ಶಿವಮೊಗ್ಗ.ಸೆ.01 ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಭಾನುವಾರ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಪರಿಷ್ಕರಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನಿಂದ ಅಕ್ಟೋಬರ್ 15ರವರೆಗೆ ಅಭಿಯಾನ ನಡೆಯಲಿದೆ. ಅಭಿಯಾನದ ಸಂದರ್ಭದಲ್ಲಿ ಮುಖ್ಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಲಾಗಿದೆಯೇ, ಮತದಾರರ ವಿವರಗಳು ಸರಿಯಾಗಿದೆಯೇ ಎಂಬುವುದನ್ನು ಪರಿಶೀಲಿಸಿ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ ಎಂದರು.
ಮತದಾರರ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಲು ಪಾಸ್‍ಪೋರ್ಟ್, ಚಾಲನಾ ಪರವಾನಿಗೆ, ಆಧಾರ ಕಾರ್ಡ್, ಪಡಿತರ ಚೀಟಿ, ಸರ್ಕಾರಿ/ಅರೆಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್ ಪಾಸ್‍ಬುಕ್, ರೈತರ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ಅಂಗೀಕರಿಸಿರುವ ಯಾವುದಾದರೊಂದು ಗುರುತಿನ ದಾಖಲೆಯನ್ನು ಒದಗಿಸಬೇಕು ಎಂದು ಹೇಳಿದರು.
ಸೆಪ್ಟಂಬರ್ 1ರಿಂದ 30ರವರೆಗೆ ಬಿಎಲ್‍ಒಗಳು ಪ್ರತಿ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಳ್ಳಲಿದ್ದಾರೆ. ಈ ಬಾರಿ ಇದಕ್ಕಾಗಿ ಮೊಬೈಲ್ ಆಪ್ ಸಿದ್ಧಪಡಿಸಲಾಗಿದ್ದು, ಜಿಪಿಎಸ್ ಆಧಾರಿತವಾಗಿರುವ ಈ ಆಪ್‍ನಲ್ಲಿ ತಾವು ಭೇಟಿ ನೀಡಿದ ಪ್ರತಿಯೊಂದು ಮನೆಯ ವಿವರಗಳನ್ನು ಅಪ್‍ಲೋಡ್ ಮಾಡಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.