ಶಿವಮೊಗ್ಗ, ಸೆಪ್ಟೆಂಬರ್-23: ತಮ್ಮ ಆರೋಗ್ಯವನ್ನು ಬಲಿಕೊಟ್ಟು ಸ್ವಚ್ಚತೆಗಾಗಿ ದುಡಿದು ಜನರ ಆರೋಗ್ಯವನ್ನು ಕಾಪಾಡುವ ಪೌರಕಾರ್ಮಿಕರು ಸಮಾಜದಲ್ಲಿ ತಾಯಿಯಷ್ಟೆ ಪವಿತ್ರವಾದ ಸ್ಥಾನ ಹೊಂದಿದವರು ಎಂದು ಉಪ ಮೇಯರ್ ಚೆನ್ನಬಸಪ್ಪ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಹಾನಗರ ಪಾಲಿಕೆಯು ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪೌರಕಾರ್ಮಿಕರು ಸಮಾಜದ ಸ್ವಚ್ಚತೆಗೆ ದುಡಿಯುವವರಾಗಿದ್ದು ಅವರ ಹಿತಾಸಕ್ತಿಯನ್ನು ಕಾಪಾಡುವುದು ನಾಗರಿಕ ಸಮಾಜದ ಕರ್ತವ್ಯವಾಗಿದ್ದು ಇದರಲ್ಲಿ ರಾಜಕಾರಣ ಮಾಡಬಾರದು ಎಂದರು.
ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯ ಇನ್ನು ನೀಡದೇ ಇರುವುದು, ಪೌರಕಾರ್ಮಿಕರ ಭವನ ಮತ್ತು ಪೌರಕಾರ್ಮಿಕರ ಕಲ್ಯಾಣ ಸಂಘದ ಕಟ್ಟಡ ನಿರ್ಮಾಣದ ಕುರಿತು ವಿಳಂಭವಾಗುತ್ತಿರುವ ಕುರಿತು ಸಭೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಅವರು ತಿಳಿಸಿದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ವಿ ರಮೇಶ್ ಹೆಗ್ಡೆ ಮಾತನಾಡಿ ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರ ಅವಶ್ಯಕತೆ ನಗರಕ್ಕಿದೆ ಆದರೆ ಕೇವಲ 380 ಖಾಯಂ ಕಾರ್ಮಿಕರು ಮಾತ್ರ ಇದ್ದು ಇವರಿಗೆ ಕೆಲಸದಲ್ಲಿ ಒತ್ತಡ ಉಂಟಾಗುತ್ತಿದ್ದು ಉಳಿದ ಅವಶ್ಯಕ ಪೌರಕಾರ್ಮಿಕರನ್ನು ನೇಮಿಸಿಕೊಳ್ಳುವ ಕಾರ್ಯ ಆಗಬೇಕಿದೆ ಎಂದರು.
ಪೌರಕಾರ್ಮಿಕ ಸಂಘದ ನಿರ್ದೇಶಕ ಎನ್ ಗೋವಿಂದ್ ಮಾತನಾಡಿ ಕಾರ್ಯಕ್ರಮಕ್ಕೆ ಮೀಸಲಿರಿಸಿದ ಐದು ಲಕ್ಷ ರೂಗಳಲ್ಲಿ ಎರಡು ಲಕ್ಷ ರೂಗಳನ್ನು ಮಾತ್ರ ಬಳಸಿ ಉಳಿದ ಮೂರು ಲಕ್ಷ ರೂಗಳನ್ನು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪೌರ ಕಾರ್ಮಿಕರಿಗೆ ನೀಡಲಾಗುತ್ತಿರುವ ಮೂಲ ವೇತನ ರೂ 18 ಸಾವಿರ ದಿಂದ ರೂ 25 ಸಾವಿರಕ್ಕೆ ಏರಿಸಬೇಕು, ಡಿ ಹಾಗೂ ಸಿ ಗ್ರೂಪ್ ನೌಕರರನ್ನು ಖಾಯಂಗೊಳಿಸಬೇಕು, ಬಹುಮಹಡಿ ಕಟ್ಟಡದ ವಸತಿ ಗೃಹಗಳನ್ನು ನಿರ್ಮಿಸಿ ಕೊಡಬೇಕು, ಪೌರಕಾರ್ಮಿಕರು ಕೆಲಸ ಕಾರ್ಯಗಳಿಗೆ ತೆರಳಲು ಕ್ಯಾಬ್ ಮಾದರಿಯ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಮತ್ತು ಈಗಿನ ಪಿಂಚಣಿ ವ್ಯವಸ್ಥೆಯನ್ನು ರದ್ದು ಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮುಂದುವರೆಸಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಇಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಪೌರಕಾರ್ಮಿಕರಾದ ಗುರುವಯ್ಯ, ರಾಮಕ್ಕ, ಅಂಜನಮ್ಮ, ಕೆ. ಕೊಂಡಯ್ಯ, ಒಳಚರಂಡಿ ವಿಭಾಗದ ಬಸವರಾಜ. ಹೆಚ್, ನೀರು ಸರಬರಾಜು ವಿಭಾಗದ ಗಂಗಾ, ರಾಮ, ಲೋಡರ್ಸ್ ವಿಭಾಗದ ಪಾಲಾಕ್ಷಿ, ವಾಹನ ಚಾಲಕರ ವಿಭಾಗದ ಮೋಹನ್ ಕುಮಾರ್ ಹಾಗೂ ತೋಟಗಾರಿಕೆ ಇಲಾಖೆಯ ಚಂದ್ರಮ್ಮ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಲಿಕೆಯ ಮೇಯರ್ ಲತಾ ಗಣೇಶ್ ವಹಿಸಿದ್ದರು. ಪಾಲಿಕೆ ಪ್ರಭಾರ ಆಯುಕ್ತ ಪ್ರಕಾಶ್ ಟಿ.ವಿ, ತೆರಿಗೆ ನಿರ್ಧರಣೆ ಹಣಕಾಸು ಅಫೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಸುರೇಖಾ ಮುರುಳೀದರ್, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುವರ್ಣ ಶಂಕರ್, ಲೆಕ್ಕ ಪತ್ರಗಳ ಸ್ಥಾಯಿ ಸಮಿತಿ ಅಧ್ಯಕ್ಷ್ಯ ಶಾಮೀರ್ ಖಾನ್, ಮುಂತಾದ ಗಣ್ಯರು ಹಾಗೂ ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.