ಶಿವಮೊಗ್ಗ, ಡಿಸೆಂಬರ್ 18 : ಜಿಲ್ಲೆಯ ಎಲ್ಲಾ ತಾಲೂಕು ನ್ಯಾಯಾಲಯಗಳಲ್ಲಿ ಇತ್ತೀಚೆಗೆ ನಡೆಸಿದ ಎಲ್ಲಾ ರೀತಿಯ ಸಿವಿಲ್ ಮತ್ತು ರಾಜಿಯಾಗಬಲ್ಲಂತಹ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಇನ್ನಿತರ ರೀತಿಯ 1,053ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಲೋಕ ಅದಾಲತ್ನಿಂದಾಗಿ ನ್ಯಾಯಾಲಯದಲ್ಲಿ ಬಾಕಿ ಇದ್ದ 795ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಹಾಗೂ 258ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 1,053ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಪ್ರಕರಣಗಳ ರಾಜಿ ಸಂಧಾನದಿಂದ ಬಾದಿತರಿಗೆ 10,01,40,086ರೂ.ಗಳನ್ನು ಕೊಡಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಸರ್ವರಿಗೂ ನ್ಯಾಯ ಎಂಬ ಪರಿಕಲ್ಪನೆಯಡಿಯಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಶೀಘ್ರವಾಗಿ ಹಾಗೂ ತ್ವರಿತವಾಗಿ ಪ್ರಕರಣಗಳು ಇತ್ಯರ್ಥಗೊಳ್ಳಬೇಕೆಂಬ ಸದುದ್ದೇಶದಿಂದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿಯ ನಿರ್ದೇಶನದ ಮೇರೆಗೆ ರಾಷ್ಟ್ರದಾದ್ಯಂತ ರಾಷ್ಟ್ರೀಯ ಲೋಕ ಅದಾಲತನ್ನು ಏರ್ಪಡಿಸಲಾಗಿತ್ತು.
ಈ ಲೋಕ ಅದಾಲತ್ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ತ್ವರಿತವಾಗಿ ವಿಲೇವಾರಿಯಾಗುವುದರಿಂದ ನ್ಯಾಯಾಲಯಗಳ ಮೇಲಿನ ಪ್ರಕರಣಗಳ ಹೊರೆ ಗಣನೀಯವಾಗಿ ಕಡಿಮೆಯಾದಂತಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಅವರು ಅಭಿಪ್ರಾಯಪಟ್ಟಿದ್ದಾರೆ.