ಜೋಗಿಕೊಪ್ಪ ಗ್ರಾಮದ ಕುಣಿಗದ್ದೆ ಸೇತುವೆ ಕುಸಿಯುವ ಹಂತದಲ್ಲಿದ್ದು, ಗ್ರಾಮಸ್ಥರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಕನ್ನಂಗಿ ಸಮೀಪದ ನವಿಲಾರೆ ಎಂಬಲ್ಲಿ ಸೇತುವೆ ಬಿರುಕುಗೊಂಡಿದೆ. ಕಣಗಲಕೊಪ್ಪ ಗ್ರಾಮದಲ್ಲಿ ಮನೆ ಮೇಲೆ ಮರ ಉರುಳಿದ್ದರ ಪರಿಣಾಮವಾಗಿ ಮನೆಯಲ್ಲಿ ವಾಸವಿದ್ದ ಶಂಕರನಾಯ್ಕ ಅವರಿಗೆ ಸಾಮಾನ್ಯ ಪ್ರಮಾಣದ ಗಾಯಗಳಾಗಿವೆ. ಉರುಳಿದ ಮರ ತೆರವಿಗೆ ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ತೀರ್ಥಹಳ್ಳಿ ಪಟ್ಟಣದ ಕುರವಳ್ಳಿ ತುಂಗಾಸೇತುವೆ ಬಳಿ ವಾಸವಾಗಿದ್ದ ಹಕ್ಕಿಪಿಕ್ಕಿ ಕ್ಯಾಂಪಿನ 80ಕುಟುಂಬಗಳನ್ನು ರಾಮೇಶ್ವರ ಸಭಾಭವನಕ್ಕೆ ಸ್ಥಳಾಂತರಿಸಲು ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಮಳೆಯಿಂದಾಗಿ ಸುಮಾರು 18ಕಚ್ಚಾಮನೆಗಳು ಬಿದ್ದುಹೋಗಿವೆ. ತೊಗರ್ಸಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ಕುಸಿತಗೊಂಡಿದೆ. ತಿಮ್ಮಲಾಪುರದ ರಸ್ತೆ ಕುಸಿದಿದೆ. ಮುಡುಬಸಿದ್ದಾಪುರ-ಮಲ್ಲಾಪುರ ಸಂಪರ್ಕದ ಕಿರುಸೇತುವೆ ಅಲ್ಪಪ್ರಮಾಣದ ಹಾನಿಗೊಳಗಾಗಿದೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ.
ಸೊರಬ ತಾಲೂಕಿನ ವರದಾ ಹಾಗೂ ದಂಡಾವತಿ ನದಿಗಳು ಉಕ್ಕಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿ ಪಾತ್ರದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಹಶೀಲ್ದಾರ್ ಪಟ್ಟರಾಜಗೌಡ ಅವರು ಅಲ್ಲಿನ ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ.
ತಹಶೀಲ್ದಾರರು ಮಳೆಹಾನಿಗೊಳಗಾದ ತಾಲೂಕಿನ ಜಂಗಿನಕೊಪ್ಪ, ಹಳೇ ಸೊರಬ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯಕ್ರಮಕ್ಕೆ ಮುಂದಾಗಿದ್ದಾರೆ. ಚಂದ್ರಗುತ್ತಿ, ಕುಪ್ಪಗುಡ್ಡೆ, ಉಳವಿ, ಕಸಬಾ ಹೋಬಳಿಗಳಲ್ಲಿ ಜಮೀನುಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಉಳವಿ ಹೋಬಳಿ ಎನ್.ದೊಡ್ಡೇರಿ ಗ್ರಾಮದ ಗಣಪತಿ ಎಂಬುವವರ ವಾಸದ ಮನೆಯ ಮೇಲೆ ಮರಬಿದ್ದು ಹಾನಿಗೊಳಗಾಗಿದೆ. ನಿರಂತರವಾಗಿರುವ ಮಳೆಯಿಂದಾಗಿ ಶಿಥಿಲಾವಸ್ಥೆಯಲ್ಲಿರುವ ಅಸಂಖ್ಯಾತ ಮನೆಗಳು ನೆಲಕ್ಕುರುಳುವ ಸಾಧ್ಯತೆ ಇದೆ. ತೆಕ್ಕೂರು ಗ್ರಾಮದಲ್ಲಿ ಹಳೆಯ ಮನೆಯೊಂದು ಹಾನಿಗೀಡಾಗಿದೆ. ಯಾವುದೇ ಅಪಾಯ ಸಂಭವಿಸಿಲ್ಲ ಎಂದವರು ತಿಳಿಸಿದ್ದಾರೆ.
ಹಳೇಸೊರಬ ಜಂಗಿನಕೊಪ್ಪದ ರತ್ನಮ್ಮ ಎಂಬುವವರ ಮನೆ ಬೀಳುವ ಸ್ಥಿತಿಯಲ್ಲಿದ್ದದ್ದರಿಂದಾಗಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮರಗಳು ಧರೆಗುರುಳಿದ್ದು ಸಂಚಾರ ವ್ಯವಸ್ಥೆಗೆ ಅಡಚಣೆಯಾಗಿದೆ. ಇವುಗಳ ತೆರವಿಗೆ ಅರಣ್ಯ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ತಕ್ಷಣದ ಕ್ರಮಕ್ಕೆ ಮುಂದಾಗಿದ್ದಾರೆ. ಮಳೆಯಿಂದಾಗಿ ಸಾರ್ವಜನಿಕರು ತಮ್ಮ ದೈನಂದಿನ ಕೆಲಸ-ಕಾರ್ಯಗಳಿಗೆ ಮನೆಯಿಂದ ಹೊರಹೋಗದ ವಾತಾವರಣ ನಿರ್ಮಾಣವಾಗಿತ್ತು ಎಂದವರು ತಿಳಿಸಿದ್ದಾರೆ.


ಶಿವಮೊಗ್ಗ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಕೋಳಿ ಫಾರಂಗೆ ನೀರು ನುಗ್ಗಿ ಸುಮಾರು 3,000ಕೋಳಿಗಳು ಸಾವನ್ನಪ್ಪಿವೆ. ನಗರದ ವೆಂಕಟೇಶನಗರ, ಬಾಪೂಜಿನಗರ, ಟ್ಯಾಂಕ್‍ಮೊಹಲ್ಲ, ವಿದ್ಯಾನಗರದ ಹೇಮಶ್ರೀ ಬಡಾವಣೆ, ಟಿಪ್ಪುನಗರದ ಎಡಭಾಗ, ಬಸವನಗುಡಿ ಮುಂತಾದ ಪ್ರದೇಶಗಳು ಜಲಾವೃತಗೊಂಡಿವೆ ಎಂದು ತಹಶೀಲ್ದಾರ್ ಗಿರೀಶ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆಹಾನಿ ಪ್ರದೇಶಗಳ ಮಾಹಿತಿ, ಸಲಹೆ-ಸೂಚನೆಗಳಿಗಾಗಿ ಆರಂಭಿಸಲಾಗಿರುವ ಸಹಾಯವಾಣಿ ಕೇಂದ್ರಗಳ ತಾಲೂಕುವಾರು ಮಾಹಿತಿ :
ಜಿಲ್ಲಾಧಿಕಾರಿಗಳ ಕಚೇರಿ _ 08182-271101, 1077, ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ – 261413, 100,
ಶಿವಮೊಗ್ಗ – 08182-279312, ತೀರ್ಥಹಳ್ಳಿ – 08181-228239, ಹೊಸನಗರ – 08185-221235
ಸಾಗರ – 08183-226074, ಸೊರಬ – 08184-272241, ಶಿಕಾರಿಪುರ – 08187 -222239, ಭದ್ರಾವತಿ _ 08282-267283

ಕಳೆದ 2-3ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಜನ, ಜಾನುವಾರು, ಆಸ್ತಿ ಹಾಗೂ ಮತ್ತಿತರ ಪ್ರಕಾರದ ಹಾನಿಗಳಿಗೆ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಂಡು ಜನಜೀವನ ಸಹಜವಾಗಿರುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಎಲ್ಲಾ ತಾಲೂಕಿನ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಾನ್ಫರೆನ್ಸ್ ಕಾಲ್ ಮಾಡಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅವರು ಇಂದು ತೀರ್ಥಹಳ್ಳಿ ತಾಲೂಕಿನ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಅವರು, ಮಂಡಗದ್ದೆ ಸಮೀಪದ ಕಳವತ್ತಿ ಗ್ರಾಮದಲ್ಲಿ ಕೃಷಿ ಕಾರ್ಯದಲ್ಲಿ ತಲ್ಲೀನರಾಗಿದ್ದ ರೈತ ರಮೇಶ್ ಅವರು ಧರೆ ಕುಸಿತದಿಂದ ಮರಣ ಹೊಂದಿದ್ದರು. ವಾಸ್ತವ ಅರಿಯಲು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ನಗರದ ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ 5ಲಕ್ಷ ರೂ.ಗಳ ಪರಿಹಾರ ಧನ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

error: Content is protected !!