ಶಿವಮೊಗ್ಗ : ಅಕ್ಟೋಬರ್ 23 : ಕನ್ನಡ ನಾಡನ್ನಾಳಿದ, ತನ್ನ ಚಿಕ್ಕ ಸಂಸ್ಥಾನವನ್ನು ಬ್ರಿಟೀಷರಿಗೆ ಬಿಟ್ಟುಕೊಡದೆ ಸೆಣಸಿದ ಧೀಮಂತ ಮಹಿಳೆ ರಾಣಿಚೆನ್ನಮ್ಮ ಇಂದಿನ ಯುವ ಜನತೆಗೆ ಸ್ಫೂರ್ತಿಯ ಸೆಲೆಯಾಗಿದ್ದಾಳೆ ಎಂದು ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ ಜಿ. ಅವರು ಹೇಳಿದರು.
ಅವರು ಇಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ರಾಣಿ ಚೆನ್ನಮ್ಮ ಅವರು 195ನೇ ಜಯಂತ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು.
ಕಿತ್ತೂರ ರಾಣಿ ಚೆನ್ನಮ್ಮ ಎಂದರೆ ಧೈರ್ಯ, ಸಾಹಸ, ಸ್ವಾಭಿಮಾನದ ಸಂಕೇತ. ದೇಶಪ್ರೇಮದ ಪ್ರತೀಕ. ಸ್ವಾಭಿಮಾನಿ ಸೈನಿಕರನ್ನು ಒಗ್ಗೂಡಿಸಿ ಸ್ವತಂತ್ರ ರಾಜ್ಯಕ್ಕಾಗಿ ಛಲಬಿಡದೆ ಹೋರಾಡಿದ ವೀರವನಿತೆ ಚೆನ್ನಮ್ಮ ಎಂದ ಅವರು, ಮಹಿಳೆಯರಿಗೆ ಸಮಾನತೆ ಎಂಬುದು ದೂರದ ಮಾತಾಗಿದ್ದ ಅಂದಿನ ಕಾಲದಲ್ಲಿ ತನ್ನ ಅಸ್ಮಿತತೆಯನ್ನು ಸಾಬೀತುಪಡಿಸಿದ ವೀರಾಗ್ರಣಿ ಎಂದವರು ನುಡಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯ ಎನ್.ಜೆ.ರಾಜಶೇಖರ್, ರುದ್ರಮನಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.