ಜಿಲ್ಲೆಯಲ್ಲಿ ನೆರೆ ಪರಿಹಾರ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಲು ತಕ್ಷಣ 10ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನೆರೆ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ರಾಜ್ಯದಲ್ಲಿ ನೆರೆ ಪರಿಹಾರ ಕಾಮಗಾರಿಗಳಿಗೆ ಈಗಾಗಲೇ 500ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ತುರ್ತು ಕಾರ್ಯಗಳನ್ನು ಕೈಗೊಳ್ಳಲು ಇಂದೇ 10ಕೋಟಿ ರೂ. ಅನುದಾನ ಹೆಚ್ಚುವರಿಯಾಗಿ ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಪ್ರಧಾನಮಂತ್ರಿ ಅವರು ಸೆಪ್ಟಂಬರ್ ಪ್ರಥಮ ವಾರದಲ್ಲಿ ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ನೆರೆ ಪರಿಹಾರಕ್ಕೆ ಹೆಚ್ಚಿನ ಅನುದಾನ ಒದಗಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ನೆರೆ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ನೆರೆಪೀಡಿತರಾದ 6089 ಕುಟುಂಬಗಳಿಗೆ ತಲಾ 10ಸಾವಿರದಂತೆ ಪರಿಹಾರದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. 11ಮಾನವ ಜೀವ ಹಾನಿ ಪ್ರಕರಣಗಳಲ್ಲಿ ಸಹ ತಲಾ ಐದು ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಹಾನಿಗೀಡಾದ ಮನೆಗಳ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲಾಗಿದ್ದು, ಒಟ್ಟು 4048 ಮನೆಗಳಿಗೆ ಹಾನಿ ಉಂಟಾಗಿದೆ. ಮನೆ ಹಾನಿ ಕುರಿತು ಜಿಪಿಎಸ್ ಮಾಡಿಸಲಾಗುತ್ತಿದ್ದು, 1531 ಪ್ರಕರಣಗಳಲ್ಲಿ ಮನೆಯ ಸೂಕ್ತ ದಾಖಲೆಗಳು ಇರುವುದಿಲ್ಲ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ತಾತ್ಕಾಲಿಕ ಪರಿಹಾರ ಒದಗಿಸಲು ಬಿಟ್ಟು ಹೋಗಿರುವ ಕುಟುಂಬಗಳು ಇದ್ದರೆ ಅವರನ್ನು ಗುರುತಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಜಾನುವಾರುಗಳ ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದ್ದರೆ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಒದಗಿಸಬೇಕು. ನಷ್ಟ ಅಂದಾಜು ಮಾಡುವ ಸಂದರ್ಭದಲ್ಲಿ ಸ್ವಲ್ಪ ಉದಾರತೆಯನ್ನು ತೋರಬೇಕು ಎಂದು ಮುಖ್ಯಮಂತ್ರಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮರಳಿಗೆ ಸಮಸ್ಯೆ ಮಾಡಬೇಡಿ: ಬಡವರು ಮನೆ ಕಟ್ಟಲು ಸಾಗಾಟ ಮಾಡುವ ಮರಳನ್ನು ಹಿಡಿದು ಕಿರುಕುಳ ನೀಡುವ ದೂರುಗಳು ಇನ್ನು ಬರಬಾರದು. ಇಂತಹ ದೂರುಗಳು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.