ಶಿವಮೊಗ್ಗ, ಮಾರ್ಚ್ 26 : ಶಿವಮೊಗ್ಗ ಎಪಿಎಂಸಿಯಿಂದ ಎಲ್ಲಾ ತಾಲೂಕುಗಳಿಗೆ ಮೂರು ದಿನಗಳಿಗೆ ಒಮ್ಮೆ ಬೇಡಿಕೆಗೆ ಅನುಗುಣವಾಗಿ ತರಕಾರಿಯನ್ನು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಮಾರಾಟ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದರು.
ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ವ್ಯವಹಾರ ನಡೆಸಲು ಅವಕಾಶ ನೀಡಲಾಗುವುದು. ಆದರೆ ಪ್ರತಿ ತಾಲೂಕುಗಳಿಗೆ ದಿನ ಹಾಗೂ ಸಮಯವನ್ನು ನಿಗದಿಪಡಿಸಲಾಗಿದ್ದು, ಆ ಅವಧಿಯಲ್ಲಿ ಆಯಾ ತಾಲೂಕುಗಳಿಗೆ ಸಗಟು ತರಕಾರಿ ಸರಬರಾಜು ಮಾಡಬಹುದಾಗಿದೆ. ಮೊದಲ ದಿನ ಭದ್ರಾವತಿ ಬೆಳಿಗ್ಗೆ 6ರಿಂದ 10ರವರೆಗೆ, ತೀರ್ಥಹಳ್ಳಿ ಬೆ.11ರಿಂದ 2ರವರೆಗೆ, ಸೊರಬ ಮತ್ತು ಶಿಕಾರಿಪುರ ಮಧ್ಯಾಹ್ನ 3ರಿಂದ 7.30ವರೆಗೆ ತರಕಾರಿ ಪೂರೈಸಲು ಅವಧಿ ನಿಗದಿಪಡಿಸಲಾಗಿದೆ. ಮರು ದಿನ ಬೆಳಿಗ್ಗೆ 6ರಿಂದ 12ರವರೆಗೆ ಶಿವಮೊಗ್ಗ, ಮ.1ರಿಂದ 3ರವರೆಗೆ ಹೊಸನಗರ, ಸಂಜೆ 4ರಿಂದ 7.30ರವರೆಗೆ ಸಾಗರ ತಾಲೂಕಿಗೆ ಅವಧಿ ನಿಗದಿಪಡಿಸಲಾಗಿದೆ. ಮೂರನೇ ದಿನ ಹೊರ ಜಿಲ್ಲೆಗಳಿಗೆ ತರಕಾರಿ ಪೂರೈಸಲು ಅವಕಾಶ ನೀಡಲಾಗುವುದು. ಇದೇ ರೀತಿ ದಿನನಿತ್ಯದ ಪಾಳಿಯಲ್ಲಿ ತರಕಾರಿ ವಿತರಣೆಗೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಆದರೆ ದಿನದ ಯಾವುದೇ ಅವಧಿಯಲ್ಲಿ ಎರಡಕ್ಕಿಂತ ಹೆಚ್ಚು ವಾಹನಗಳು ಎಪಿಎಂಸಿ ಒಳಗೆ ಅಂಗಡಿ ಎದುರು ನಿಂತಿರಬಾರದು. ವ್ಯಾಪಾರಿಗಳು ಎಪಿಎಂಸಿಗೆ ಬಂದು ಖರೀದಿ ಮಾಡುವಂತಿಲ್ಲ. ಬೇಡಿಕೆಯನ್ನು ಪಡೆದು ಎಪಿಎಂಸಿ ವತಿಯಿಂದಲೇ ವಾಹನ ಸೌಲಭ್ಯ ಕಲ್ಪಿಸಿ ತರಕಾರಿ ಸರಬರಾಜು ಮಾಡಬೇಕು. ಅಂತಹ ವಾಹನಗಳು ದಾರಿ ಮಧ್ಯೆ ಬೇಡಿಕೆಯನ್ನು ಸಲ್ಲಿಸಿರುವ ವ್ಯಾಪಾರಿಗಳಿಗೆ ತರಕಾರಿ ಸರಬರಾಜು ಮಾಡಬಹುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕ್ರಮ: ತರಕಾರಿ ಹಣ್ಣು ಹಂಪಲುಗಳ ಎಪಿಎಂಸಿ ಸಗಟು ದರಕ್ಕೆ ಅನುಗುಣವಾಗಿ ಮಾರಾಟ ದರವನ್ನು ಪ್ರತಿದಿನ ಪ್ರಕಟಿಸಲು ಸೂಚಿಸಲಾಗಿದೆ. ಅದಕ್ಕಿಂತ ಹೆಚ್ಚಿನ ದರ ವಿಧಿಸುವ ವ್ಯಾಪಾರಿಗಳ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ತಳ್ಳುಗಾಡಿಗಳಿಗೆ ಅನುಮತಿ: ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಎಪಿಎಂಸಿ ಆವರಣದಲ್ಲಿರುವ ಹಾಪ್ಕಾಮ್ಸ್ಗೆ ತಂದು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಪ್ಕಾಮ್ಸ್ ವತಿಯಿಂದ ಎಲ್ಲಾ ಬಡಾವಣೆಗಳಲ್ಲಿ ವಾಹನದ ಮೂಲಕ ತರಕಾರಿ ಮಾರಾಟ ಮಾಡಲು ಸೂಚಿಸಲಾಗಿದೆ. ತಳ್ಳುಗಾಡಿಗಳ ಮೂಲಕ ಬಡಾವಣೆಗಳಲ್ಲಿ ತರಕಾರಿ, ಹಣ್ಣು ಹಂಪಲು ಮಾರಾಟ ಮಾಡಲು ಉತ್ತೇಜನ ನೀಡಲಾಗುವುದು. ತಳ್ಳುಗಾಡಿಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಪಾಸು ವ್ಯವಸ್ಥೆ ಮಾಡುವಂತೆ ಅವರು ಹೇಳಿದರು.
ನಂದಿನಿ ಪಾರ್ಲರ್ಗಳಲ್ಲಿ ತರಕಾರಿ ಮಾರಾಟ: ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಭದ್ರಾವತಿ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ನಂದಿನ ಪಾರ್ಲರ್ಗಳಲ್ಲಿ ತರಕಾರಿಯನ್ನು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸುವಂತೆ ಕೆಎಂಎಫ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಮೀನು ಮಾರುಕಟ್ಟೆ ತೆರೆಯಿರಿ: ಜಿಲ್ಲೆಯಲ್ಲಿ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಮೀನು ಮಾರುಕಟ್ಟೆಯನ್ನು ತಕ್ಷಣ ತೆರೆದು ವ್ಯಾಪಾರಕ್ಕೆ ಅವಕಾಶ ಮಾಡಬೇಕು ಎಂದರು.
ಮೆಕ್ಕೆಜೋಳ ಸೇರಿದಂತೆ ರೈತರು ಬೆಳೆದ ಎಲ್ಲಾ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟಕ್ಕೆ ಸಾಗಾಟ ಮಾಡಲು ಅನುಮತಿಯನ್ನು ನೀಡಲಾಗಿದೆ. ಆದರೆ ಅಂತಹ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ: ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಎಲ್ಲಾ ಪ್ರಾರ್ಥನಾಲಯಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಈ ಆದೇಶವನ್ನು ಮೀರಿ ಪ್ರಾರ್ಥನಾಲಯಗಳನ್ನು ತೆರೆದಿರುವುದು ಕಂಡು ಬಂದರೆ ಅಂತಹ ಪ್ರಾರ್ಥನಾಲಯಗಳ ಆಡಳಿತ ಸಮಿತಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.