ಶಿಕಾರಿಪುರ, ಫೆ.24: ರಾಜ್ಯದಲ್ಲಿ ಮುಂದಿನ 3 ವರ್ಷಗಳಲ್ಲಿ ಏತ ನೀರಾವರಿ ಮೂಲಕ ರಾಜ್ಯದ ಎಲ್ಲಾ ಕೆರೆಗಳನ್ನು ತುಂಬಿಸುವ ನೀರಾವರಿ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುವುದು
ಎಂದು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಅವರು ಸೋಮವಾರ ಶಿಕಾರಿಪುರದಲ್ಲಿ 1100ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆ ಸೇರಿದಂತೆ ಒಟ್ಟು 1277 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ನದಿಯ ನೀರನ್ನು ಏತ ನೀರಾವರಿ ಮೂಲಕ ಮೇಲೆತ್ತಿ, ಕೆರೆಗಳ ಮೂಲಕ ರೈತರ ಹೊಲಗಳನ್ನು ತುಂಬಿಸಲಾಗುವುದು. ಆವರ್ತ ನಿಧಿಯನ್ನು ತೆಗೆದಿರಿಸಿ, ರೈತರ ಉತ್ಪನ್ನಗಳಿಗೆ ಉತ್ತಮ ಬೆಂಬಲ ಬೆಲೆ ಒದಗಿಸಲಾಗುವುದು ಎಂದರು.

ಪುರದಕೆರೆ ಸಮೀಪ ತುಂಗಭದ್ರಾ ನದಿಯಿಂದ ಏತ ನೀರಾವರಿ ಮೂಲಕ ಶಿಕಾರಿಪುರ ತಾಲೂಕಿನ ಉಡುಗಣಿ, ತಾಳಗುಂದ , ಹೊಸೂರು ಹೋಬಳಿ ಕೆರೆಗಳನ್ನು ತುಂಬಿಸುವ 850ಕೋಟಿ ರೂ. ಯೋಜನೆಯಿಂದ 110ಗ್ರಾಮಗಳ 186 ಕೆರೆಗಳನ್ನು ತುಂಬಿಸಲಾಗುತ್ತಿದೆ.

ಇದೇ ರೀತಿ ಶಿವಮೊಗ್ಗ ಹೊಸಹಳ್ಳಿ ಸಮೀಪ ತುಂಗಾ ನದಿಯಿಂದ ಏತ ನೀರಾವರಿ ಮೂಲಕ ಶಿವಮೊಗ್ಗ ಗ್ರಾಮಾಂತರ ಕೆರೆಗಳಿಗೆ ಹಾಗೂ ಶಿಕಾರಿಪುರ ಅಂಜನಾಪುರ ಜಲಾಶಯಕ್ಕೆ ನೀರು ಒದಗಿಸುವ 250 ಕೋಟಿ ಮೊತ್ತದ ಏತ ನೀರಾವರಿ ಯೋಜನೆಯಿಂದ 50ಗ್ರಾಮಗಳ 75 ಕೆರೆಗಳನ್ನು ತುಂಬಿಸಲಾಗುತ್ತಿದೆ.

ಮುಂದಿನ ಒಂದು ವರ್ಷದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು.

ಸಮಿತಿ ರಚನೆ: ಬೆಂಗಳೂರಿನಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ಗುರುತಿಸಲು ಸಮಿತಿ ರಚಿಸಲಾಗಿದೆ. ಒತ್ತುವರಿ ಜಮೀನು ವಶಪಡಿಸಿ ಹರಾಜು ಹಾಕಿ ಅಭಿವೃದ್ಧಿ ಕಾರ್ಯಗಲಿಗೆ ಅನುದೆನ ಒದಗಿಸಲಾಗುವುದು ಎಂದರು.

ಸೌಲಭ್ಯಗಳ ವಿತರಣೆ:
ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತರನ್ನು ಮುಖ್ಯಮಂತ್ರಿ ಅವರು ಸನ್ಮಾನಿಸಿದರು.

ರೈತರಿಗೆ ಸ್ಪಿಂಕ್ಲರ್, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಿಸಿದರು.

ಜಿಲ್ಲೆಯ ಆಯ್ದ ಕೆರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಹೂಳು ತೆಗೆಯುವ ಕರಾರು ಒಪ್ಪಂದಕ್ಕೆ ಈ ಸಂದರ್ಭದಲ್ಲಿ ಸಹಿ ಹಾಕಲಾಯಿತು. ಈ ಹೂಳನ್ನು ರೈತರು ತೆಗೆದುಕೊಂಡು ತಮ್ಮ ಹೊಲಗಳಿಗೆ ಹಾಕುವಂತೆ ಮುಖ್ಯಮಂತ್ರಿ ಅವರು ತಿಳಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಂಸದ ಬಿ.ವೈ.ರಾಘವೇಂದ್ರ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಶಾಸಕ ಅಶೋಕ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಮಜುನಾಥ, ರುದ್ರೇಗೌಡ್ರು, ಆರ್.ಪ್ರಸನ್ನ ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

error: Content is protected !!