ಶಿವಮೊಗ್ಗ: ಮನುಷ್ಯ ಎಲ್ಲ ಕಷ್ಟಗಳನ್ನು ಮೀರಿ ಜೀವನದಲ್ಲಿ ಮುನ್ನಡೆದರೆ ಯಶಸ್ಸು ನಿಶ್ಚಿತ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಹೇಳಿದರು.
ಶ್ರೀ ಶಾರದಾದೇವಿ ಅಂಧರ ವಿಕಾಸಕೇಂದ್ರದ 33ನೇ ವಾರ್ಷಿಕೋತ್ಸವ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ನಿರಂತರ ಪ್ರಯತ್ನವೇ ನಿಜವಾದ ಯಶಸ್ಸಿನ ಗುಟ್ಟು. ಸಾಧಿಸುವ ಗುರಿ ಹಾಗೂ ಸಾಗುವ ಮಾರ್ಗದ ಕಡೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.
ಅಂಧ ಮಕ್ಕಳು ನೂನ್ಯತೆ ಇದ್ದರೂ ಸವಲಾಗಿ ಸ್ವೀಕರಿಸಿ ಎಲ್ಲರಂತೆ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಆತ್ಮವಿಶ್ವಾಸದಿಂದ ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಭೆ ಪ್ರದರ್ಶನಕ್ಕೆ ಸಿಗುವ ವೇದಿಕೆಗಳ ಸದವಕಾಶ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲಾ ಆಡಳಿತ ಮಂಡಳಿಯು ಅಂಧ ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣ ನೀಡುವ ಮೂಲಕ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಿರುವುದು ಅಭಿನಂದನೀಯ. ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಲಿ ಎಂದು ಆಶಿಸಿದರು.
ಸ್ವಾಮಿ ಭೋದಸ್ವರೂಪಾನಂದಜೀ ಮಹಾರಾಜ್ ಮಾತನಾಡಿ, ಮನುಷ್ಯ ವೈಯುಕ್ತಿಕ ಸ್ವಾರ್ಥ ಆಲೋಚನೆ ತ್ಯಜಿಸಿ ಇತರರ ಒಳಿತಿಗೂ ಯೋಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಯಂ ನೆಲೆಗಟ್ಟಿನಲ್ಲಿ ಜೀವನ ರೂಪಿಸಿಕೊಳ್ಳುವ ಸಾಮಾಥ್ರ್ಯ ಹೊಂದಬೇಕು. ಅಂತಹ ಶಿಕ್ಷಣ ಪಡೆಯುವ ದಿಸೆಯಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು.
ಪಶ್ಚಿಮ ಬಂಗಾಳದ ಬೇಲೂರು ರಾಮಕೃಷ್ಣ ಮಠ ಮತ್ತು ಮಿಷನ್ ಅಸಿಸ್ಟೆಂಟ್ ಜನರಲ್ ಸೆಕ್ರೆಟರಿ ಸ್ವಾಮಿ ಸತ್ಯೇಶಾನಂದ ಮಹಾರಾಜರು, ಸ್ವಾಮಿ ಜಿತಕಾಮಾನಂದಜೀ ಮಹಾರಾಜ್, ಸ್ವಾಮಿ ಮುಕ್ತಿದಾನಂದಜೀ ಸಾನ್ನಿಧ್ಯ ವಹಿಸಿದ್ದರು.
ಇದಕ್ಕೂ ಮುನ್ನ ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ವಿದ್ಯಾರ್ಥಿಗಳಿಂದ ಭಜನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ಶಾರದಾ ಅಂಧರ ವಿಕಾಸ ಕೇಂದ್ರದ ಅಧ್ಯಕ್ಷ ಡಾ. ಎಚ್.ವಿ.ಸುಬ್ರಹ್ಮಣ್ಯ, ಕಾರ್ಯದರ್ಶಿ ಪರಮೇಶ್ವರ್ ಭಟ್, ಆಡಳಿತಾಧಿಕಾರಿ ಈಶ್ವರ್ ಭಟ್ ಉಪಸ್ಥಿತರಿದ್ದರು.