ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗದ ನಿರುದ್ಯೋಗಿ ಯುವಕ-ಯುವತಿಯರಿಗೆ “ತೋಟಗಾರಿಕಾ ಬೆಳೆಗಳ ನರ್ಸರಿ ತಾಂತ್ರಿಕತೆಗಳು” ಕುರಿತು 15 ದಿನಗಳ ಸರ್ಟಿಫಿಕೇಟ್ ಕೋರ್ಸ್ ಇಂದಿನಿಂದ ಆರಂಭಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಬಿ. ಹೇಮ್ಲಾನಾಯ್ಕ್, ಕುಲಸಚಿವರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ , ಇವರು ನೆರವೇರಿಸಿ ಮಾತನಾಡುತ್ತಾ, ಕೇವಲ ಕೃಷಿ ಬೆಳೆಗಳಿಂದ ಮಾತ್ರ ರೈತರು ಲಾಭಗಳಿಸಲು ಸಾಧ್ಯ ಎನ್ನುವುದು ಹಿಂದಿನ ಮಾತು. ಆದರೆ, ಇತ್ತೀಚೆಗೆ ರೈತ ಕುಟುಂಬವು ಕೃಷಿಯೇತರ ಚಟುವಟಿಕೆಗಳಾದ ಹೈನುಗಾರಿಕೆ, ಮೀನುಗಾರಿಕೆ, ಕುರಿಕೋಳಿ ಸಾಕಾಣಿಕೆ, ಜೇನುಸಾಕಾಣಿಕೆಯಂತಹ ಉಪ ಕಸುಬುಗಳನ್ನು ಕೈಗೊಳ್ಳುತ್ತಿದ್ದಾರೆ.
ಅದರಲ್ಲೂ ತೋಟಗಾರಿಕಾ ಬೆಳೆಗಳ ನರ್ಸರಿಗಳಿಂದ ಹೆಚ್ಚಿನ ಮತ್ತು ನಿರಂತರ ಲಾಭವನ್ನು ಗಳಿಸಬಹುದು. ಅಲ್ಲದೆ ಗ್ರಾಮೀಣ ಭಾಗದ ಕೃಷಿ ಮಹಿಳೆಯರು ಹಿತ್ತಲಿನಲ್ಲಿ ಕೈತೋಟ ಮಾಡಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಅಲ್ಪ ಜಾಗವನ್ನು ಹೂವಿನ ಸಸಿಗಳ ನರ್ಸರಿ, ತರಕಾರಿ ಬೆಳೆಗಳ ನರ್ಸರಿಗಳನ್ನು ಮಾಡಿ ಮಾರಾಟ ಮಾಡುವುದರಿಂದ ಆದಾಯ ಗಳಿಸಬಹುದು. ಅಲ್ಲದೆ, ಇತ್ತೀಚೆಗೆ ತಾರಸಿ ತೋಟದ ಪರಿಕಲ್ಪನೆ ನಗರ ಪ್ರದೇಶದ ಗೃಹಿಣಿಯರಿಗೆ ವರದಾನವಾಗಿದೆ.
ಗೃಹಿಣಿಯರೂ ಕೂಡ ಇಂತಹ ನರ್ಸರಿಗಳನ್ನು ಮಾಡುವುದು, ಮತ್ತು ವಿವಿಧ ಅಲಂಕಾರಿಕ ಹೂವಿನ ಸಸಿಗಳನ್ನು ಕುಂಡಗಳಲ್ಲಿ ಬೆಳೆಸಿ, ಅವುಗಳನ್ನು ವಿವಿಧ ಸಮಾರಂಭಗಳಿಗೆ ಅಲಂಕಾರಕ್ಕಾಗಿ ಬಾಡಿಗೆ ರೂಪದಲ್ಲಿ ನೀಡುವುದರಿಂದಲೂ ಹಣಗಳಿಸಬಹುದೆಂದರು. ನರ್ಸರಿಯಲ್ಲಿ ಸಸಿಗಳನ್ನು ಮಕ್ಕಳಂತೆ ಪಾಲನೆ ಮಾಡುವುದು, ಶ್ರಮ, ಶ್ರದ್ಧೆ, ಆಸಕ್ತಿ ಇದ್ದರೆ ವಿಶೇಷ ಬೇಡಿಕೆ ಇರುವ ವಿವಿಧ ಹಣ್ಣಿನ ತಳಿಗಳು, ಹೂವಿನ ತಳಿಗಳು ಮತ್ತು ತರಕಾರಿ ಸಸಿಗಳನ್ನು ಬೆಳೆಸುವುದರಿಂದ ಲಾಭಗಳಿಸಬಹುದೆಂದು ತಿಳಿಸುತ್ತಾ, ಈ 15 ದಿನಗಳ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಕರೆನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಡಿ.ತಿಪ್ಪೇಶ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ತೋಟಗಾರಿಕೆ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ಮಾತನಾಡುತ್ತಾ, ಈ ರೀತಿ ತೋಟಗಾರಿಕಾ ಬೆಳೆಗಳಾದ ತೆಂಗು, ಮಾವು, ಹಲಸು, ಅಡಿಕೆ, ಕೊಕೊ, ಕಾಳುಮೆಣಸು, ವೀಳ್ಯಾದೆಲೆ, ಸಪೋಟ ಹೀಗೆ ವಿವಿಧ ಹಣ್ಣುಗಳು, ಹೂವುಗಳ ಮತ್ತು ತರಕಾರಿ ಸಸಿಗಳ ನರ್ಸರಿಯನ್ನು ಪ್ರಾರಂಭಿಸಲು ಯಾವುದೇ ಪದವಿ ಬೇಕಿಲ್ಲ.
ಆಸಕ್ತಿ ಮುಖ್ಯ ಎನ್ನುತ್ತಾ, ನರ್ಸರಿಯಲ್ಲಿ ವೈಜ್ಞಾನಿಕವಾಗಿ ಸಸಿಮಡಿಗಳನ್ನು ನಿರ್ಮಿಸುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ, ಮತ್ತು ಯಾವ ಪ್ರದೇಶಕ್ಕೆ ಯಾವ ತಳಿಗಳು ಸೂಕ್ತ ಎಂಬ ಮಾಹಿತಿಯಂತೆ ಬೇಡಿಕೆ ಅನುಸಾರ ಸಸಿಗಳನ್ನು ಬೆಳೆಸಿ ಮಾರಾಟ ಮಾಡುವುದರಿಂದ ಅಂತಹ ಸಸಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದ್ದರಿಂದ ಈ ತರಬೇತಿಯಲ್ಲಿ ಎಲ್ಲಾ ರೀತಿಯ ಸಸಿಗಳನ್ನು ಕಸಿ ಮಾಡುವ ವಿವಿಧ ವಿಧಾನಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಲಾಗುವುದರಿಂದ ಶಿಬಿರಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಕರೆನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಬಿ. ಸಿ. ಹನುಮಂತಸ್ವಾಮಿ ಕು|| ಜಿ. ಬಿ. ಸ್ಮಿತ, ವಿಜ್ಞಾನಿ (ತೋಟಗಾರಿಕೆ) ಡಾ. ಎಂ. ಬಸವರಾಜ, ವಿಜ್ಞಾನಿ (ಬೇಸಾಯ ಶಾಸ್ತ್ರ) ಕೇಂದ್ರದ ಇತರೆ ವಿಜ್ಞಾನಿಗಳು, ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
.