ಶಿವಮೊಗ್ಗ: ಜೀವನದಲ್ಲಿ ಯಶಸ್ಸು ಸಾಧಿಸಲು ಓದು ಅತ್ಯಂತ ಮುಖ್ಯ. ಪ್ರತಿಯೊಬ್ಬರು ನಿರಂತರವಾಗಿ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಬೆಂಗಳೂರಿನ ಐಎಎಸ್ ತರಬೇತುದಾರರಾದ ಆಯಿಷಾ ಫರ್ಜಾನ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಏರ್ ಪೋರ್ಟ್ ರಸ್ತೆಯಲ್ಲಿರುವ ಪೋದಾರ್ ಶಾಲೆಯ ಸಮೀಪದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ನಿರ್ಮಿಸಿರುವ ಅಧ್ಯಯನ ಕೇಂದ್ರ “ಕೆ.ಎ.ದಯಾನಂದ ಐಎಎಸ್ ವಾಚನಾಲಯ”ದ ಮೊದಲ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಓದುವ ಅಭ್ಯಾಸವು ನಮ್ಮಲ್ಲಿ ಆತ್ಮಾಭಿಮಾನ ಮೂಡಿಸುತ್ತದೆ. ಸಾಮಾನ್ಯ ವ್ಯಕ್ತಿಯು ಅಸಾಮಾನ್ಯ ಸಾಧನೆ ಮಾಡುವಂತೆ ಓದು ನಮ್ಮನ್ನು ಸಿದ್ಧಗೊಳಿಸುತ್ತದೆ. ಪ್ರತಿಯೊಬ್ಬರೂ ಶಿಕ್ಷಣದ ಜತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಅಧ್ಯಯನ ನಡೆಸಲು ಮನಸ್ಸಿನ ಸಾಮಾರ್ಥ್ಯ ವೃದ್ಧಿಗೊಳಿಸಬೇಕು ಎಂದು ತಿಳಿಸಿದರು.
ಭಾರತ ದೇಶ ಸದೃಢ ಪ್ರಜೆಗಳನ್ನು ರೂಪಿಸುವ ಶಕ್ತಿ ಶಿಕ್ಷಣ, ಗ್ರಂಥಾಲಯಗಳಿಗೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವ ಸಮೂಹವನ್ನು ಸಿದ್ಧಪಡಿಸುವ ಇಂತಹ ಗ್ರಂಥಾಲಯ ಹಾಗೂ ವಾಚನಾಲಯಗಳಿಗೆ ಇದೆ. ಸಮನ್ವಯ ಟ್ರಸ್ಟ್ ಕಾರ್ಯವು ಅತ್ಯಂತ ಮಾದರಿ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು ಹೊಸ ಹೊಸ ನೇಮಕಾತಿಗಳ ಬಗ್ಗೆ ಮಾಹಿತಿ ಸದಾ ಪಡೆಯುತ್ತಿರಬೇಕು. ಪರೀಕ್ಷೆಗಳಿಗೆ ಅಗತ್ಯವಿರುವ ಸಿದ್ಧತೆ ನಡೆಸಬೇಕು. ಮುಂದಿನ ದಿನಗಳಲ್ಲಿಯೂ ಸಾವಿರಾರು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬರಲಿದೆ. ಅದಕ್ಕೆ ಬೇಕಾದ ಪೂರಕ ತಯಾರಿ ನಡೆಸಬೇಕು ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಮಾತನಾಡಿ, ಅಧ್ಯಯನ ಸಂದರ್ಭದಲ್ಲಿ ಪರಿಶ್ರಮದ ಜತೆಯಲ್ಲಿ ಜಾಣ್ಮೆಯು ಅತ್ಯಂತ ಮುಖ್ಯ. ಪ್ರತಿಯೊಬ್ಬರಲ್ಲಿಯೂ ಅಸಾಧಾರಣ ಶಕ್ತಿ ಇರುತ್ತದೆ. ಪರೀಕ್ಷೆಗೆ ಸಿದ್ಧತೆ ನಡೆಸಲು ಸಮಯದ ನಿರ್ವಹಣೆಯು ಅತ್ಯಂತ ಮುಖ್ಯವಾಗುತ್ತದೆ. ಸಮಯವನ್ನು ಪರಿಣಾಮಕಾರಿಯಾಗಿ ಬಳಸಲು ಮನೋಸಾಮಾರ್ಥ್ಯ ನಿಮ್ಮಲ್ಲಿರಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ಜಗತ್ತಿಗೆ ಅಗತ್ಯವಿರುವ ನಿರಂತರ ಪರಿಶ್ರಮವನ್ನು ಹಾಕಬೇಕು. ಸವಾಲುಗಳನ್ನು ಎದುರಿಸುವ ಆತ್ಮಸ್ಥೆöÊರ್ಯ ಇರಬೇಕು. ಎಂತಹ ಸಂದರ್ಭಗಳಿಗೂ ಹೆದರದೇ ಮುನ್ನಡೆಯಬೇಕು ಎಂದರು.
ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳ ಜತೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹಾಗೂ ಐಎಎಸ್ ತರಬೇತುದಾರರಾದ ಆಯಿಷಾ ಫರ್ಝಾನ ಅವರು ಸಂವಾದ ನಡೆಸಿದರು. ಆಕಾಂಕ್ಷಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಮೈಸೂರಿನ ಶ್ರೀ ಅರ್ಜುನ ಅವಧೂತ ಮಹರಾಜರು, ನಟಿ ಪ್ರೇಮಾ, ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಕೆ.ಎಂ.ಗಿರಿಜಾದೇವಿ, ಟ್ರಸ್ಟಿ ವಿಕ್ರಂ.ಎ.ವಿ, ನಿರ್ದೇಶಕ ಸಮನ್ವಯ ಕಾಶಿ, ಸ್ವಯಂ ಸೇವಕರು ಮತ್ತಿತರರು ಉಪಸ್ಥಿತರಿದ್ದರು.