ಶಿವಮೊಗ್ಗ, ಡಿಸೆಂಬರ್ 24 : ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿರುವ ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಬೇಕು ಎಂದು ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅವರು ಸೂಚನೆ ನೀಡಿದರು.

ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ)ಯ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಗ್ರಾಮ ಜ್ಯೋತಿ ಯೋಜನೆಯಡಿ 16288 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಲಾಗಿತ್ತು. ಇದುವರೆಗೆ 15590ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನುಳಿದ ಶೇ.5ರಷ್ಟು ಮನೆಗಳಿಗೆ ಆದಷ್ಟು ಬೇಗನೆ ಸಂಪರ್ಕ ಕಲ್ಪಿಸಬೇಕು. ಈಗಾಗಲೇ ಕಲ್ಪಿಸಿರುವ ವಿದ್ಯುತ್ ಸಂಪರ್ಕದ ಗುಣಮಟ್ಟ ಹಾಗೂ ಬಾಕಿ ಉಳಿದಿರುವ ಮನೆಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

ಶುದ್ಧ ಕುಡಿಯುವ ನೀರಿನ ಘಟಕ: ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸುಸ್ಥಿತಿಯಲ್ಲಿರುವಂತೆ ನಿರ್ವಹಣೆ ಮಾಡಬೇಕು. ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು. ನೀರಿನ ಮೂಲ ಸಿಗದೆ ಪೈಪ್‍ಲೈನ್, ಟ್ಯಾಂಕ್ ನಿರ್ಮಾಣ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಅವರು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ 290 ಘಟಕಗಳಿದ್ದು, 30 ದುರಸ್ತಿಯಲ್ಲಿವೆ. ಈ ಘಟಕಗಳ ನಿರ್ವಹಣೆಯನ್ನು ಗ್ರಾಮೀಣ ನೀರು ಪೂರೈಕೆ ವಿಭಾಗಕ್ಕೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಇಒ ಎಂ.ವೈ.ವೈಶಾಲಿ ಅವರು ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆ: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಅಕ್ಟೋಬರ್ ಕೊನೆಯವರೆಗೆ 8.75ಕೋಟಿ ರೂ. ಕೂಲಿ ಮೊತ್ತ ಹಾಗೂ 9.15ಕೋಟಿ ರೂ. ಸಾಮಾಗ್ರಿ ಘಟಕದ ಮೊತ್ತ ಪಾವತಿಗೆ ಬಾಕಿ ಇದೆ. ಬಾಕಿ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಮಟ್ಟದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಉದ್ಯೋಗ ಖಾತ್ರಿ ಯೋಜನೆ ಉತ್ತಮ ಅವಕಾಶವಾಗಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಬಿ.ವೈ.ರಾಘವೇಂದ್ರ ಅವರು ತಿಳಿಸಿದರು.

ಅಮೃತ್ ಯೋಜನೆ: ಅಮೃತ್ ಯೋಜನೆಯಡಿ ಶಿವಮೊಗ್ಗ ನಗರದಲ್ಲಿ ಒಟ್ಟು 65ಕೋಟಿ ರೂ. ವೆಚ್ಚದಲ್ಲಿ ನೀರು ಸರಬರಾಜು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಇದುವರೆಗೆ 11 ಓವರ್ ಹೆಡ್ ಟ್ಯಾಂಕ್‍ಗಳ ಪೈಕಿ 10 ಪೂರ್ಣಗೊಂಡಿದೆ. ಈಗಾಗಲೇ 28ಕಿಮಿ ಉದ್ದದ ಪೈಪ್‍ಲೈನ್ ಕಾಮಗಾರಿ ನಡೆಸಲಾಗಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಒಳಚರಂಡಿ ಕೊಳಚೆ ನೀರು ಯಾವುದೇ ಕಾರಣಕ್ಕೂ ಚಾನೆಲ್‍ಗೆ ಬಿಡಬಾರದು ಎಂದು ಅವರು ಎಚ್ಚರಿಕೆ ನೀಡಿದರು.

ತ್ಯಾಜ್ಯ ವಿಲೇವಾರಿ ಘಟಕ:  ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಮುಂದಿನ ಜೂನ್ ಒಳಗೆ ಕಡ್ಡಾಯವಾಗಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಆದೇಶ ನೀಡಲಾಗಿದೆ. ಈಗಾಗಲೆ 18 ಗ್ರಾಮ ಪಂಚಾಯತ್‍ಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, 12 ಅನುಮೋದನೆಯಾಗಿದ್ದು, ತಲಾ 10 ಲಕ್ಷ ರೂ. ಬಿಡುಗಡೆಯಾಗಿದೆ. 6ಗ್ರಾಮ ಪಂಚಾಯತ್‍ಗಳಲ್ಲಿ ಕಾಮಗಾರಿ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.

ಪ್ರವಾಹ ಪುನರ್ವಸತಿ ಪರೀಶೀಲಿಸಿ: ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕೆ 5ಲಕ್ಷ ರೂ. ನೀಡಲಾಗುತ್ತಿದ್ದು, ಇದರ ಲಾಭ ಅರ್ಹರಿಗೆ ಮಾತ್ರ ಲಭಿಸಬೇಕು. ಕೆಲವು ಕಡೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅನುದಾನ ದುರುಪಯೋಗಪಡಿಸಿಕೊಳ್ಳುವ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ಪರಿಶೀಲನೆ ನಡೆಸಬೇಕು ಎಂದು ಶಾಸಕ ಅರಗ ಜ್ಞಾನೇಂದ್ರ ಅವರು ಒತ್ತಾಯಿಸಿದರು.

ಸಾಮಾಜಿಕ ಭದ್ರತಾ ಯೋಜನೆ: ಸಾಮಾಜಿಕ ಭದ್ರತಾ ಯೋಜನೆಯಡಿ ಕಳೆದ ಕೆಲವು ತಿಂಗಳಿನಿಂದ ಪಿಂಚಣಿ ಮೊತ್ತ ಫಲಾನುಭವಿಗಳಿಗೆ ದೊರಕದೆ ಸಂಕಷ್ಟ ಅನುಭವಿಸುತ್ತಿದ್ದು, ಇದನ್ನು ಸರಿಪಡಿಸಬೇಕು ಎಂದು ಅವರು ಹೇಳಿದರು. ಕೆ2 ಸಮಸ್ಯೆಯಿಂದಾಗಿ 6200 ಫಲಾನುಭವಿಗಳ ಬ್ಯಾಂಕ್ ಖಾತೆ ತಾಳೆಯಾಗದ ಕಾರಣ ಪಿಂಚಣಿ ಪಾವತಿ ವಿಳಂಬವಾಗುತ್ತಿದೆ. ಅದನ್ನು ಸರಿಪಡಿಸಲಾಗುತ್ತಿದೆ. ಅಂತ್ಯಸಂಸ್ಕಾರ ಯೋಜನೆಯಡಿ 4367 ಅರ್ಜಿಗಳು ಮಂಜೂರಾಗಿದ್ದು, 2.18ಕೋಟಿ ರೂ. ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು, ಶಾಸಕ ಕುಮಾರ ಬಂಗಾರಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷರು, ದಿಶಾ ಸಮಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!