ಜಗತ್ತಿನಾದ್ಯಂತ ಮನುಕುಲವನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಮಹಾಮಾರಿ ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡಜನರಿಗೆ ಅಡುಗೆ ತಯಾರಿಕೆಗೆ ಅಡಚಣೆಯಾಗಬಾರದೆಂಬ sಸದುದ್ದೇಶದಿಂದ ಕೇಂದ್ರ ಸರ್ಕಾರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 8ಕೋಟಿ ಫಲಾನುಭವಿಗಳಿಗೆ ಮೂರು ಗ್ಯಾಸ್ ಸಿಲಿಂಡರ್‍ಗಳನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ವಿತರಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ.
ಈ ಯೋಜನೆಯನ್ವಯ ಮೊದಲ ತಿಂಗಳ ಸಿಲಿಂಡರ್ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಕಡ್ಡಾಯವಾಗಿ ತಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಯಿಂದ ಐವಿಅರ್‍ಎಸ್ (IಗಿಖS) ಬುಕ್ಕಿಂಗ್ ಮಾಡಿ ತಮ್ಮ ಮೊದಲ ಸಿಲಿಂಡರ್ ಪಡೆಯಬಹುದಾಗಿದೆ. ಮೊದಲ ತಿಂಗಳ ಜಮಾ ಆದ ಹಣದಿಂದ ಗ್ಯಾಸ್ ಸಿಲಿಂಡರ್ ಪಡೆದರೆ ಮಾತ್ರ ಮುಂದಿನ ತಿಂಗಳುಗಳಲ್ಲಿ 2 ಮತ್ತು 3 ನೇ ಸಿಲಿಂಡರ್ ಪಡೆಯಬಹುದಾಗಿರುತ್ತದೆ. ಸದರಿ ಬಾಬ್ತು ಹಣವು ಅವರವರ ಖಾತೆಗೆ 2 ಅಥವಾ 3 ನೇ ತಾರೀಖಿನಲ್ಲಿ ಜಮೆಯಾಗುವುದು ಎಂದವರು ತಿಳಿಸಿದ್ದಾರೆ.
ಒಂದು ಸಿಲಿಂಡರ್ ಪಡೆದ ನಂತರ ಮತ್ತೊಂದು ಸಿಲಿಂಡರ್ ಪಡೆಯಲು ಕನಿಷ್ಟ 30 ದಿನಗಳ ಅಂತರವಿರಬೇಕಾಗಿರುತ್ತದೆ. ಮೊದಲ ತಿಂಗಳ ಜಮಾ ಆದ ಹಣದಿಂದ ನೀವು ಗ್ಯಾಸ್ ಸಿಲಿಂಡರ್ ಪಡೆಯದೇ ಇದ್ದರೆ ಮುಂದಿನ ತಿಂಗಳ ಗ್ಯಾಸ್‍ಸಿಲಿಂಡರ್ ಹಣ ಜಮಾ ಆಗುವುದಿಲ್ಲ ಎಂಬುದನ್ನು ಗ್ರಾಹಕರು ಗಮನದಲ್ಲಿಟ್ಟುಕೊಳ್ಳಬೇಕು. ನೊಂದಾಯಿಸಿರುವ ಮೊಬೈಲ್ ಸಂಖ್ಯೆಯನ್ನು ಮೂರು ತಿಂಗಳ ಅವಧಿಯವರೆಗೂ ಬದಲಾಯಿಸುವಂತಿಲ್ಲ. ಸಿಲಿಂಡರ್ ಪಡೆಯುವಾಗ ಕಡ್ಡಾಯವಾಗಿ ಮೊಬೈಲ್ ಸಂಖ್ಯೆಗೆ ಬಂದಿರುವ ಕೋಡ್ ನಂಬರ್‍ನ್ನು ಸಿಲಿಂಡರ್ ಡೆಲಿವರಿ ಕೊಡುವ ವ್ಯಕ್ತಿಗೆ ಕಡ್ಡಾಯವಾಗಿ ನೀಡತಕ್ಕದ್ದು ಎಂದವರು ತಿಳಿಸಿದ್ದಾರೆ.
ಫಲಾನುಭವಿಗಳು ಗಮನಿಸಬೇಕಾದ ಬಹು ಮುಖ್ಯ ಅಂಶ ಏನೆಂದರೆ ತಮ್ಮ ಮೊಬೈಲ್ ಸಂಖ್ಯೆಯು ಆಧಾರ ನಂಬರ್‍ದೊಂದಿಗೆ ಬ್ಯಾಂಕ್ ಖಾತೆಗೆ ಹೊಂದಿಕೆಯಾಗಿರತಕ್ಕದ್ದು. ಹೊಂದಿಕೆಯಾಗಿರದಿದ್ದರೆ ಉಚಿತ ಗ್ಯಾಸ್ ಸಿಲಿಂಡರ್ ಸೌಲಭ್ಯ ದೊರಕುವುದಿಲ್ಲ ಎಂದು ತಿಳಿಸಿರುವ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಂದಾಜು 1 ಲಕ್ಷ ಉಜ್ವಲ ಯೋಜನೆಯ ಫಲಾನುಭವಿಗಳು ಕೇಂದ್ರ ಸರ್ಕಾರ ಕೊಡಮಾಡಿರುವ ಈ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದವರು ತಿಳಿಸಿದ್ದಾರೆ.