ಶಿವಮೊಗ್ಗ, ಮಾರ್ಚ್ 09 : ಜಿಲ್ಲೆಯಲ್ಲಿ ಪೌಲ್ಟಿ ಫಾರಂ ನಡೆಸುವವರು ಸತ್ತ ಕೋಳಿಗಳನ್ನು ಹಾಗೂ ಅದರ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಅವರು ಸೂಚಿಸಿದ್ದಾರೆ.
ಅವರು ಇಂದು ಶಿವಮೊಗ್ಗ ಸಮೀಪದ ಕಡೇಕಲ್ ಮತ್ತೂರು ಗ್ರಾಮದ ಹೊರವಲಯದಲ್ಲಿ ರಸ್ತೆ ಬದಿ ಹಾಗೂ ಚಾನಲ್ಗೆ ಹೊಂದಿಕೊಂಡಂತಿರುವ 3-4ಕಡೆಗಳಲ್ಲಿ ಎಲ್ಲೆಂದರಲ್ಲಿ ಸತ್ತಕೋಳಿ ತ್ಯಾಜ್ಯ ಎಸೆದಿರುವ ಸ್ಥಳಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಇದರಿಂದಾಗಿ ಊರ ತುಂಬಾ ದುರ್ನಾತ ಹರಡಿ ಸಾರ್ವಜನಿಕ ಜನಜೀವನಕ್ಕೆ ಕಿರಿಕಿರಿ ಉಂಟಾಗಲಿದೆ ಅಲ್ಲದೇ ಸತ್ತಕೋಳಿಗಳನ್ನು ಎಳೆದುತಂದ ನಾಯಿಗಳು ಗ್ರಾಮದಲ್ಲಿ ಹರಡಿದ್ದು ಗ್ರಾಮದ ವಾತಾವರಣ ಕಲುಷಿತವಾಗಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇರುವುದರಿಂದ ಕೋಳಿಫಾರಂನ ಮಾಲೀಕರು ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪೌಲ್ಟ್ರಿಫಾರಂ ನಡೆಸುವವರು ಗ್ರಾಮದಿಂದ ನಿಗಧಿಪಡಿಸಿದ ದೂರದಲ್ಲಿ ತಮ್ಮ ಸಾಕಾಣಿಕೆ ಘಟಕವನ್ನು ಸ್ಥಾಪಿಸಬೇಕು. ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ತಹಶೀಲ್ದಾರರ ಅನುಮತಿ ಪಡೆಯದೇ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಫಾರಂ ನಿರ್ವಹಿಸುವವರ ವಿರುದ್ಧ ಕ್ರಮ ಅನಿವಾರ್ಯವಾಲಿದೆ. ಈಗಾಗಲೇ ಪರವಾನಿಗೆ ಪಡೆದಿರುವವರು ತಮ್ಮ ಪರವಾನಗಿಯನ್ನು ಪ್ರತಿವರ್ಷ ನವೀಕರಿಸಿಕೊಳ್ಳಬೇಕು ಎಂದ ಅವರು, ಸತ್ತಕೋಳಿಗಳನ್ನು ಅದರ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಫಾರಂನ ಮಾಲೀಕರು ಖಾಯಂ ಆಗಿ ಪಶು ವೈದ್ಯಾಧಿಕಾರಿಗಳ ಸಲಹೆ ಪಡೆಯಬೇಕು. ಅದಕ್ಕಾಗಿ ಸೂಕ್ತ ದಾಖಲೆಗಳನ್ನು ನಿರ್ವಹಿಸಬೇಕೆಂದು ಸಲಹೆ ನೀಡಿದ ಅವರು, ಫಶು ವೈದ್ಯಾಧಿಕಾರಿಗಳೂ ಸಹ ಕಾ¯ಕಾಲಕ್ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಅವರು ತಿಳಿಸಿದರು.
ಅಲ್ಲದೇ ಆಯಾ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಂತಹ ಘಟನೆಗಳನ್ನು ಮರುಕಳಿಸದಂತೆ ಎಚ್ಚರ ವಹಿಸಬೇಕಲ್ಲದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಸಕಾಲಿಕ ಕ್ರಮ ಕೈಗೊಳ್ಳಬೇಕೆಂದ ಅವರು, ಗ್ರಾಮಗಳ ಮುಖ್ಯಸ್ಥರು ತ್ಯಾಜ್ಯವನ್ನು ಬಿಸಾಕುವವರನ್ನು ಗಮನಿಸಿ, ಜಿಲ್ಲಾಡಳಿತದ ಗಮನ ಸೆಳೆಯಬೇಕು. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ ಅವರು ಮಾತನಾಡಿ, ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಅನುಸರಿಸಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ತ್ಯಾಜ್ಯ ಹರಡಿರುವ ಸ್ಥಳದಲ್ಲಿ ಔಷಧ ಸಿಂಪಡಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ ಎಂದ ಅವರು ಕೋಳಿ ಫಾರಂನ ಮಾಲೀಕರು ಸತ್ತಕೋಳಿ ಮತ್ತು ಅವುಗಳ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದವರು ಸೂಚಿಸಿದರು. ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಣ ಕ್ರಮ ಅನುಸರಿಸಲು ಸ್ಥಳೀಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ|| ಚಂದ್ರಶೇಖರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.