ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿಯೊಂದು ಮಗುವೂ ಆರೋಗ್ಯವಂತನಾಗಿ ಬದುಕಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ವಿಶೇಷ ಶಾಲಾ ಲಸಿಕಾ ಅಭಿಯಾನ ಕೂಡ ಒಂದಾಗಿದೆ. ಯುನಿಸೆಫ್ ಮತ್ತು ಡಬ್ಲ್ಯೂಎಚ್‍ಓ ಸಹಕಾರದಲ್ಲಿ ಆರೋಗ್ಯ ಇಲಾಖೆ ಕರ್ನಾಟಕದಾದ್ಯಂತ ಈ ಅಭಿಯಾನ ನಡೆಸುತ್ತಿದ್ದು ಶಿವಮೊಗ್ಗ ಜಿಲ್ಲೆಯಲ್ಲಿಯೂ ಯೋಜನೆ ವ್ಯವಸ್ಥಿತವಾಗಿ ಮುನ್ನಡೆದಿದೆ.
ವಿಶೇಷ ಶಾಲಾ ಲಸಿಕಾ ಅಭಿಯಾನ ಡಿಸೆಂಬರ್ ಕೊನೆಯವರೆಗೆ ನಡೆಯಲಿದ್ದು ಶಿವಮೊಗ್ಗ ಜಿಲ್ಲೆಯ 1ನೇ ತರಗತಿಯ ಮಕ್ಕಳಿಗೆ ನಾಯಿಕೆಮ್ಮು ಕುರಿತ ಲಸಿಕೆ, 5 ಮತ್ತು 10ನೇ ತರಗತಿ ಮಕ್ಕಳಿಗೆ ಗಂಟಲುಮಾರಿ ಮತ್ತು ಧನುರ್ವಾಯು ಮುಂಜಾಗ್ರತಾ ಲಸಿಕೆಗಳನ್ನು ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಯ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು ಶಿವಮೊಗ್ಗ ಜಿಲ್ಲೆಯ 84 ಸಾವಿರ ಮಕ್ಕಳಿಗೆ ಶಾಲೆಗೇ ಇಲಾಖೆ ವತಿಯಿಂದ ತೆರಳಿ ಲಸಿಕೆ ಹಾಕಲಾಗುತ್ತಿದೆ.
ಸಮರೋಪಾದಿಯಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ 350 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಸ್ಟಾಫ್ ನರ್ಸ್‍ಗಳು ಹಾಗೂ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ತೊಡಗಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಆರೋಗ್ಯಾಧಿಕಾರಿ ಡಾ|| ರಾಜೇಶ್ ಸುರಗಿಹಳ್ಳಿಯವರ ಮಾರ್ಗದರ್ಶನದಲ್ಲಿ ಅಭಿಯಾನ ಮುನ್ನಡೆದಿದೆ. ವೈದ್ಯರ ತಂಡ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಜೊತೆಯಲ್ಲಿ ಈ ಕುರಿತಂತೆ ಚಿಂತನ-ಮಂಥನ ನಡೆಸುತ್ತಿದೆ.

ಬೈಟ್: ಡಾ|| ಸತೀಶ್‍ಚಂದ್ರ, ವಿಶ್ವ ಆರೋಗ್ಯ ಸಂಸ್ಥೆ, ಮಂಗಳೂರು ವಿಭಾಗ: ಶಾಲಾ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಮಗು ಆರೋಗ್ಯವಂತರಾಗಿ ಮುನ್ನಡೆಯಬೇಕು. ಮುಂಜಾಗ್ರತಾ ಕ್ರಮವಾಗಿ ರೋಗನಿರೋಧಕ ಚುಚ್ಚುಮದ್ದುಗಳನ್ನು ಹಾಕಲಾಗುತ್ತಿದೆ. ಡಬ್ಲ್ಯೂಎಚ್‍ಓ ಈ ಯೋಜನೆಯಲ್ಲಿ ಸಹಭಾಗಿತ್ವ ನೀಡಿದೆ.

ಡಾ|| ನಾಗರಾಜ ನಾಯಕ್ ಎಲ್., ಯೋಜನೆಯ ಸಂಯೋಜನಾಧಿಕಾರಿ: ವಿಶೇಷ ಲಸಿಕಾ ಅಭಿಯಾನದಲ್ಲಿ ಶಿವಮೊಗ್ಗ ಜಿಲ್ಲೆಯ 84 ಸಾವಿರ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಇದಕ್ಕಾಗಿ ಆರೋಗ್ಯ ಇಲಾಖೆ ವಿಶೇಷ ತಂಡವನ್ನು ರೂಪಿಸಿದ್ದು ಸರ್ಕಾರಿ ಮತ್ತು ಖಾಸಗಿ ಶಾಲೆಯ ಎಲ್ಲಾ ಮಕ್ಕಳನ್ನೂ ಈ ಯೋಜನೆಯಲ್ಲಿ ಅಳವಡಿಸಲಾಗಿದೆ.

ಸುಧಾ, ಪೋಷಕರು: ನನ್ನ ಮಗುವಿಗೂ ಲಸಿಕೆ ಹಾಕಿಸಿದ್ದೇವೆ. ರೋಗ ಬಂದಮೇಲೆ ಸಮಸ್ಯೆಗೊಳಗಾಗುವುದಕ್ಕಿಂತ ಬರುವ ಮೊದಲೇ ಜಾಗೃತಿ ವಹಿಸಬೇಕು. ಸರ್ಕಾರ ಇಂತಹ ಅಭಿಯಾನಗಳನ್ನು ನಡೆಸಿ ಆರೋಗ್ಯದ ಕುರಿತು ಕಾಳಜಿ ವಹಿಸುತ್ತಿದೆ.

ನಾಗರತ್ನ, ಶಾರದ ಶಾಲೆಯ ಮುಖ್ಯೋಪಾಧ್ಯಾಯಿನಿ: ನಮ್ಮ ಶಾಲೆಯ ಎಲ್ಲಾ ಮಕ್ಕಳಿಗೂ ಆರೋಗ್ಯ ಇಲಾಖೆಯ ವತಿಯಿಂದ ಶಾಲೆಗೇ ಬಂದು ಲಸಿಕೆ ಹಾಕುತ್ತಿದ್ದಾರೆ. ಮಕ್ಕಳ ಆರೋಗ್ಯದ ಬಗ್ಗೆ ಸರ್ಕಾರದ ಕಾಳಜಿಯನ್ನು ನಾವು ಮೆಚ್ಚಬೇಕು. ಯಾವುದೇ ಮಗು ಈ ಯೋಜನೆಯಿಂದ ಕೈ ತಪ್ಪದಂತೆ ನೋಡಿಕೊಳ್ಳಬೇಕಾದದ್ದೂ ಕೂಡ ನಮ್ಮ ಜವಾಬ್ದಾರಿಯಾಗಿದೆ.

ಸರ್ಕಾರ ವಿಶೇಷ ಅಭಿಯಾನಗಳನ್ನು ನಡೆಸಿ ಮಕ್ಕಳ ಆರೋಗ್ಯದ ಬಗ್ಗೆ ಪ್ರಾಮುಖ್ಯತೆ ನೀಡುತ್ತಿದೆ. ವಿಶೇಷ ಲಸಿಕಾ ಅಭಿಯಾನದ ಮೂಲಕ ರೋಗನಿರೋಧಕ ಚುಚ್ಚುಮದ್ದುಗಳನ್ನು ನೀಡುತ್ತಿದ್ದು ಶಿವಮೊಗ್ಗ ಜಿಲ್ಲೆ ಈ ಯೋಜನೆಯಲ್ಲಿ ಯಶಸ್ಸಿನತ್ತ ಸಾಗಿದೆ. 
error: Content is protected !!