ಶಿವಮೊಗ್ಗ, ಡಿಸೆಂಬರ್ 08, : ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಇನ್ನೂ ಬಾಕಿ ಇರುವ ಯುವ ಮತದಾರರ ನೋಂದಣಿಯನ್ನು ಮಾಡಬೇಕೆಂದು ಮತದಾರರ ಪಟ್ಟಿ ವೀಕ್ಷಕರಾದ ಉಮಾಶಂಕರ್ ಎಸ್ ಆರ್ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2024 ಕ್ಕೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತದೆ. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರವಹಿಸುತ್ತವೆ. ರಾಜಕೀಯ ಪಕ್ಷಗಳ ತೊಡಗಿಕೊಳ್ಳುವಿಕೆ, ಅವರು ನೀಡುವ ಇನ್‍ಪುಟ್ಸ್ ಮುಖ್ಯವಾಗುತ್ತದೆ. ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಚೆನ್ನಾಗಿ ಆಗಿದೆ. ಹಾಗೂ ಸ್ವೀಪ್ ಚಟುವಟಿಕೆಗಳ ಮೂಲಕ ಅರಿವು ಮೂಡಿಸಲಾಗಿದೆ.
ಆದರೆ 18, 19 ವರ್ಷದ ಯುವ ಮತದಾರರ ನೋಂದಣಿ ಸ್ವಲ್ಪ ಬಾಕಿ ಇದೆ. ಇನ್ನೂ 3 ರಿಂದ 4 ಸಾವಿರ ಯುವ ಮತದಾರರ ನೋಂದಣಿ ಬಾಕಿ ಇದ್ದು ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ನೋಂದಣಿ ಆಗಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಒಂದು ನಿರಂತರ ಪ್ರಕ್ರಿಯೆ ಆಗಿದ್ದು, ಯುವ ಮತದಾರರು ಸೇರಿದಂತೆ ಜನತೆ ಅರ್ಜಿ ನೀಡಿ ನೋಂದಣಿ ಮಾಡಿಕೊಳ್ಳಬೇಕು.
ನಮೂನೆ, 6, 7 ಮತ್ತು 8 ಅರ್ಜಿಗಳು ಆನ್‍ಲೈನ್, ಆಫ್‍ಲೈನ್‍ನಲ್ಲಿ ಬಂದಿದ್ದು ಅಪ್‍ಡೇಟ್ ಆಗುತ್ತಿವೆ. ಹೆಚ್ಚು ಬಾಕಿ ಇರುವುದಿಲ್ಲ. 2-3 ಮತದಾರರ ಕಾರ್ಡನ್ನು ಹೊಂದುವುದು ಅಪರಾಧವಾಗುತ್ತದೆ. ಆದ್ದರಿಂದ ಹೆಚ್ಚು ಕಾರ್ಡ್ ಹೊಂದಿರುವವರು ಸ್ವತಃ ಅದನ್ನು ರದ್ದುಪಡಿಸಿ ಒಂದೇ ಕಾರ್ಡನ್ನು ಹೊಂದಬೇಕು. ಪ್ರತಿ ಮತದಾರರನ್ನು ಗಮನಸಲಾಗುತ್ತಿರುತ್ತದೆ. ಆದ್ದರಿಂದ ಒಂದೇ ಕಾರ್ಡ್ ಇರಬೇಕು. ಮರಣ ಹೊಂದಿದವರ ಹೆಸರನ್ನು ತೆಗೆಸಿಹಾಕಬೇಕು ಹಾಗೂ ವರ್ಗಾವಣೆ, ಸ್ಥಳ ಬದಲಾವಣೆ ಇತರೆ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕೆಂದರು.
ರಾಜಕೀಯ ಪಕ್ಷದ ಅಭ್ಯರ್ಥಿಗಳು ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಯುವ ಮತದಾರರ ನೋಂದಣಿ ಹೆಚ್ಚಾಗಬೇಕು ಹಾಗೂ ಮತದಾನ ಪ್ರಮಾಣ ಹೆಚ್ಚಲು ಕ್ರಮ ವಹಿಸಬೇಕೆಂದು ಕೋರಿದರು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಪ್ರಸಕ್ತ ಪರಿಷ್ಕರಣೆ ವೇಳೆ ಸುಮಾರು 27 ಸಾವಿರ ಯುವ ಮತದಾರರು ನೋಂದಣಿಯಾಗಿದ್ದು ಇನ್ನು 3 ರಿಂದ 3500 ಯುವ ಮತದಾರರು ನೋಂದಣಿಗೆ ಬಾಕಿ ಇದ್ದು, ಅರ್ಜಿ ಸ್ವೀಕರಿಸಲಾಗುತ್ತಿದೆ. ಕಳೆದ ವಾರದಲ್ಲೇ 5527 ಯುವ ಮತದಾರರ ಸೇರ್ಪಡೆ ಆಗಿದೆ. 32 ಸಾವಿರ ಎಪಿಕ್ ಕಾರ್ಡ್‍ಗಳು ಅಂಚೆ ವಿಳಾಸಕ್ಕೆ ರವಾನೆಯಾಗಿದೆ. ಹೊಸದಾಗಿ ಅರ್ಜಿ ಹಾಕಿದವರದ್ದು ಜನವರಿ 1 ರಿಂದ ರವಾನೆಯಾಗುತ್ತದೆ.
ಶೇಕಡವಾರು ಮತದಾನ ಕಡಿಮೆ ಆಗಲು ಕಾರಣ ಎರಡೆರಡು ಕಡೆ ಹೆಸರು ಇರುವುದು ಹಾಗೂ ಮರಣ ಹೊಂದಿದವರ ಹೆಸರುಗಳು ಪಟ್ಟಿಯಲ್ಲಿ ಇರುವುದಾಗಿದೆ. ಎರಡು ಕಡೆ ಇರುವದನ್ನು ರದ್ದುಪಡಿಸುವ ಅಭಿಯಾನ ಜಾರಿಯಲ್ಲಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ 19 ಸಾವಿರ ಮರಣ ಸಂಭವ ಆಗುತ್ತದೆ. ಇದಕ್ಕೆ ತಕ್ಕನಾಗಿ ಹೆಸರನ್ನು ತೆಗೆದು ಹಾಕುವ ಕೆಲಸ ಆಗಬೇಕು. ಕಳೆದ ಬಾರಿ 6 ಸಾವಿರ ಅಂತರವಿತ್ತು, ಈ ಬಾರಿ 3 ಸಾವಿರಕ್ಕೆ ಇಳಿದಿದ್ದು, ಮರಣ ಹೊಂದಿದವರನ್ನು ಗುರುತಿಸಿ, ಹೆಸರು ತೆಗೆದುಹಾಕಲು ರಾಜಕೀಯ ಪಕ್ಷಗಳ ಏಜೆಂಟರ್ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ 7 ಮತ ಕ್ಷೇತ್ರಗಳು, 1793 ಮತಗಟ್ಟೆಗಳಿದ್ದು, ದಿ: 05-01-2024 ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಪ್ರಸ್ತುತ ಮತದಾರರ ಪಟ್ಟಿಯಲ್ಲಿ 728661 ಪುರುಷ, 744779 ಮಹಿಳೆ ಸೇರಿದಂತೆ ಒಟ್ಟು 1473440 ಮತದಾರರು ಇದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ರಾಜಕೀಯ ಪಕ್ಷಗಳಾದ ಕಾಂಗ್ರೆಸ್‍ನ ಚಂದನ್, ಬಿಜೆಪಿ ಪಕ್ಷ ಕೆ.ಎಸ್.ದೇವರಾಜ್, ಬಿಎಸ್‍ಪಿ ಪಕ್ಷದ ಮಂಜುನಾಥ್, ಜೆಡಿಎಸ್‍ನ ನಿಖಿಲ್ ಎಸ್ ಸೇರಿದಂತೆ ಅಧಿಕಾರಿಗಳು ಇದ್ದರು.