ಶಿವಮೊಗ್ಗ, ಜನವರಿ 25 : ಜಗತ್ತಿನಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭುವಾಗಿದ್ದು, ಪ್ರಜಾಪ್ರಭುತ್ವದ ಸುಭದ್ರತೆಗೆ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಆರ್.ಕೆ.ಎಂ.ಎಂ. ಮಹಾಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು
ದೇಶದ ಭವಿಷ್ಯ ನಿರ್ಣಯ ಮತದಾರರ ಕೈಯಲ್ಲಿದೆ. ಕೇವಲ ಒಂದು ಪ್ರಾಮಾಣಿಕ ಮತ ಚಲಾವಣಿಯಿಂದ ಪ್ರಜಾಪ್ರಭುತ್ವದ ಬಲಪಡಿಸಲು ಸಾಧ್ಯವಿದೆ ಎಂದರು.
ಪ್ರಜಾಪ್ರಭುತ್ವ ಗಿಡವಾಗಿದ್ದರೆ ಮತದಾರ ನೀರು ಇದ್ದ ಹಾಗೇ, ಪ್ರಜಾಪ್ರಭುತ್ವ ಹೆಮ್ಮರವಾಗಿ ಬೆಳೆಯಲು ಮತದಾರರು ಮತ ಎಂಬ ನೀರು ಹಾಕಬೇಕು. ಯುವ ಜನಾಂಗ ಮತದಾನದ ಪ್ರಕ್ರಿಯಲ್ಲಿ ಭಾಗವಹಿಸಬೇಕು ಹಾಗೂ ತಾವು ಗೆಲ್ಲಿಸುವ ಅಭ್ಯರ್ಥಿ ರಾಷ್ಟ್ರಮಟ್ಟದಲ್ಲಿ ನಮ್ಮನ್ನು ಪ್ರತಿನಿಧಿಸುತ್ತಾರೆ ಎಂಬ ಅರಿವಿರಲಿ. ನೀವು ಸಹ ನಾಳೆಯ ಒಳ್ಳೆಯ ನಾಯಕರಾಗಿ ಹೊರಹೊಮ್ಮ ಬಹುದಾಗಿದೆ ಎಂದು ನುಡಿದರು.
1950 ರಲ್ಲಿಯೇ ಚುನಾವಣೆ ಆಯೋಗವನ್ನು ಸ್ಥಾಪಿಸಿಸಲಾಗಿದೆ. ಕಾನೂನುಗಳ ಅರಿವು ಬಹುಮುಖ್ಯ. ಅಂತಹ ಕಾರ್ಯವನ್ನು ಕಾನೂನು ಸೇವೆಗಳ ಪ್ರಾಧಿಕಾರವು ಮಾಡುತ್ತಿದೆ. ನಮಗೆ ಇರುವ ಸ್ವಾತಂತ್ರ, ಅಧಿಕಾರ ಎಂದರೆ ಮತ ಚಲಾಯಿಸುವುದಾಗಿದೆ. ಇನ್ನು ಮುಂದೇ ಯಾವುದೇ ಆಮಿಷಗಳಿಂದ ಪ್ರಭಾವಿತರಾಗದೇ ಮುಂದಿನ ಚುನವಣೆಯಲ್ಲಿ ತಪ್ಪದೇ ಮತ ಚಲಾಯಿಸೋಣ ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮಾತನಾಡಿ, ಚುನಾವಣೆಯಲ್ಲಿ ಒಂದೊಂದು ಮತ ಸಹ ಅತ್ಯಮೂಲ್ಯ. ಒಂದು ಮತದಿಂದ ಗೆಲವು ಸೋಲು ಕಂಡಿರುವ ಉದಾಹರಣೆಗಳಿವೆ. ಸಂವಿಧಾನ ದತ್ತವಾಗಿ ಸಿಕ್ಕಿರುವ ಮತದಾನ ಹಕ್ಕನ್ನು ಅರಿತುಕೊಂಡು ಮತದಾರರು ಜವಾಬ್ದಾರಿಯಿಂದ ಒಳ್ಳೆಯ ಅಭ್ಯರ್ಥಿಗಳಿಗೆ ಮತದಾನ ಮಾಡಿ ಎಂದರು.
ಪ್ರಜಾಪ್ರಭುತ್ವದ ಸುಭದ್ರತೆಗೆ 18 ವರ್ಷ ತುಂಬಿದ ಎಲ್ಲರೂ ತಮ್ಮ ಮಾತದಾನ ಹಕ್ಕನ್ನು ಚಲಾಯಿಸಬೇಕಾಗಿದೆ. ಬೇರೆ ದೇಶಗಳಲ್ಲಿ ಕೆಲವರಿಗೆ ಮಾತ್ರವೇ ಮತದಾನ ಮಾಡುವ ಹಕ್ಕು ನೀಡಲಾಗಿದ್ದು, ಆದರೆ ನಮ್ಮ ದೇಶದಲ್ಲಿ 18 ವರ್ಷ ತುಂಬಿದ ಎಲ್ಲರಿಗೂ ಮತದಾನ ಮಾಡುವ ಹಕ್ಕನ್ನು ನೀಡಲಾಗಿದೆ ಈ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮತದಾರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಹಾಗೇ ನೂತವಾಗಿ ಮತದಾರ ಪಟ್ಟಿಗೆ ಸೇರಿರುವ ಮತದಾರರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾದ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಶಾಲೆ, ಕಾಲೇಜುಗಳಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರದಲ್ಲಿ ಜಿಲ್ಲಾ ಸಿವಿಲ್ ನ್ಯಾಯಾಧೀಶೆ ಕೆ.ಎಸ್. ಸರಸ್ವತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಉಪ ವಿಭಾಗಾಧಿಕಾರಿ ಟಿ.ವಿ. ಪ್ರಕಾಶ್, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ವೀರಭದ್ರಪ್ಪ, ನಗರ ಯೋಜನಾ ನಿರ್ದೇಶಕ ಡಾ. ನಾಗೇಂದ್ರ ಎಫ್. ಹೊನ್ನಳ್ಳಿ , ಮುಂತಾದ ಗಣ್ಯರು ಹಾಗೂ ಶಾಲಾ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು .