ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ಜಾತ್ರಾ ಹಿನ್ನೆಲೆಯಲ್ಲಿ ಫೆ. 21ರಿಂದ ಮೂರು ದಿನಗಳ ರಾಷ್ಟ್ರಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಗೆ ಅಖಾಡ ಸಿದ್ಧಗೊಳ್ಳುತ್ತಿದೆ.
ಮೂರನೇ ಬಾರಿ ಸಾಗರದಲ್ಲಿ ಆಯೋಜಿಸುತ್ತಿರುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳ ಕುಸ್ತಿಪಟುಗಳು ಪಾಲ್ಗೊಳ್ಳಲಿದ್ದಾರೆ. ನುರಿತ ತೀರ್ಪುಗಾರರ ನೇತೃತ್ವದಲ್ಲಿ ನಡೆಯುವ ಘಟಾನುಘಟಿಗಳ ಕುಸ್ತಿ ಪಂದ್ಯಗಳು ರೋಚಕತೆಯಿಂದ ಕೂಡಿರಲಿದೆ.
ಫೆ.21 ರ ಮಧ್ಯಾಹ್ನ 3ರಿಂದ ಆರಂಭವಾಗಲಿರುವ ಕುಸ್ತಿ ಪಂದ್ಯಾವಳಿಗಳು ಮೂರು ದಿನಗಳ ಕಾಲ ನಡೆಯಲಿದೆ. ಪ್ರತಿ ದಿನ ಮಧ್ಯಾಹ್ನ 3ರಿಂದ ರಾತ್ರಿ 9ವರೆಗೂ ಕುಸ್ತಿ ಪಂದ್ಯಗಳು ನಡೆಯಲಿವೆ. ಕುಸ್ತಿಪಟುಗಳಿಗೆ ಊಟ, ವಸತಿ, ಸಾರಿಗೆ ಭತ್ಯೆ ನೀಡಲಾಗುತ್ತದೆ.
ಮಹಾರಾಷ್ಟ್ರ, ಮಧ್ಯಪ್ರದೇಶ, ಹರ್ಯಾಣ, ದೆಹಲಿ, ಪಂಜಾಬ್ ಸೇರಿದಂತೆ ರಾಜ್ಯ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಗಳಲ್ಲಿ ಗಮನ ಸೆಳೆದಿರುವ ಕುಸ್ತಿಪಟುಗಳು ಪಾಲ್ಗೊಳ್ಳುವರು. ವಿಜೇತರಿಗೆ ಬೆಳ್ಳಿ ಪದಕ, ಬೆಳ್ಳಿ ಬಳೆ, ಬೆಳ್ಳಿಯ ಗದೆ ಸೇರಿದಂತೆ ವಿಶೇಷ ನಗದು ಬಹುಮಾನ ನೀಡಲಾಗುತ್ತದೆ. ಶ್ರೀ ಮಾರಿಕಾಂಬ ವ್ಯವಸ್ಥಾಪಕ ಸಮಿತಿ ಕುಸ್ತಿ ಸಂಚಾಲಕರಾಗಿ ಸುಂದರ್ಸಿಂಗ್, ಸಹಸಂಚಾಲಕರಾಗಿ ಎಂ.ಎಸ್.ಶಶಿಕಾಂತ್ ಮತ್ತು ಎಸ್.ಅಶೋಕ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಗರದ ಮಾರಿಕಾಂಬ ಜಾತ್ರೆ ವೇಳೆಯಲ್ಲಿ ಆಯೋಜಿಸುವ ಕುಸ್ತಿ ಪಂದ್ಯಾವಳಿ ಸ್ಪರ್ಧಿಸಲು ದೇಶದ ವಿವಿಧ ಮೂಲೆಗಳಿಂದ ಕುಸ್ತಿಪಟುಗಳು ಆಗಮಿಸಿದರೆ. ಅದನ್ನು ವೀಕ್ಷಣೆ ಮಾಡುವುದಕ್ಕಾಗಿಯೇ ರಾಜ್ಯದ ವಿವಿಧ ಕಡೆಯಿಂದ ಕುಸ್ತಿಪ್ರೇಮಿಗಳು ಆಗಮಿಸುತ್ತಾರೆ. 50 ಸಾವಿರಕ್ಕೂ ಅಧಿಕ ಜನರು ಕುಸ್ತಿ ಪಂದ್ಯಾವಳಿ ವೀಕ್ಷಿಸುತ್ತಾರೆ.
ಬಹುಮಾನ: ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತ ಕುಸ್ತಿಪಟುಗಳಿಗೆ ಬೆಳ್ಳಿ ಬಹುಮಾನ ಹಾಗೂ ವಿಶೇಷ ನಗದು ಬಹುಮಾನ ನೀಡಲಾಗುತ್ತದೆ. 180 ಬೆಳ್ಳಿ ಪದಕ, 15 ಬೆಳ್ಳಿ ಬಳೆ, 4 ಬೆಳ್ಳಿ ಗದೆ ಪಂದ್ಯಗಳು ನಡೆಯಲಿವೆ. 25 ಸಾವಿರ ರೂ.ವರೆಗಿನ ಪಂದ್ಯಗಳು ನಡೆಯಲಿವೆ.
ಮಹಿಳಾ ಕುಸ್ತಿ: ವಿಶೇಷವಾಗಿ ಮಹಿಳಾ ಕುಸ್ತಿಪಟುಗಳಿಗೆ ಫೆ. 23ರ ಭಾನುವಾರ ಮಧ್ಯಾಹ್ನ 3ರಿಂದ ಮಹಿಳಾ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಈ ಬಾರಿ ಮಹಿಳಾ ಕುಸ್ತಿ ಪಂದ್ಯಗಳು ಹೆಚ್ಚು ಆಗಮಿಸುವ ನೀರಿಕ್ಷೆಯಿದೆ.
—— ಸಾಗರದ ಮಾರಿಕಾಂಬ ಜಾತ್ರೆ ಸಂದರ್ಭದಲ್ಲಿ ಆಯೋಜಿಸುವ ಕುಸ್ತಿ ಪಂದ್ಯಾವಳಿಯು ರಾಷ್ಟ್ರಮಟ್ಟದವರೆಗೂ ವ್ಯಾಪಿಸಿದೆ. ಮಧ್ಯಪ್ರದೇಶ, ದೆಹಲಿ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ಕುಸ್ತಿಪಟುಗಳು ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಮೂರು ದಿನಗಳ ಹೊನಲು ಬೆಳಕಿನ ಪಂದ್ಯಾವಳಿ ವೀಕ್ಷಣೆಗೆ ಸಾವಿರಾರು ಜನರು ಭಾಗವಹಿಸುವ ನೀರಿಕ್ಷೆಯಿದೆ. | ಸುಂದರ್ಸಿಂಗ್, ಶ್ರೀ ಮಾರಿಕಾಂಬ ವ್ಯವಸ್ಥಾಪಕ ಸಮಿತಿ ಕುಸ್ತಿ ಸಂಚಾಲಕ ——
ಸಾಗರದ ನೆಹರು ಮೈದಾನದಲ್ಲಿ ಶ್ರೀ ಮಾರಿಕಾಂಬ ಜಾತ್ರಾ ಸಮಿತಿಯಿಂದ ಆಯೋಜಸಲಿರುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಸಿದ್ಧಗೊಳ್ಳುತ್ತಿರುವ ಅಖಾಡ.
—— ಫೆ. 21ರ ಕಾರ್ಯಕ್ರಮ ಸಾಗರದ ಅಶೋಕ ರಸ್ತೆಯಲ್ಲಿರುವ ಶ್ರೀ ಮಾರಿಕಾಂಬ ಕಲಾವೇದಿಕೆಯಲ್ಲಿ ಫೆ. 21ರ ಸಂಜೆ 5.30ಕ್ಕೆ ಶಿವಮೊಗ್ಗ ಆರ್.ಸಂಗೀತಾ ಅವರಿಂದ ನೃತ್ಯ, ಸಂಜೆ 6ಕ್ಕೆ ಸಾಗರದ ಸುಬೋದ್ ವಿ ರಾವ್ ಅವರಿಂದ ಕೊಳಲುವಾದನ, ಸಂಜೆ 6.30ಕ್ಕೆ ಶಿವಮೊಗ್ಗದ ಶಾಂತಾ ಶೆಟ್ಟಿ ಅವರಿಂದ ಸುಗಮ ಸಂಗೀತ, ರಾತ್ರಿ 8ಕ್ಕೆ ಕುಂದಾಪುರದ ಮಧುರ ಮೆಲೋಡೀಸ್ ಅವರಿಂದ ರಸಮಂಜರಿ, ರಾತ್ರಿ 10 ರಿಂದ ಸ್ವರಾಂಜಲಿ ಭೀಮನಕೋಣೆ ತಂಡದಿಂದ ಸುಗಮ ಸಂಗೀತ ನಡೆಯಲಿದೆ. ——
ಸಾಗರ: ವೃತ್ತಿ ರಂಗಭೂಮಿ ಕಲಾವಿದರಿಗೆ ಆಶ್ರಯ ನೀಡಿದ ತಾಣ ಸಾಗರ ಎಂದು ಚಿತ್ರ ನಟ ಶಿವರಾಂ ಅಭಿಪ್ರಾಯಪಟ್ಟರು.
ನಗರದ ಅಶೋಕ ರಸ್ತೆಯಲ್ಲಿ ಶ್ರೀ ಮಾರಿಕಾಂಬ ಜಾತ್ರಾ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಸಾಂಸ್ಕøತಿಕ ಕಲಾಸಿರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತಿಹಾಸಿಕ, ಪ್ರಾಕೃತಿಕ, ಸಾಹಿತ್ಯ ಸಾಂಸ್ಕøತಿಕವಾಗಿ ವೈಶಿಷ್ಟ್ಯತೆ ಹೊಂದಿರುವ ಸಾಗರವು ಎಲ್ಲ ಕ್ಷೇತ್ರಗಳಿಗೂ ಸಾಧಕರನ್ನು ಕೊಡುಗೆ ನೀಡಿದೆ. ಯಾವುದೇ ಕ್ಷೇತ್ರ ಗಮನಿಸಿದರೂ ಅಲ್ಲಿ ಸಾಗರದ ಪ್ರತಿಭಾವಂತ ಜನರು ಇರುತ್ತಾರೆ. ರಂಗಭೂಮಿ, ಸಿನಿಮಾ ಕ್ಷೇತ್ರಕ್ಕೂ ಸಾಗರದ ಕೊಡುಗೆ ಅಪಾರವಾಗಿದೆ. ಇಂತಹ ಪುಣ್ಯಸ್ಥಳದಲ್ಲಿ ಗೌರವ ದೊರೆತಿರುವುದು ಅತ್ಯಂತ ಸಂತಸದ ಸಂಗತಿ. ಎಂದು ತಿಳಿಸಿದರು.
ಸಾಗರದ ಜತೆಗಿನ ಓಡನಾಟ ದಶಕಗಳ ಹಳೆಯದ್ದು, ಕಾಲೇಜಿನ ದಿನಗಳಲ್ಲಿ ಕಾಗೋಡು ತಿಮ್ಮಪ್ಪ ಅವರ ಜತೆ ಕೆಲ ಕ್ಷಣಗಳನ್ನು ಕಳೆದಿದ್ದೇನೆ. ಸಾಹಿತಿ ಡಾ. ನಾ.ಡಿಸೋಜಾ ಅವರು ರಚಿಸಿರುವ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಕಾಲೇಜಿನ ದಿನಗಳಲ್ಲಿ ಸಾಮಾಜಿಕ ಸೇವೆಯ ಕ್ಯಾಂಪ್ನಲ್ಲಿ ವಿದ್ಯಾರ್ಥಿಯಾಗಿ ಭಾಗವಹಿಸಿದ್ದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.
58ರ ಇಸವಿಯಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು ಈವರೆಗೂ ನಟ, ನಿರ್ದೇಶನ, ನಿರ್ಮಾಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕನ್ನಡ ನಾಡಿನ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಪ್ರೇಕ್ಷಕರು ಪ್ರೋತ್ಸಾಹಿಸಿ ಬೆಳೆಸಿದ ಪರಿಣಾಮ ದಶಕಗಳ ಕಾಲ ಅಭಿನಯಿಸಲು ಸಾಧ್ಯವಾಗಿದೆ. ಕಲಾಭಿಮಾನಿಗಳ ಪ್ರೋತ್ಸಾಹ ಎಲ್ಲ ಕಲಾವಿದರ ಮೇಲೂ ನಿರಂತರವಾಗಿರಬೇಕು ಎಂದು ತಿಳಿಸಿದರು.
ಸಾಹಿತಿ ಡಾ. ನಾ.ಡಿಸೋಜಾ ಮಾತನಾಡಿ, ಸಾಗರದ ಅಧಿದೇವತೆಯಾಗಿ ಮಾರಿಕಾಂಬೆಯ ಉತ್ಸವ ತನ್ನ ವೈಶಿಷ್ಟ್ಯತೆಗಳಿಂದಲೇ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ. ಎಲ್ಲ ಜಾತಿ ಸಮುದಾಯದವರು ಒಟ್ಟುಗೂಡಿ ಆಚರಿಸುವ ಮಾರಿಕಾಂಬೆಯ ಇತಿಹಾಸಿಕ ಹಿನ್ನೆಲೆಯು ವಿಶೇಷವಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾರಿಕಾಂಬೆ ಜಾತ್ರೆಯ ಹಿನ್ನೆಲೆಯಲ್ಲಿ ಜನತೆಗೆ ಶುಭಕೋರಿದರು. ಶ್ರೀ ಮಾರಿಕಾಂಬ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ದೀಪಕ್ ಸಾಗರ್ ಕಾರ್ಯಕ್ರಮ ನಿರೂಪಿಸಿದರು.
ಸಾಗರದ ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ಭಾವನಾ ಸಂತೋಷ್, ಲಲಿತಮ್ಮ, ತುಕರಾಂ, ಗಣೇಶ್ ಪ್ರಸಾದ್, ಜಾತ್ರಾ ಸಮಿತಿ ಉಪಾಧ್ಯಕ್ಷ ಯು.ಎಲ್.ಮಂಜಪ್ಪ, ಕಾರ್ಯದರ್ಶಿ ಬಿ.ಗಿರಿಧರರಾವ್, ಖಜಾಂಚಿ ನಾಗೇಂದ್ರ ಎಸ್.ಕುಮುಟಾ, ಎಸ್.ವಿ.ಕೃಷ್ಣಮೂರ್ತಿ, ಸಾಂಸ್ಕøತಿಕ ಸಮಿತಿ ಸಂಚಾಲಕ ಲೋಕೇಶ್ಕುಮಾರ್ ಗುಡಿಗಾರ್, ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಮಾರಿಕಾಂಬ ಕಲಾವೇದಿಕಯಲ್ಲಿ ಬೆಂಗಳೂರಿನ ಭೂಮಿಕಾ ಅವರಿಂದ ಭರತನಾಟ್ಯ, ವಿಶಾಲ ಹರಿಕಿರಣ್ ಅವರಿಂದ ಕೂಚುಪುಡಿ, ಸಾಯಿ ಗ್ರೂಪ್ ಡ್ಯಾನ್ಸ್ ಸಾಗರ ತಂಡದಿಂದ ನೃತ್ಯ, ಎಚ್.ಎಲ್.ರಾಘವೇಂದ್ರ ವೃಂದದಿಂದ ರಸಮಂಜರಿ, ಉಡುಪಿಯ ಡಾ. ಅಭಿಷೇಕ್ಕರೋಡ್ಕಲ್ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.
ಸಾಗರದ ಅಶೋಕ ರಸ್ತೆಯಲ್ಲಿ ಶ್ರೀ ಮಾರಿಕಾಂಬ ಜಾತ್ರಾ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಸಾಂಸ್ಕøತಿಕ ಕಲಾಸಿರಿ ಉತ್ಸವಕ್ಕೆ ನಟ ಶಿವರಾಂ ಚಾಲನೆ ನೀಡಿದರು.
ಸಾಗರದ ಅಶೋಕ ರಸ್ತೆಯಲ್ಲಿ ಶ್ರೀ ಮಾರಿಕಾಂಬ ಜಾತ್ರಾ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಸಾಂಸ್ಕøತಿಕ ಕಲಾಸಿರಿ ಉತ್ಸವದಲ್ಲಿ ಎಚ್.ಎಲ್.ರಾಘವೇಂದ್ರ ತಂಡದ ಸದಸ್ಯರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.