ಶಿವಮೊಗ್ಗ, ಡಿಸೆಂಬರ್ 11 : ದೇಶಕ್ಕೆ ನಮ್ಮ ಸೈನಿಕರ ಸೇವೆ ಅವಿಸ್ಮರಣೀಯವಾಗಿದ್ದು, ಮಾಜಿ ಸೈನಿಕರು ಹಾಗೂ ಹುತಾತ್ಮ ಸೈನಿಕರ ಅವಲಂಬಿತರಿಗೆ ಲಭ್ಯವಿರುವ ಸೌಲಭ್ಯಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಶಸ್ತ್ರ ಧ್ವಜ ದಿನಾಚರಣೆಯಲ್ಲಿ ಧ್ವಜ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಳೆದ ಸಾಲಿನ ಧ್ವಜ ದಿನಾಚರಣೆ ನಿಧಿ ಸಂಗ್ರಹದಲ್ಲಿ ನಿಗದಿತ ಗುರಿಗಿಂತ ಹೆಚ್ಚಿನ ಸಾಧನೆ ತೋರಿದ್ದಕ್ಕಾಗಿ ಜಿಲ್ಲೆಗೆ ರಾಜ್ಯಪಾಲರಿಂದ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದ ಅವರು, ಧ್ವಜ ದಿನಾಚರಣೆ ಅಂಗವಾಗಿ ಸಂಗ್ರಹಿಸಲಾಗುವ ನಿಧಿಯು ಮಾಜಿ ಸೈನಿಕರು, ಹುತಾತ್ಮ ಸೈನಿಕರ ಅವಲಂಬಿತರ ಕಲ್ಯಾಣಕ್ಕಾಗಿ ಗೌರವ ರೂಪದಲ್ಲಿ ವಿನಿಯೋಗವಾಗುವುದು. ಹುತಾತ್ಮ ಸೈನಿಕರ ಅವಲಂಬಿತರು ಬೇಡಿಕೆ ಇಟ್ಟಿರುವ ನಿವೇಶನದ ಕುರಿತು ತಾವು ಪರಿಶೀಲಿಸುವುದಾಗಿ ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ ಮಾತನಾಡಿ, ಜಿಲ್ಲಾಧಿಕಾರಿಗಳ ಸಹಕಾರಿಂದ ನಿಧಿ ಸಂಗ್ರಹಣೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಕರ್ನಲ್ ರಾಮಚಂದ್ರ, ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ವಿ.ಕೃಷ್ಣಮೂರ್ತಿ, ಉಪಾಧ್ಯಕ್ಷ ವೆಂಕಟೇಶ್ ರಾವ್, ಕಾರ್ಯದರ್ಶಿ ಉಮೇಶ್ ಬಾಪಟ್, ಸೈನಿಕ ಕಲ್ಯಾಣ ಇಲಾಖೆ ಸಿಬ್ಬಂದಿಗಳಾದ ದಿನೇಶ್, ಅನಿಲ್,ಮೂರ್ತಿ, ಮಾಜಿ ಸೈನಿಕರು ಅವರ ಅವಲಂಬಿತರು ಹಾಜರಿದ್ದರು.