ಶಿವಮೊಗ್ಗ, ನವೆಂಬರ್. 20 : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪಾವತಿಸಲು ಬಾಕಿ ಉಳಿದಿರುವ ಬೆಳೆ ವಿಮೆ ಮೊತ್ತವನ್ನು ಆದಷ್ಟು ಬೇಗನೆ ರೈತರ ಖಾತೆಗಳಿಗೆ ಪಾವತಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ವಿಮಾ ಕಂಪೆನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಟಾನ ಕುರಿತು ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದರು.

2018-19ನೇ ಖಾರಿಫ್ ಸಾಲಿನಲ್ಲಿ ಜಿಲ್ಲೆಯ 10171 ರೈತರಿಗೆ 20ಕೋಟಿ ರೂ. ಬೆಳೆ ವಿಮೆ ಮೊತ್ತ ನೀಡಲಾಗಿದೆ. ಇನ್ನೂ 3386 ಪ್ರಕರಣಗಳು ಬಾಕಿ ಇದ್ದು 6.44ಕೋಟಿ ರೂ. ಹಣವನ್ನು ವಿಮಾ ಕಂಪೆನಿಗಳು ಪಾವತಿಸಬೇಕಾಗಿದೆ. ಇದೇ ರೀತಿ ಅಡಿಕೆ, ಶುಂಠಿ ಮತ್ತು ಕಾಳು ಮೆಣಸು ತೋಟಗಾರಿಕಾ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆವಿಮೆ ಸೌಲಭ್ಯ ಇದ್ದು, 2018-19ನೇ ಸಾಲಿನಲ್ಲಿ 8889 ರೈತರು ಬೆಳೆವಿಮೆ ಪಾಲಿಸಿ ಪಡೆದಿದ್ದಾರೆ. ಇವರಿಗೆ ಒಟ್ಟು 24.99ಕೋಟಿ ರೂ. ಬೆಳೆ ವಿಮೆ ನೀಡಬೇಕಾಗಿದ್ದು, ಇದುವರೆಗೆ ಕೇವಲ 9.63ಕೋಟಿ ರೂ. ಪಾವತಿಸಲಾಗಿದೆ.2017-18ನೇ ಸಾಲಿನಲ್ಲಿ ಒಟ್ಟು 450 ಪ್ರಕರಣಗಳಲ್ಲಿ 1.33 ಕೋಟಿ ರೂ. ಪಾವತಿಗೆ ಬಾಕಿ ಇದೆ. ಈ ಕುರಿತು ವಿಮಾ ಕಂಪನಿಗಳಿಗೆ ಸೂಚನಾ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ ಹಂಗಾಮಿನಲ್ಲಿ ಶೇ.50ರಷ್ಟು ಪ್ರಾಯೋಗಿಕ ಬೆಳೆ ಕಟಾವು ಕಾರ್ಯ ಪೂರ್ಣಗೊಳಿಸಲಾಗಿದೆ. ಮೆಕ್ಕೆ ಜೋಳ ಪ್ರಾಯೋಗಿಕ ಬೆಳೆ ಕಟಾವು ಬಹುತೇಕ ಪೂರ್ಣಗೊಂಡಿದ್ದು, ಆದಷ್ಟು ಬೇಗನೇ ಈ ಕಾರ್ಯವನ್ನು ಪೂರ್ಣಗೊಳಿಸಬೇಕು. ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಪರಸ್ಪರ ಸಮನ್ವಯದಿಂದ ಈ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಯೋಗೀಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!