ಶಿವಮೊಗ್ಗ, ಅಕ್ಟೋಬರ್-30 : ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಅನುಕೂಲವಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಸಾಂಸ್ಕøತಿಕ ಕ್ಷೇತ್ರದಲ್ಲಿ ಸಾಧನೆಗೈಯ್ಯಲು ಮುಂದಾಗಬೇಕು ಎಂದು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದಡಿ ಆಯೊಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಇರುವ ಮಕ್ಕಳನ್ನು ಶಿಕ್ಷಕರು ಹಾಗೂ ಪೋಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಈ ಮೂಲಕ ಅವರ ಪ್ರತಿಭೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವೇದಿಕೆಗಳಲ್ಲಿ ಅನಾವರಣಗೊಳ್ಳುವಂತೆ ಮಾಡುವ ಕಾರ್ಯ ಆಗಬೇಕಾದ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಮಕ್ಕಳು ಕಲೆ ಹಾಗೂ ಕ್ರೀಡೆಯೊಂದಿಗೆ ಶಿಕ್ಷಣದಲ್ಲೂ ಸಹ ಉನ್ನತ ಸ್ಥಾನಕ್ಕೇರಬೇಕು. ಅದಕ್ಕೆ ಅನುಕೂಲವಾಗುವಂತೆ ಸರ್ಕಾರ ಅನೇಕ ಸವಲತ್ತುಗಳನ್ನು ಒದಗಿಸಿದ್ದು ಸಾರ್ವಜನಿಕರು ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ್ಯ ಕೆ.ಇ ಕಾಂತೇಶ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲಾ ಒಂದು ಪ್ರತಿಭೆ ಅಡಗಿದ್ದು ಅವುಗಳನ್ನು ಸಿಗುವ ಅವಕಾಶದಲ್ಲಿ ಅನಾವರಣಗೊಳಿಸುವ ಮೂಲಕ ಸೂಕ್ತ ವೇದಿಕೆಗಳನ್ನು ಸೃಷ್ಠಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಜಗತ್ತಿನಲ್ಲಿ ನಿಜವಾದ ನೆಮ್ಮದಿ ಮತ್ತು ಶಾಂತಿ ಲಭಿಸಬೇಕಾದರೆ ಸಾಂಸ್ಕøತಿಕ ಯುದ್ಧಗಳು ಅಗತ್ಯ ಇಲ್ಲಿ ಮದ್ದುಗುಂಡುಗಳ ಅವಶ್ಯಕತೆ ಇಲ್ಲದೇ ಕೇವಲ ಸಂಗೀತ, ಕಲೆ, ನಾಟಕಗಳು ಜರುಗುತ್ತ ಸಾಗುತ್ತದೆ ಆಗ ಹಿಂಸೆಯೆ ಇಲ್ಲದ ಲೋಕ ಅನಾವರಣಗೊಳ್ಳುತ್ತದೆ ಎಂದು ಸಾಹಿತ್ಯಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ , ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾ ಪ್ರೌಢಶಾಲ ಸಹ ಶಿಕ್ಷಕರ ಸಂಘದ ಅಧ್ಯಕ್ಷ್ಯ ಬಿ. ಸಿದ್ದಬಸಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ್ಯ ಮಹಾಬಲೇಶ್ವರ ಹೆಗಡೆ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ್ಯ ಕೆ.ಸಿ ಶರಣಪ್ಪ ಉಪಸ್ಥಿತರಿದ್ದರು. ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳ ಶಿಕ್ಷಕರು ಮತ್ತು ತಾಲ್ಲೂಕು ಮಟ್ಟದಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳು ಸ್ಪರ್ದೆಗಳಲ್ಲಿ ಬಾಗವಹಿಸಿದ್ದರು.