ಶಿವಮೊಗ್ಗ, ಡಿಸೆಂಬರ್ 21: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2020ರ ಜನವರಿ 03ರಿಂದ 05ರವರೆಗೆ ನಗರದ ನೆಹರೂ ಕ್ರೀಡಾಂಗಣ ಸೇರಿದಂತೆ ನಗರದ ಐದು ಸಮನಾಂತರ ವೇದಿಕೆಗಳಲ್ಲಿ ರಾಜ್ಯ ಮಟ್ಟದ ಯುವ ಜನೋತ್ಸವವನ್ನು ಏರ್ಪಡಿಸಲು ಉದ್ದೇಶಿಸಿದ್ದು, ಯುವಜನೋತ್ಸವದ ಯಶಸ್ವಿಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಯುವಜನೋತ್ಸವದಲ್ಲಿ 15ರಿಂದ 29ವರ್ಷ ವಯೋಮಿತಿಯೊಳಗಿನ ರಾಜ್ಯದ 30ಜಿಲ್ಲೆಗಳ 1800ಕ್ಕೂ ಹೆಚ್ಚಿನ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದ್ದು, ಅವರಿಗೆ ಊಟ ಹಾಗೂ ವಸತಿ ವ್ಯವಸ್ಥೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದವರು ನುಡಿದರು.
ಸ್ಪರ್ಧಾಳುಗಳು ನೋಂದಣಿ ಸಮಯದಲ್ಲಿ ವಯಸ್ಸಿನ ದೃಢೀಕರಣಕ್ಕೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿರುತ್ತದೆ. ಗ್ರಾಮೀಣ ಮತ್ತು ನಗರ ಪ್ರದೇಶದವರು, ಕಾಲೇಜಿನ ಯುವಕ-ಯುವತಿಯರು, ಯುವಕ-ಯುವತಿ ಸಂಘಗಳ ಪ್ರತಿನಿಧಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸ್ಪರ್ಧೆಯಲ್ಲಿ ಜಾನಪದ ನೃತ್ಯ-15ನಿ.(20ಕಲಾವಿದರು), ಜಾನಪದ ಗೀತೆ-07ನಿ.(10ಕಲಾವಿದರು), ಕ್ಲಾಸಿಕಲ್ ಓಕಲ್ ಸೋಲೋ(ಹಿಂದೂಸ್ಥಾನಿ ಮತ್ತು ಕರ್ನಾಟಿಕ್)-15ನಿ., ಕ್ಲಾಸಿಕಲ್ ಇಂಸ್ಟ್ರುಮೆಂಟ್ ಸೋಲೋ(ಸಿತಾರ, ಕೊಳಲು, ವೀಣಾ)-15ನಿ., ತಬಲಾ, ಮೃದಂಗಂ-10ನಿ., ಹಾರ್ಮೋನಿಯಂ-10ನಿ., ಗಿಟಾರ್-10ನಿ., ಕ್ಲಾಸಿಕಲ್ ಡ್ಯಾನ್ಸ್(ಮಣಿಪುರಿ, ಓಡಿಸ್ಸಿ., ಕಥಕ್., ಕೂಚುಪುಡಿ., ಭರತ ನಾಟ್ಯಂ)-15ನಿಮಿಷಗಳ ಕಾಲಾವಶಕಾಶ ಒದಗಿಸಲಾಗುವುದು. ಅಲ್ಲದೇ ಇಂಗ್ಲೀಷ್ ಅಥವಾ ಹಿಂದಿಯ ಭಾಷೆಯಲ್ಲಿ ಏಕಾಂಕ ನಾಟಕ ಪ್ರದರ್ಶನಕ್ಕೆ 45ನಿ., ಹಾಗೂ ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಆಶುಭಾಷಣ ಸ್ಪರ್ಧೆಗೆ 4ನಿಮಿಷಗಳ ಅವಕಾಶ ಕಲ್ಪಿಸಲಾಗಿದೆ ಎಂದರು.
ಸ್ಪರ್ಧೆಗಳ ತೀರ್ಪುಗಾರರಾಗಿ ವಿಷಯ ತಜ್ಞರನ್ನು ಆಹ್ವಾನಿಸಲಾಗುವುದು. ಅಲ್ಲದೇ ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಿಬ್ಬಂಧಿಗಳನ್ನು ನಿಯೋಜಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಅವಶ್ಯಕ ವೇಷಭೂಷಣಗಳನ್ನು ಹಾಗೂ ಸಂಗೀತ ಉಪಕರಣಗಳನ್ನು ಸ್ಪರ್ಧಾಳುಗಳೇ ತರಬೇಕಾಗುವುದು. ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಇಲಾಖೆ ವತಿಯಿಂದ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದವರು ತಿಳಿಸಿದರು.
ಈ ಯುವ ಜನೋತ್ಸವದಲ್ಲಿ ವಿಜೇತರಾದ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳ ಕಲಾವಿದರು ಜನವರಿ 12ರಿಂದ ಒಂದು ವಾರಗಳ ಕಾಲ ಉತ್ತರಪ್ರದೇಶದ ಲಕ್ನೋದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಭಾಗವಹಿಸಲು ಇಲಾಖೆ ವತಿಯಿಂದ ಕಳುಹಿಸಿಕೊಡಲಾಗುವುದು ಎಂದ ಅವರು, ಈ ಕಾರ್ಯಕ್ರಮದ ಉದ್ಘಾಟನೆಗೆ ಶಿಷ್ಠಾಚಾರದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಧರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!