ಶಿವಮೊಗ್ಗ, ಸೆ.24 : ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕುಂಟುತ್ತಾ ನಡೆಯುತ್ತಿರುವ ಎಲ್ಲಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೂಚನೆ ನೀಡಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ 2012ರಲ್ಲಿ ಆರಂಭವಾದ 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ ಒಂದು ಮಾತ್ರ ಪೂರ್ಣಗೊಂಡಿದೆ. ಒಂದು ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಉಳಿದ ಐದು ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಜನವರಿ ಒಳಗಾಗಿ ಜನರಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಕಾರ್ಯಪಡೆ ರಚನೆ: ಶಾಸಕರ ಕಾರ್ಯಪಡೆ ಮಾದರಿಯಲ್ಲಿ ಪ್ರತಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಕುರಿತು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಕಾರ್ಯಪಡೆಗೆ ತಲಾ ಒಂದು ಕೋಟಿ ರೂ. ಅನುದಾನ ಒದಗಿಸಲಾಗುವುದು. ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯರು ಇದರ ಸದಸ್ಯರಾಗಿರುವರು ಎಂದು ಸಚಿವರು ತಿಳಿಸಿದರು.
ಡಿಸಿಸಿ ಬ್ಯಾಂಕ್‍ಗೆ ಸೂಚನೆ: ಡಿಸಿಸಿ ಬ್ಯಾಂಕುಗಳು ರೈತರು ಪರಿಹಾರದ ಹಣವನ್ನು ಪಡೆಯಲು ಪ್ರತ್ಯೇಕ ಖಾತೆ ತೆರೆಯಲು ಒತ್ತಡ ಹೇರಬಾರದು. ಖಾತೆಯಲ್ಲಿ ಕನಿಷ್ಟ 2ಸಾವಿರ ರೂ. ಇರಬೇಕೆಂದು ಶರತ್ತು ವಿಧಿಸುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕುಗಳ ರೀತಿ ಜೀರೋ ಬ್ಯಾಲೆಂನ್ಸ್ ಖಾತೆಗೆ ಅವಕಾಶ ನೀಡಬೇಕು. ಸರ್ಕಾರ ನೀಡುವ ಪರಿಹಾರದ ಮೊತ್ತದಲ್ಲಿ ಶೇ.13ರಷ್ಟನ್ನು ಮುರಿಯಲಾಗುತ್ತಿರುವ ದೂರಿನ ಬಗ್ಗೆ ಪರಿಶೀಲನೆ ನಡೆಸಬೇಕು. ಈ ಎಲ್ಲಾ ವಿಷಯಗಳ ಕುರಿತು ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಒಂದು ವಾರದ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಡಿಆರ್‍ಸಿಎಸ್ ಅಧಿಕಾರಿಗೆ ಸಚಿವರು ಸೂಚನೆ ನೀಡಿದರು.
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಅತಿ ಹೆಚ್ಚಿನ ಹಾನಿ ಉಂಟಾಗಿದ್ದು, ಕೊಳೆ ರೋಗ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಶಾಸಕ ಅರಗ ಜ್ಞಾನೇಂದ್ರ ಅವರು ಮನವಿ ಮಾಡಿದರು.
ನೆರೆ ಪರಿಹಾರ: ನೆರೆ ಪರಿಹಾರ ಕಾರ್ಯವನ್ನು ಚುರುಕುಗೊಳಿಸಲಾಗಿದ್ದು, ಇದುವರೆಗೆ 5563 ನೆರೆ ಪೀಡಿತ ಕುಟುಂಬಗಳಿಗೆ ತಲಾ 10ಸಾವಿರ ರೂ. ಪರಿಹಾರ ಒದಗಿಸಲಾಗಿದೆ. 26360 ರೈತರು ಬೆಳೆ ಹಾನಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಇವರಿಗೆ ಆದಷ್ಟು ಬೇಗನೆ ಪರಿಹಾರ ವಿತರಿಸಲಾಗುವುದು. 4231 ಮನೆ ಹಾನಿ ಪ್ರಕರಣಗಳಲ್ಲಿ 1348 ಪ್ರಕರಣಗಳಲ್ಲಿ ಜಿಪಿಎಸ್ ಪೂರ್ಣಗೊಂಡಿದ್ದು, ಒಂದೆರಡು ದಿನಗಳಲ್ಲಿ ಸುಮಾರು 700ಮಂದಿಗೆ ಪ್ರಥಮ ಹಂತದಲ್ಲಿ ಪರಿಹಾರ ಮೊತ್ತವನ್ನು ನೀಡಲಾಗುವುದು. ಅನಧಿಕೃತವಾಗಿ ನಿರ್ಮಿಸಿದ್ದ ಮನೆಗಳ ಪ್ರಕರಣದಲ್ಲಿ ಅವರಿಂದ ಅಫಿದಾವಿಟ್ ಪಡೆದುಕೊಂಡು ಎಕ್ಸ್‍ಗ್ರೇಷಿಯಾ ನೀಡಲು ಸರ್ಕಾರ ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಎಸ್ಪಿ ಶಾಂತರಾಜ್, ಶಾಸಕರಾದ ಹರತಾಳು ಹಾಲಪ್ಪ, ಅರಗ ಜ್ಞಾನೇಂದ್ರ, ಅಶೋಕ ನಾಯ್ಕ, ಕುಮಾರ ಬಂಗಾರಪ್ಪ, ಸ್ಥಾಯಿ ಸಮಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.