ಅನಾಥ ಮಕ್ಕಳಿಗೆ ಅಕ್ಕರೆ ಮತ್ತು ಆರೈಕೆ ನೀಡಲು ಹಾಗೆಯೇ ಮಕ್ಕಳಿಲ್ಲದ ಪೋಷಕರಿಗೆ ಕಾನೂನಾತ್ಮಕವಾಗಿ ಮಗುವನ್ನು ನೀಡುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಶಿವಮೊಗ್ಗದ ಆಲ್ಕೋಳದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಕಾರ್ಯಾರಂಭಿಸಿದೆ.
ಕೆಂದ್ರ ಸರ್ಕಾರವು ನಿಗದಿಪಡಿಸಿರುವ ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಏಜೆನ್ಸಿ ಮೂಲಕ ನಿರ್ವಹಿಸಲಾಗುತ್ತಿರುವ ಕೇರಿಂಗ್ಸ್ ಪೋರ್ಟಲ್‍ನಲ್ಲಿ ದತ್ತು ಪಡೆಯಲು ಇಚ್ಛಿಸುವ ಪೋಷಕರು ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ದತ್ತು ಸಂಸ್ಥೆಯ ಸಹಾಯ ಪಡೆದು ಮಾಹಿತಿ ಪಡೆಯಬಹುದಾಗಿದೆ. ಮಕ್ಕಳಿಲ್ಲದ ದಂಪತಿಗಳಿಗೆ ಮಗುವಿನ ಆಪ್ತತೆ, ಸಾನಿಧ್ಯ, ಪೋಷಕತ್ವದ ಜವಾಬ್ದಾರಿಯನ್ನು ಮತ್ತು ಪರಿಪೂರ್ಣತೆಯನ್ನು ನೀಡುತ್ತದೆ.
ದತ್ತು ಪ್ರಕ್ರಿಯೆ ಕಾನೂನು ಬದ್ಧವಾಗಿ ನಡೆಯಬೇಕು. ಅನಧಿಕೃತ ದತ್ತು ಪ್ರಕ್ರಿಯೆ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ. ಬಾಲನ್ಯಾಯ ಕಾಯ್ದೆ-2015, ಸೆಕ್ಷನ್ 56ರನ್ವಯ ಅನಾಥ, ಪರಿತ್ಯಾಕ್ತ ಹಾಗೂ ಒಪ್ಪಿಸಲ್ಪಟ್ಟ ಮಕ್ಕಳನ್ನು ದತ್ತು ನೀಡುವುದರ ಮೂಲಕ ಘೋಷಣೆ ಮತ್ತು ಪುನರ್ವಸತಿ ಕಲ್ಪಿಸುವ ಕೇಂದ್ರ. ಸೆಕ್ಷನ್ 60ರನ್ವಯ ಮಕ್ಕಳ ಕೌಟುಂಬಿಕ ಹಕ್ಕನ್ನು ಖಾತ್ರಿಪಡಿಸಿಕೊಳ್ಳಲಾಗುವುದು. ಸೆಕ್ಷನ್ 80ರನ್ವಯ ಕಾನೂನು ಬಾಹಿರವಾಗಿ ದತ್ತು ನೀಡಿದರೆ 3 ವರ್ಷದವರೆಗೆ ಶಿಕ್ಷೆ ಮತ್ತು ರೂ 1 ಲಕ್ಷದವರೆಗೆ ದಂಡ. ಸೆಕ್ಷನ್ 81ರನ್ವಯ ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಮಕ್ಕಳನ್ನು ಕೊಂಡವರಿಗೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ ರೂ 1 ಲಕ್ಷಗಳವರೆಗೆ ದಂಡ ವಿಧಿಸಲಾಗುತ್ತದೆ.
ನವಜಾತ ಶಿಶುವಿನಿಂದ 2 ವರ್ಷದವರೆಗಿನ ಮಕ್ಕಳನ್ನು ದತ್ತು ಪಡೆಯಲು ನಿರೀಕ್ಷಿತ ದಂಪತಿಗಳ ಒಟ್ಟಾರೆ ವಯಸ್ಸು 85 ವರ್ಷದೊಳಗಿದ್ದು, ಇವರಲ್ಲಿ ಒಬ್ಬರ ವಯಸ್ಸು 40 ವರ್ಷದ ಒಳಗಿರಬೇಕು. 2 ರಿಂದ 4 ವರ್ಷದ ಮಕ್ಕಳಿಗೆ ದಂಪತಿಗಳ ಒಟ್ಟಾರೆ ವಯಸ್ಸು 90 ವರ್ಷದೊಳಗಿದ್ದು, ಒಬ್ಬರ ವಯಸ್ಸು 45 ವರ್ಷದ ಒಳಗಿರಬೇಕು. 4 ರಿಂದ 8 ವರ್ಷದ ಮಕ್ಕಳಿಗೆ ದಂಪತಿಗಳ ಒಟ್ಟಾರೆ ವಯಸ್ಸು 100 ವರ್ಷದೊಳಗಿದ್ದು, ಒಬ್ಬರ ವಯಸ್ಸು 50 ವರ್ಷದ ಒಳಗಿರಬೇಕು. 8 ರಿಂದ 18 ವರ್ಷದ ಮಕ್ಕಳಿಗೆ ದಂಪತಿಗಳ ಒಟ್ಟಾರೆ ವಯಸ್ಸು 110 ವರ್ಷದೊಳಗಿರಬೇಕು. ಒಬ್ಬರ ವಯಸ್ಸು 55 ವರ್ಷದ ಒಳಗಿರಬೇಕು. ಪೋಷಕರ ಮತ್ತು ಮಗುವಿನ ನಡುವೆ 25 ವರ್ಷಗಳ ಅಂತರವಿರಬೇಕು. ದತ್ತು ಪಡೆಯುವ ಸಂಭವನೀಯ ಪೋಷಕರು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಸದೃಢರಾಗಿರಬೇಕು. ಮಗುವನ್ನು ಉತ್ತಮವಾಗಿ ಬೆಳೆಸಲು ಪೂರಕವಾಗಿ ಉತ್ತಮವಾದ ಆದಾಯದ ಮೂಲಗಳನ್ನು ಹೊಂದಿರಬೇಕು.
ಇಲಾಖೆಗೆ ದೊರೆತ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ದತ್ತು ಪ್ರಕ್ರಿಯೆಗೆ ಇರುವ ಮಾನದಂಡಗಳು, ಚೈಲ್ಡ್ ಸ್ಟಡಿ ರಿಪೋರ್ಟ್, ನ್ಯಾಯ ಸಂಬಂಧಿತ ಪ್ರಕರಣಗಳಲ್ಲಿ ಡಿಎನ್‍ಎ ವರದಿ ಮತ್ತು ಪಾಲಕರ ಪತ್ತೆ ವರದಿ ಪೂರೈಸಿದ ನಂತರ ಎಲ್‍ಎಫ್‍ಎ ಪಡೆದು ಕೇರಿಂಗ್ ಪೋರ್ಟಲ್‍ನಲ್ಲಿ ಅಳವಡಿಸಿ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು.
ನಿರೀಕ್ಷಿತ ದತ್ತು ಪೋಷಕರು ಎರಡು ಅವಳಿ ಮಕ್ಕಳು, ಸೋದರಿ/ಸೋದರರಿದ್ದಾಗ ಮೂರು ಮಕ್ಕಳನ್ನು ದತ್ತು ಪಡೆಯಬಹುದಾಗಿದೆ.
ದತ್ತು ಆದೇಶ ಪಡೆಯಲು ಮಾನ್ಯ ಜಿಲ್ಲಾಧಿಕಾರಿಯವರ ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರದ ದತ್ತು ಮಾರ್ಗಸೂಚಿ ನಿಬಂಧನೆ 13, ಬಾಲನ್ಯಾಯ ಕಾಯ್ದೆ ಸೆಕ್ಷನ್ 36ರನ್ವಯ ಮಾನ್ಯ ಜಿಲ್ಲಾಧಿಕಾರಿಯವರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ದತ್ತು ಆದೇಶವನ್ನು ಪಡೆಯಲಾಗುವುದು.
ದತ್ತು ಪಡೆದ ಪೋಷಕರ ಹೆಚ್‍ಎಸ್‍ಆರ್ ವರದಿ ಮಾಡಿರುವ ದತ್ತು ಸಂಸ್ಥೆಯ ವತಿಯಿಂದ ಪ್ರತಿ 6 ತಿಂಗಳಿಗೊಮ್ಮೆ ಗೃಹ ಭೇಟಿ ಮಾಡಿ ಮಗು ಮತ್ತು ಪೋಷಕರ ಬಾಂಧವ್ಯದ ವರದಿಯನ್ನು ಸಿದ್ಧಪಡಿಸಿ ಕಾರಾ ಪೋರ್ಟಲ್‍ನಲ್ಲಿ ದಾಖಲಿಸಲಾಗುವುದು. ಈ ಪ್ರಕ್ರಿಯೆ ನಿರಂತರವಾಗಿ 2 ವರ್ಷಗಳವರೆಗೆ ಅನುಸರಣೆ ಮಾಡಲಾಗುತ್ತದೆ.
ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ 56ರ ಅಡಿಯಲ್ಲಿ ದತ್ತು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ದತ್ತು ಪಡೆಯಲು www.cara.wcd.gov.in ನಲ್ಲಿ ನೊಂದಣಿಯಾಗುವುದು ಕಡ್ಡಾಯ. ದತ್ತು ಪಡೆಯಲು ಕೇರಿಂಗ್ಸ್‍ನಲ್ಲಿ ನೊಂದಣಿಯಾದ ನಂತರ ಗೃಹ ಅಧ್ಯಯನ ವರದಿ ತಯಾರಿಸುವ ಸಂದರ್ಭದಲ್ಲಿ ರೂ.6,000/-ಗಳನ್ನು ಹಾಗೂ ನಂತರದಲ್ಲಿ ಮಗುವನ್ನು ಸ್ವೀಕರಿಸುವ ಸಂದರ್ಭದಲ್ಲಿ ರೂ.50,000/-ಗಳನ್ನು ಪಾವತಿಸಬೇಕು.
ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣೆ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಬಿಸಾಡಿ ಎಳೆಯ ಜೀವನಗಳನ್ನು ಹಿಂಸಿಸುವ ಬದಲು ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಿ.

ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರಿ ವೀಕ್ಷಣಾಲಯ ಕಟ್ಟಡ, 100 ಅಡಿ ರಸ್ತೆ ಆಲ್ಕೊಳ ಶಿವಮೊಗ್ಗ ಇಲ್ಲಿ ಖುದ್ದಾಗಿ ಅಥವಾ ದೂ.ಸಂ.: 08182-295709, 9483220851 ಗಳನ್ನು ಸಂಪರ್ಕಿಸಬಹುದಾಗಿದೆ.

• 6 ವರ್ಷದೊಳಗಿನ ಮಕ್ಕಳು ವಿಶೇಷ ದತ್ತು ಸಂಸ್ಥೆಯಲ್ಲಿ ಹಾಗೂ 6 ವರ್ಷ ಮೇಲ್ಪಟ್ಟ ಮಕ್ಕಳು ಚೈಲ್ಡ್‍ಕೇರ್ ಸಂಸ್ಥೆಯಲ್ಲಿ ಇರುತ್ತಾರೆ. ಮೊದಲು ಇಲ್ಲಿ ದತ್ತು ಸಂಸ್ಥೆ ಇರಲಿಲ್ಲ. ಚಿಕ್ಕಮಗಳೂರು ಮತ್ತು ಗದಗ್ ಸಂಸ್ಥೆಗಳಿಗೆ ಕಳುಹಿಸಲಾಗುತಿತ್ತು. ಇಂದು ಶಿವಮೊಗ್ಗದಲ್ಲಿ ಆರಂಭವಾಗಿದೆ. ಇದುವರೆಗೆ 3 ಮಕ್ಕಳನ್ನು ಮೈಸೂರು ಮಂಗಳೂರಿಗೆ ದತ್ತು ನೀಡಲಾಗಿದೆ, ಪ್ರಸ್ತುತ ಸಂಸ್ಥೆಯಲ್ಲಿರುವ 10 ಮಕ್ಕಳಲ್ಲಿ ಒಂದು ಮಗು ಪೋರ್ಟಲ್ ನೋಂದಣಿಯಲ್ಲಿ ಹೊಂದಾಣಿಕೆಯಾಗಿದ್ದು, ಜಿಲ್ಲಾಧಿಕಾರಿಗಳು ಶೀಘ್ರದಲ್ಲಿ ಪೋಷಕರಿಗೆ ಒಪ್ಪಿಸುವರು. ವಿಶೇಷ ದತ್ತು ಸಂಸ್ಥೆಯಲ್ಲಿ ಓರ್ವ ಅಧೀಕ್ಷಕರು, ಸಂಯೋಜಕರು, ಸಾಮಾಜಿಕ ಕಾರ್ಯಕರ್ತರು, ಸ್ಟಾಫ್ ನರ್ಸ್ ಹಾಗೂ 6 ಜನ ಆಯಾಗಳು ಕೆಲಸ ಮಾಡುತ್ತಿದ್ದಾರೆ.
-ಮಂಜುನಾಥ ಆರ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ


-ಅಮೃತಾ, ಅಪ್ರೆಂಟಿಸ್ ವಾರ್ತಾ ಇಲಾಖೆ

error: Content is protected !!