅಂತಹವರು ತಮ್ಮ ಸಂಸ್ಥೆಯ ಗುರುತುಪತ್ರ ಹಾಗೂ ಕೆಲಸಕ್ಕೆ ಹಾಜರಾಗುವ ಬಗ್ಗೆ ಸಂಸ್ಥೆಯು ನೀಡಿರುವ ಪ್ರಮಾಣಪತ್ರಗಳನ್ನು ಜಿಲ್ಲಾಧಿಕಾರಗಳ ಕಚೇರಿಯಲ್ಲಿ ಹಾಜರುಪಡಿಸಿ, ಒಂದು ಕಡೆಯ ಪ್ರಯಾಣಕ್ಕೆ ಅನುಮತಿ ಪಡೆಯಬಹುದಾಗಿದೆ ಎಂದವರು ತಿಳಿಸಿದ್ದಾರೆ.
ಕೊರೋನ ಸೋಂಕು ರಾಜ್ಯಕ್ಕೆ ಪಾದಾರ್ಪಣೆ ಮಾಡಿದ ದಿನದಿಂದ ಹಗಲಿರುಳು ಶ್ರಮಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳಲ್ಲಿನ ಅಧಿಕಾರಿ-ಸಿಬ್ಬಂಧಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು ಇನ್ನೂ ಕೆಲವು ದಿನಗಳ ಕಾಲ ಸರ್ಕಾರದ ಆದೇಶ ಪಾಲಿಸಿ ಸೇವೆಗೆ ಮುಂದಾಗುವಂತೆ ಅವರು ಸೂಚಿಸಿದರು.
ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮೊದಲ ಹಂತದ ಮನೆಮನೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಎರಡನೇ ಹಂತದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಈ ಅವಧಿಯಲ್ಲಿ ಪ್ರತಿ ಮನೆಯಲ್ಲಿ ಜ್ವರ, ಕೆಮ್ಮು, ನೆಗಡಿ, ಸೀನು ಮುಂತಾದವುಗಳಿಂದ ಬಾಧಿತರಾದವರ ಮಾಹಿತಿ ಕಲೆ ಹಾಕಲಾಗುತ್ತಿದೆ ಅಲ್ಲದೆ ರಕ್ತದೊತ್ತಡ, ಮಧುಮೇಹ ಕಾಯಿಲೆ ಪೀಡಿತರಾದವರಿಗೆ ನೇರವಾಗಿ ಭೇಟಿ ಮಾಡಿ ಮಾಹಿತಿ ಪಡೆಯಲಾಗುತ್ತಿದೆ. ಈ ಮಾಹಿತಿಯನ್ನು ಪ್ರತಿದಿನ ತಹಶೀಲ್ದಾರರ ಮೂಲಕ ಜಿಲ್ಲಾಡಳಿತ ಪಡೆದುಕೊಂಡು ಮುಂದಿನ ಕ್ರಮಕ್ಕೆ ಸಿದ್ಧವಾಗುತ್ತಿದೆ. ಅಲ್ಲದೇ ಮೆಡಿಕಲ್ಸ್ಗಳಲ್ಲಿ ವೈದ್ಯರ ಸಲಹೆ ಪಡೆದು ಹಾಗೂ ಸಲಹೆ ಪಡೆಯದೆ ಮಾರಾಟ ಮಾಡಲಾಗುತ್ತಿರುವ ಔಷಧಗಳ ಮಾಹಿತಿ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವವರಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ಸೇವೆ ಸಲ್ಲಿಸುತ್ತಿರುವ ಹಾಗೂ ತಾತ್ಕಾಲಿಕ ಅವಧಿಗೆ ಸೇವೆ ಸ್ಥಗಿತಗೊಳಿಸಿರುವ ವೈದ್ಯರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನೋಂದಾಯಿತರಲ್ಲದ ವೈದ್ಯರು ಸೇವೆ ಸಲ್ಲಿಸುತ್ತಿರುವುದು ಕಂಡುಬಂದರೆ ಅಂತಹವರಿಗೆ ನೋಟೀಸ್ ಜಾರಿ ಮಾಡಲಾಗುವುದಲ್ಲದೆ ಕಾನೂನು ಪ್ರಕಾರ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಜಿಲ್ಲೆಯ ಔಷಧ ಸಹಾಯಕ ನಿಯಂತ್ರಕರ ಮೂಲಕ ಮೆಡಿಕಲ್ಸ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಔಷಧಗಳ ಮಾರಾಟ ವಿವರವನ್ನು ಪಡೆದುಕೊಳ್ಳಲಾಗುತ್ತಿದೆ.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೇರೇಬೇರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ-ಸಿಬ್ಬಂಧಿಗಳು ಕರ್ತವ್ಯದ ಮೇಲೆ ಹಾಜರಾಗಲು ಅನುಕೂಲವಾಗುವಂತೆ ಪ್ರತಿದಿನ ಬೆಳಿಗ್ಗೆ ಶಿವಮೊಗ್ಗದಿಂದ ತಾಲೂಕುಗಳಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಅಧಿಕೃತ ನೌಕರರು ದಾಖಲೆಗಳನ್ನು ಸಲ್ಲಿಸಿ ಪ್ರಯಾಣಿಸಬಹುದಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಜಿ.ಅನುರಾಧ, ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ ಸೇರಿದಂತೆ ಶಿವಮೊಗ್ಗ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.