ಶಿವಮೊಗ್ಗ, ಅಕ್ಟೋಬರ್-19 : ಸಕಾಲ ಯೋಜನೆ ಅಡಿಯಲ್ಲಿ ನೀಡಬೇಕಾದ ಸೇವೆಯನ್ನು ಸಾರ್ವಜನಿಕರಿಗೆ ಸಕಾಲ ಯೋಜನೆ ಅಡಿಯಲ್ಲಿಯೇ ಕಡ್ಡಾಯವಾಗಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಕಾಲ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದರು.
ಕೆಲವು ಇಲಾಖೆಗಳು ಸಕಾಲ ಅಡಿಯಲ್ಲಿ ಅರ್ಜಿಗಳನ್ನು ಸ್ವೀಕರಿಸದೆ ನೇರವಾಗಿ ಸೇವೆಯನ್ನು ಒದಗಿಸುತ್ತಿರುವುದರಿಂದ ಸಕಾಲ ರ್ಯಾಂಕಿಂಗ್ನಲ್ಲಿ ಜಿಲ್ಲೆ 3ನೇ ಸ್ಥಾನದಲ್ಲಿ ಉಳಿದಿದೆ. ಸೇವೆಯನ್ನು ನಿಗದಿತ ಅವಧಿಯ ಒಳಗಾಗಿ ನೀಡುವುದು ಮಾತ್ರವಲ್ಲದೆ ಅರ್ಜಿಗಳನ್ನು ಸಕಾಲ ಯೋಜನೆಯಡಿ ಪಡೆದುಕೊಳ್ಳುವುದು ಸಹ ಅಷ್ಟೇ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಆರೋಗ್ಯ ಇಲಾಖೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ಸಕಾಲ ಅಡಿಯಲ್ಲಿ ಪಡೆದಿರುವ ಅರ್ಜಿಗಳ ಸಂಖ್ಯೆ ಬಹಳ ಕಡಿಮೆಯಿದೆ. ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕು ಹೊರತುಪಡಿಸಿದರೆ ಬೇರೆ ತಾಲೂಕುಗಳಲ್ಲಿ ಅತಿ ಕಡಿಮೆ ಅರ್ಜಿಗಳನ್ನು ಸಕಾಲ ಅಡಿ ಪಡೆಯಲಾಗಿದೆ. ಶಿಕಾರಿಪುರದಲ್ಲಿ ಒಂದು ಅರ್ಜಿಯನ್ನು ಸಹ ಸಕಾಲ ಅಡಿ ಪಡೆದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸಕಾಲ ಫಲಕ ಅಳವಡಿಸಿ: ಎಲ್ಲಾ ಕಚೇರಿಗಳಲ್ಲಿ ಮಾಹಿತಿ ಹಕ್ಕು ಸೇವೆಗಳ ಕುರಿತಾದ ಫಲಕದ ಮಾದರಿಯಲ್ಲಿ ಸಕಾಲ ಸೇವೆಯ ಫಲಕವನ್ನು ಅಳವಡಿಸಬೇಕು. ಸಕಾಲ ಅಡಿಯಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಕಡ್ಡಾಯವಾಗಿ ಆನ್ಲೈನ್ನಲ್ಲಿ ನಮೂದು ಮಾಡಬೇಕು ಎಂದು ಸೂಚನೆ ನೀಡಿದರು.
ಅರಣ್ಯ ಇಲಾಖೆ, ಎಪಿಎಂಸಿ, ಮೀನುಗಾರಿಕಾ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗಳು ಸಕಾಲ ಅಡಿ ಪ್ರಗತಿಯನ್ನು ಉತ್ತಮಪಡಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ದಿನ ತಮ್ಮ ಅಧೀನದ ಕಚೇರಿಗಳಲ್ಲಿ ಸಕಾಲ ಅಡಿಯಲ್ಲಿ ಸ್ವೀಕರಿಸಿರುವ ಅರ್ಜಿಗಳ ವಿಲೇವಾರಿಯನ್ನು ಪರಿಶೀಲನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಅನುರಾಧ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೇಖರ ಹೆಚ್.ಟಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.