ಶಿವಮೊಗ್ಗ, ನವೆಂಬರ್ 25 : ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ ಮೊದಲ ಹತ್ತು ಸ್ಥಾನದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಅದಕ್ಕಾಗಿ ಶಿಕ್ಷಕರು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಶಿಕ್ಷಕರಿಗೆ ಸೂಚಿಸಿದರು.
ಅವರು ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳ ಶಿಕ್ಷಕರಿಗಾಗಿ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗಾಗಿ ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವಂತೆ ತಿಳಿಸಿದ ಅವರು, ಮಕ್ಕಳಲ್ಲಿ ಇರುವ ಪರೀಕ್ಷಾಭಯ ನಿವಾರಣಗೆ ಕ್ರಮ ಕೈಗೊಳ್ಳಬೇಕು. ಪರೀಕ್ಷೆಯ ದಿನವನ್ನು ಮಕ್ಕಳು ಹಬ್ಬದಂತೆ ಸಂಭ್ರಮಿಸುವಂತಾಗಬೇಕು ಎಂದರು.
ಶಿಕ್ಷಕರು ಮಾಡುವ ಪಾಠ ಮತ್ತು ಪಠ್ಯ ಸಂಬಂಧಿ ಚಟುವಟಿಕೆಗಳು ಮಕ್ಕಳಿಗೆ ಸರಳ, ಸುಲಭವಾಗಿ ಅರ್ಥವಾಗುವಂತಿದ್ದು, ಸದಾ ನೆನಪಿನಲ್ಲಿಳಿಯುವಂತಾಗಬೇಕು. ಪರೀಕ್ಷೆಗೆ ಹಾಜರಾಗುವ ಪ್ರತಿ ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗದೆ ಉತ್ತಮ ಫಲಿತಾಂಶದೊಂದಿಗೆ ಶೈಕ್ಷಣಿಕವಾಗಿ ಮುಂದುವರೆಯಲು ಪ್ರೇರಣೆ ನೀಡಬೇಕೆಂದವರು ನುಡಿದರು.
ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವ, ಗರಿಷ್ಟ ಫಲಿತಾಂಶಕ್ಕಾಗಿ ಶ್ರಮಿಸದ, ಕನಿಷ್ಟ ಫಲಿತಾಂಶ ಹೊಂದದ ಶಾಲಾ ಶಿಕ್ಷಕರ ಮೇಲೆ ಕ್ರಮ ಅನಿವಾರ್ಯವಾಗಲಿದೆ. ಎಲ್ಲಾ ಶಿಕ್ಷಕರು ಸಮನ್ವಯತೆ ಸಾಧಿಸಿ, ಶಾಲಾ ಫಲಿತಾಂಶ ಹೆಚ್ಚಿಸಲು, ಕಳೆದ ಸಾಲಿನಲ್ಲಿ ಆಗಿರುವ ಲೋಪದೋಷಗಳನ್ನು ಮರುಕಳಿಸದಂತೆ ಗಮನಹರಿಸುವಂತೆ ಹಾಗೂ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗುವಂತೆ ಮಾರ್ಗದರ್ಶನ ನೀಡಲು ಸೂಚಿಸಿದರು.
ಈ ಕಾರ್ಯಾಗಾರವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ 180ಸರ್ಕಾರಿ, 106ಅನುದಾನಿತ ಹಾಗೂ 175ಅನುದಾನರಹಿತ ಪ್ರೌಢಶಾಲೆಗಳ 22000ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಮುಂದಿನ ಮೂರು ತಿಂಗಳಲ್ಲಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಗಮನಹರಿಸುವಂತೆ ಶಿಕ್ಷಕರಿಗೆ ಸೂಚಿಸಿದರು.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುವಂತೆ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ ತಾಯಂದಿರ ಸಭೆ, ಮುಖ್ಯಶಿಕ್ಷಕರ ಸಭೆಗಳನ್ನು ಏರ್ಪಡಿಸಿ, ಸಮಾಲೋಚನೆ ನಡೆಸಲಾಗಿದೆ. ಅಲ್ಲದೇ ವಿಷಯ ಪರಿಣಿತ ತಜ್ಞ ಸಂಪನ್ಮೂಲ ವ್ಯಕ್ತಿಗಳ ಸಲಹೆ-ಮಾರ್ಗದರ್ಶನವನ್ನು ಪಡೆದು, ಎಲ್ಲಾ ಶಾಲೆಗಳಲ್ಲಿ ಅಳವಡಿಸಿಕೊಳ್ಳುವಂತೆ ಈಗಾಗಲೆ ಸೂಚಿಸಲಾಗಿದೆ. ಅಂತೆಯೇ ಶಾಲೆಗೆ ಭೇಟಿ ನೀಡುವ ಶಿಕ್ಷಕರು ಕ್ವಿಕ್ ಟೆಸ್ಟ್ ನಡೆಸಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾರ್ಗದರ್ಶನ ನೀಡಲು ಸೂಚಿಸಲಾಗಿದೆ ಎಂದರು.
ಶಿಕ್ಷಕರು ತಮ್ಮ ದೈನಂದಿನ ಕಲಿಕಾ ಚಟುವಟಿಕೆಗಳಲ್ಲಿ ವಿಷಯವಾರು ಹೊಸ-ಹೊಸ ಕೌಶಲ್ಯಗಳನ್ನು ಅಳವಡಿಸಿಕೊಂಡು ತರಗತಿಗಳನ್ನು ನಡೆಸಬೇಕು. ಒಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯನ್ನು ನಂ.1 ಸ್ಥಾನದಲ್ಲಿರುವಂತೆ ನೋಡಿಕೊಳ್ಳಬೇಕು ಎಂದ ಅವರು, ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಸಹಪಾಠಿ ಶಿಕ್ಷಕರೊಂದಿಗೆ ಸಮನ್ವಯತೆ ಸಾಧಿಸಿಕೊಂಡು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಗಮನಹರಿಸುವಂತೆ ಸೂಚಿಸಿದರು.
ಶಾಲೆಯಲ್ಲಿ ಅಮೂಲ್ಯ ಪಾಂಡಿತ್ಯ ಹೊಂದಿದ ಶಿಕ್ಷಕರಿದ್ದರೂ ಸಕಾಲದಲ್ಲಿ ಮಕ್ಕಳಿಗೆ ಬೋಧನಾ ಚಟುವಟಿಕೆ ಕೈಗೊಳ್ಳದೆ ಪಠ್ಯೇತರ ಚಟುವಟಿಕೆಗಳಲ್ಲಿ ಸಮಯ ವ್ಯಯ ಮಾಡುವುದು ಸರಿಯಲ್ಲ. ಮುಖ್ಯ ಶಿಕ್ಷಕರು ಅಂತಹ ಶಿಕ್ಷಕರನ್ನು ಗುರುತಿಸಿ ಸೂಕ್ತ ಸಲಹೆ ನೀಡಬೇಕು. ಪ್ರತಿ ಶಾಲೆಯ ಶಿಕ್ಷಕರು ಸ್ವಯಂ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯನಿರ್ವಹಿಸಬೇಕೆಂದವರು ನುಡಿದರು.
ಕಾಲಕಾಲಕ್ಕೆ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಪೋಷಕರಿಗೆ ಮಾಹಿತಿ ನೀಡಬೇಕು. ಮಕ್ಕಳು ಟಿ.ವಿ., ಮೊಬೈಲ್ ಮತ್ತು ಮೊಬೈಲ್ ಗೇಮ್‍ನಂತಹ ಚಟುವಟಿಕೆಯಿಂದ ದೂರ ಉಳಿದು ಅಧ್ಯಯನದಲ್ಲಿ ಸಕ್ರಿಯರಾಗುವಂತೆ ನೋಡಿಕೊಳ್ಳಲು ಪೋಷಕರಿಗೆ ತಿಳಿಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಗಮನಹರಿಸಿ ಕಲಿಕೆಗೆ ಪ್ರೋತ್ಸಾಹಿಸಬೇಕು. ಯಾವುದೇ ಕಾರಣಕ್ಕೂ ಒತ್ತಡ ಹಾಕಬಾರದು ಎಂದವರು ನುಡಿದರು.
ಮಗುವಿನಲ್ಲಿ ನಿರಂತರ ಮತ್ತು ವ್ಯಾಪಕ ಕಲಿಕೆ ಇರುವಂತೆ ಶಿಕ್ಷಕರು ಗಮನಹರಿಸಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರಲು ಪ್ರಸ್ತುತ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಮನೋವೈದ್ಯರು ಶಾಲೆಗಳಿಗೆ ತೆರಳಿ ಮಕ್ಕಳ ಕಲಿಕೆಗೆ ಪೂರಕವಾಗಿರುವಂತೆ ಸಲಹೆಯನ್ನು ನೀಡಲು ಸೂಚಿಸಲಾಗಿದೆ ಎಂದವರು ನುಡಿದರು.
ಶಿಕ್ಷಕರು ಮಕ್ಕಳ ಮನಸ್ಸನ್ನು ಗೆಲ್ಲುವಂತಾಗಬೇಕು. ಇದು ಮಕ್ಕಳ ಕಲಿಕೆಯಲ್ಲಿ ಉತ್ತಮ ವಾತಾವರಣ ಸೃಜಿಸಲು ಸಹಕಾರಿಯಾಗಲಿದೆ. ನಂ.1 ಸ್ಥಾನಕ್ಕಾಗಿ ವಾಮಮಾರ್ಗ ಬೇಡ. ಒಟ್ಟಿನಲ್ಲಿ ಜಿಲ್ಲೆ ಫಲಿತಾಂಶದಲ್ಲಿ ಉತ್ತಮ ಸ್ಥಾನ ಹೊಂದಲು ಶಿಕ್ಷಕರೆಲ್ಲರೂ ಸಂಘಟಿತರಾಗಿ ಶ್ರಮಿಸಿ ಎಂದವರು ನುಡಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್.ಕುಮಾರ್ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿ.ಪಂ.ಉಪಾಧ್ಯಕ್ಷೆ ಶ್ರೀಮತಿ ವೇದಾವಿಜಯಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಮುಖ್ಯೋಪಾದ್ಯಾಯರು ಉಪಸ್ಥಿತರಿದ್ದರು.

error: Content is protected !!