ಶಿವಮೊಗ್ಗ, ನವೆಂಬರ್ 10  : ಸರ್ಕಾರದ ವಿವಿಧ ಇಲಾಖೆಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸೇವೆ ಸಲ್ಲಿಸುತ್ತಿರುವ ನೌಕರರು, ತಮ್ಮ ಅಹವಾಲುಗಳೊಂದಿಗೆ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸಕಾಲಿಕವಾಗಿ ಮಾನವೀಯ ನೆಲೆಯಲ್ಲಿ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಹಳೆ ಕಚೇರಿಯ ಜಿಲ್ಲಾಡಳಿತ ಸಭಾಂಗಣದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ತಾಲೂಕು ಹಂತದ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸದಿರುವ ಕಾರಣ ಸಾಕಷ್ಟು ಜನ ದಿನಂಪ್ರತಿ ಜಿಲ್ಲಾಧಿಕಾರಿಗಳ ಕಚೇರಿ ಬಾಗಿಲು ಕಾಯುವಂತಾಗಿದೆ. ಇದರಿಂದಾಗಿ ಜಿಲ್ಲಾಡಳಿತದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದವರು ನುಡಿದರು.
ಯಾವುದೇ ವ್ಯಕ್ತಿ ಕಚೇರಿಗೆ ಬರುವ ಉದ್ದೇಶವೇ ತನಗಾದ ಸಮಸ್ಯೆಯ ಇತ್ಯರ್ಥಕ್ಕಾಗಿ. ಅದನ್ನು ಆಲಿಸುವ ಅಧಿಕಾರಿಗಳು ಆದ್ಯತೆಯ ಮೇಲೆ, ಕಾನೂನಿನ ಪರಿಮಿತಿಯೊಳಗೆ ಕಾರ್ಯನಿರ್ವಹಿಸಬೇಕು. ಇದರಿಂದಾಗಿ ಇಲಾಖೆಯ ಗೌರವ ಹೆಚ್ಚಲಿದೆ ಮಾತ್ರವಲ್ಲ ಒಂದು ಉತ್ತಮ ಕೆಲಸ ನಿರ್ವಹಿಸಿದ ತೃಪ್ತಿ ಸಿಗಲಿದೆ ಎಂದರು.
ಕಚೇರಿಗಳಲ್ಲಿ ಬಹುದಿನಗಳಿಂದ ವಿಲೇವಾರಿಯಾಗದೆ ಉಳಿದಿರುವ ಕಡತಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಸಂಬಂಧ ಇಲಾಖಾ ಅಧಿಕಾರಿಗಳು ಸಿಬ್ಬಂಧಿಗಳ ಸಭೆ ಕರೆದು ಸೂಚನೆ ನೀಡುವಂತೆ ಸೂಚಿಸಿದ ಅವರು, ಅಧಿಕಾರಿಗಳು ಪ್ರತಿ ಟೇಬಲ್-ಟೇಬಲ್‍ನ ಪರಿಶೀಲನೆ ನಡೆಸುವಂತೆ ಸೂಚಿಸಿದರು. ಅಗತ್ಯವಿದ್ದಲ್ಲಿ ತಾವುಗಳೇ ಖುದ್ದಾಗಿ ಪರಿಶೀಲಿಸುವುದಾಗಿ ತಿಳಿಸಿದರು.
ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸರ್ಕಾರ, ನಾಗರೀಕರು ಮತ್ತು ಖಾಸಗಿ ವಲಯದಂತಹ ಎಲ್ಲಾ ಪಾಲುದಾರರು ಸಂಘಟಿತರಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದ ಅವರು, ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರ ಅಡಚಣೆಯನ್ನುಂಟು ಮಾಡಿರುವುದನ್ನು ಅಲ್ಲಗಳೆಯುವಂತಿಲ್ಲ ಎಂದವರು ನುಡಿದರು.
ದೇಶದ ಪ್ರತಿ ನಾಗರೀಕನೂ ಜಾಗರೂಕನಾಗಿದ್ದು, ಎಲ್ಲಾ ಸಂದರ್ಭದಲ್ಲೂ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧನಾಗಿರಬೇಕು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಬೆಂಬಲಿಸಬೇಕು ಎಂದರು.
ಪ್ರತಿಯೊಬ್ಬರೂ ತಮ್ಮ ಕಾರ್ಯಕ್ಷೇತ್ರದಲ್ಲಿ ಕಾನೂನಿನ ನಿಯಮಗಳನ್ನು ಅನುಸರಿಸಬೇಕಲ್ಲದೆ ಪ್ರಾಮಾಣಿಕತೆ ಮೆರೆಯಬೇಕು. ಲಂಚ ಕೊಡುವುದು ಮತ್ತು ಪಡೆಯುವುದನ್ನು ವಿರೋಧಿಸಬೇಕು. ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕ ಹಿತಾಸಕ್ತಿಯಿಂದಲೇ ಕಾರ್ಯನಿರ್ವಹಿಸಬೇಕು. ವೈಯಕ್ತಿಕ ನಡುವಳಿಕೆಯಲ್ಲಿ ನಿಷ್ಠೆ ಪ್ರದರ್ಶಿಸುವ ಮೂಲಕ ಮಾದರಿಯಾಗಿರಬೇಕೆಂದವರು ನುಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಜಿ.ಅನುರಾಧ, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಯೋಜನಾ ನಿರ್ದೇಶಕ ನಾಗೇಂದ್ರ ಎಫ್. ಹೊನ್ನಳ್ಳಿ ಸೇರಿದಂತೆ ಜಿಲ್ಲಾಧಿಕಾರಿಗಳ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.
error: Content is protected !!