ಕೊರೋನ ಬಾಧಿತ ರೋಗಿಗಳ ಸೇವಾ ನಿರತನಾಗಿದ್ದ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ನಿಟ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಸರವರಣ ಅವರು ಹೆಬ್ಬುಣಿ ಚೆಕ್ಪೋಸ್ಟ್ ನಲ್ಲಿ ಕರ್ತವ್ಯನಿರತರಾಗಿದ್ದ ವೇಳೆಯಲ್ಲಿ ವಿಧಿವಶರಾಗಿರುವುದು ತುಂಬಾ ನೋವಿನ ಸಂಗತಿಯಾಗಿದ್ದು, ಮೃತರ ಕುಟುಂಬಕ್ಕೆ ಸರ್ಕಾರವು ತಕ್ಷಣದ ಪರಿಹಾರ ಕ್ರಮವಾಗಿ 50 ಲಕ್ಷ ರೂಗಳನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೃತ ಸರವರಣ ಅವರು ಆರೋಗ್ಯ ಇಲಾಖೆಯ ಖಾಯಂ ಸಿಬ್ಬಂದಿ ಯಾಗಿದ್ದು ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ರಚಿಸಲಾಗಿದ್ದ ಕೊರೋನ ಸ್ಕ್ರೀನಿಂಗ್ ತಂಡದ ಸದಸ್ಯರಾಗಿ ಹುಬ್ಬುಣಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯನಿರತರಾಗಿದ್ದರು. ಈ ಕಾಯಿಲೆಯ ನಿಯಂತ್ರಣಕ್ಕಾಗಿ ಪ್ರಾಣಬಿಟ್ಟ ಮೊದಲ ಪ್ರಕರಣ ಇದಾಗಿದೆ ಎಂದವರು ತಿಳಿಸಿದ್ದಾರೆ.
ಸೇವಾ ಅವಧಿಯಲ್ಲಿ ಮೃತರಾದ ಶ್ರೀ ಸರವರಣ ಅವರು ದೇಶವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೋರೋನ ಸೋಂಕನ್ನು ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಸಿಬ್ಬಂಧಿಯೊಂದಿಗೆ ಹಗಲಿರುಳು ಶ್ರಮಿಸುತ್ತಿದ್ದರು ಎಂದವರು ತಿಳಿಸಿದ್ದಾರೆ
ಕೇಂದ್ರ ಸರ್ಕಾರದ ಅವಶ್ಯ ಸೇವೆಗಳಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪರಿಹಾರದ ಘೋಷಣೆಯ ಆಧಾರದ ಮೇಲೆ ಮೃತರ ಕುಟುಂಬಕ್ಕೆ ಪರಿಹಾರ ವಿಮಾ ಸೌಲಭ್ಯವನ್ನು ಮಂಜೂರು ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಮೃತ ಸರ್ಕಾರಿ ನೌಕರನು ಪ್ರಾಣ ಹಾನಿ ಉಂಟುಮಾಡುವ ಭಯಾನಕ ಕೊರೋನ ಸೋಂಕನ್ನು ತಡೆಯುವ ಸಲುವಾಗಿ ಅಗತ್ಯ ಸೇವೆಗಳ ಅಡಿಯಲ್ಲಿ ಅಗತ್ಯ ಸಿಬ್ಬಂದಿಯಾಗಿ ನಿರ್ವಹಿಸುತ್ತಿದ್ದ ಅವಧಿಯಲ್ಲಿ ನಿಧನರಾಗಿರುವುದರಿಂದ ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರವು ಘೋಷಣೆ ಹೊರಡಿಸುವಂತೆ ತಕ್ಷಣದ ಪರಿಹಾರವಾಗಿ ವೈದ್ಯಕೀಯ ವಿಮಾ ಮೊತ್ತ 50 ಲಕ್ಷ ರೂಗಳನ್ನು ಮಂಜೂರು ಮಾಡುವಂತೆ ಅವರು ಕೋರಿದ್ದಾರೆ.