ಸಾಮಾಜಿಕ ಸ್ವಾಸ್ಥ್ಯವೇ ಧರ್ಮ ಮತ್ತು ಸಾಹಿತ್ಯದ ಆಶಯ
ಶಿವಮೊಗ್ಗ : ಮನುಷ್ಯನ ಒಳಿತನ್ನು ಬಯಸುವುದು ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದೇ ಧರ್ಮ ಮತ್ತು ಸಾಹಿತ್ಯದ ಮೂಲ ಆಶಯವಾಗಿದೆ ಎಂದು ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.
ನಗರದ ಗೋಪಿಶೆಟ್ಟಿಕೊಪ್ಪದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶ್ರೀ ಬೆಕ್ಕಿನಕಲ್ಮಠದ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನಮಠ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶ್ರಾವಣ ಚಿಂತನೆ ಹಾಗೂ 216 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಉನ್ನತಿಗೆ ಸಾಹಿತ್ಯವೆಂಬ ಮಾಧ್ಯಮ ಅತ್ಯವಶ್ಯಕ. ಧರ್ಮ ಮತ್ತು ಸಾಹಿತ್ಯದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಧರ್ಮ ಏನನ್ನೇ ಸಾಧಿಸಬೇಕಾದರು ಅಲ್ಲಿ ಸಾಹಿತ್ಯದ ಅವಶ್ಯಕತೆಯಿದೆ. ನಮ್ಮ ವಿದ್ವಾಂಸರು ಜ್ಞಾನಿಗಳು ಜನರ ಒಳಿತಿಗಾಗಿ ಸಮಾಜಮುಖಿ ಚಿಂತನೆಗಳನ್ನು ಪಸರಿಸುವುದಕ್ಕಾಗಿ ಕಂಡುಕೊಂಡ ಮಾಧ್ಯಮ ಸಾಹಿತ್ಯ.
ಕೆಲವೇ ಭಾಷೆಗಳಲ್ಲಿ ರಚನೆಯಾದದ್ದು ಮಾತ್ರ ಧರ್ಮವಲ್ಲ. ಕನ್ನಡದಲ್ಲಿಯೇ ಧರ್ಮ ಸಾಹಿತ್ಯವನ್ನು ಪಸರಿಸಿದವರು ವಚನಕಾರರು, ದಾಸರು. ಕನ್ನಡದ ಅನೇಕ ಪ್ರಕಾರಗಳಲ್ಲಿ ಧರ್ಮ ಮತ್ತು ಸಾಹಿತ್ಯ ಒಟ್ಟುಗೂಡಿ ಹೋಗುತ್ತಿದ್ದು, ಅದುವೇ ಕನ್ನಡ ಭಾಷೆಯ ವೈವಿಧ್ಯತೆಯ ಶಕ್ತಿಯನ್ನು ಹೇಳುತ್ತದೆ.
ಇಂತಹ ಅದ್ಭುತ ಕನ್ನಡ ಸಾಹಿತ್ಯಕ್ಕೆ ನಾವೆಲ್ಲರೂ ವಾರಸುದಾರರು. ಅದರೇ ಕನ್ನಡದ ಬಗೆಗೆ ಅಭಿಮಾನ ಶೂನ್ಯರಂತೆ ವರ್ತಿಸುತ್ತಿರುವುದು ಬೇಸರದ ಸಂಗತಿ. ನೀರು, ಗಡಿ ಸಮಸ್ಯೆಗಳಲ್ಲಿ ಇಂದಿಗೂ ಅನಾಥ ಪ್ರಜ್ಞೆ ಕಾಡುತ್ತಿದೆ. ಹಾಗಾಗಿ ನಾಡು ನುಡಿಯ ವಿಚಾರದಲ್ಲಿ ಸ್ವಾಭಿಮಾನ ಬೆಳೆಸಿಕೊಳ್ಳಬೇಕಾದ ತುರ್ತಿದೆ.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರವೇಶಾತಿಯ ಕೊರತೆಯಿದೆ. ಇಂಗ್ಲೀಷಿನಲ್ಲಿ ಪರಿಪೂರ್ಣತೆ ಪಡೆಯುತ್ತೇವೆ ಎಂಬ ಅಂಧತ್ವದಲ್ಲಿ ಇಂದಿನ ಜನಾಂಗವಿದೆ. ಮಾತೃಭಾಷೆಯಲ್ಲಿ ಪರಿಪೂರ್ಣತೆ ಪಡೆದಾಗ ಮಾತ್ರ ಇತರೇ ಭಾಷೆಗಳನ್ನು ಸುಲಲಿತವಾಗಿ ಕಲಿಯಬಹುದೆಂಬ ಸತ್ಯ ಅರಿಯಿರಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಎಲ್ಲಾ ಭಾಗ್ಯಗಳು ಮನೆಯ ಬಾಗಿಲಿಗೆ ತಲುಪುವ ವೇಳೆಯಲ್ಲಿ ಪಕೃತಿ ಅದೇಕೊ ಮುನಿಸು ತೋರುತ್ತಿದೆ. ಇಂತಹ ಸಂದರ್ಭದಲ್ಲಿ ಮನಸ್ಸುಗಳನ್ನು ಕಟ್ಟುವ ಕಾರ್ಯ ಸಾಹಿತ್ಯ ಹುಣ್ಣಿಮೆ ಮತ್ತು ಶ್ರಾವಣ ಚಿಂತನೆಯ ಮೂಲಕ ನಡೆಸುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊರೊನಾ ಮಹಾಮಾರಿಯಲ್ಲಿ ನಿಧನ ಹೊಂದಿದ್ದ ಕವಿ ಶಿವಾನಂದ ಶೇಟ್ ಅವರು ಬರೆದ ಕನ್ನಡ ಭಕ್ತಿಗೀತೆಗಳು ಹಾಗೂ ಕನ್ನಡ ಭಾವಗೀತೆಗಳು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಇದೇ ವೇಳೆ ತೀರ್ಥಹಳ್ಳಿಯ ಶಿಕ್ಷಕರ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ, ಹಿರಿಯ ತೆರಿಗೆ ಸಲಹೆಗಾರರಾದ ಯು. ಮಧುಸೂಧನ ಐತಾಳ್, ಶಿಕಾರಿಪುರದ ಗಾಯಕರಾದ ವಿದ್ವಾನ್ ವಿಜಯಲಕ್ಷ್ಮೀ, ಶಿಕ್ಷಕಿ ಶೈಲಶ್ರೀ ಅವರನ್ನು ಸನ್ಮಾನಿಸಲಾಯಿತು.
ಶಿವಾನಂದ ಶೇಟ್ ಅವರು ರಚಿಸಿದ ಗೀತೆಗಳನ್ನು ಖ್ಯಾತ ಗಾಯಕರಾದ ಕೆ. ಯುವರಾಜ್, ಲಕ್ಷ್ಮೀ ಮಹೇಶ್, ಮಹಾದೇವಿ, ಸುಶೀಲಾ ಷಣ್ಮುಗಂ, ಬಿ.ಟಿ. ಅಂಬಿಕಾ ಅವರು ಹಾಡಿದರು. ವಿದೂಷಿ ಪುಷ್ಪಾ ಕೃಷ್ಣಮೂರ್ತಿ ಅವರನೃತ್ಯ ಸಂಯೋಜನೆಯಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಸಾಹಿತಿ ಡಾ. ಕಲೀಮ್ ಉಲ್ಲಾ ಕಥಾವಾಚನ ಮಾಡಿದರು. ಕವಿಗಳಾದ ಪ್ರವೀಣ್ ಜವಳಿ, ಡಾ. ಹಸೀನಾ, ಗಾಯಿತ್ರಿ ಕವನಗಳನ್ನು ವಾಚಿಸಿದರು.
ಮುಖ್ಯ ಅತಿಥಿಗಳಾಗಿ ದೈವಜ್ಞ ಬ್ರಾಹ್ಮಣ ಸಮಾಜದ ಮಾಜಿ ಅಧ್ಯಕ್ಷರಾದ ಕಮಲಾಕ್ಷ ಎಸ್. ಡಿ., ಸಾಹಿತ್ಯ ಹುಣ್ಣಿಮೆಯ ಹಿಂದಿನ ಆತಿಥ್ಯ ನೀಡಿದ್ದ ಗೋಪಾಲಗೌಡ ಬಡಾವಣೆಯ ಎ ಬ್ಲಾಕ್ ನಿವಾಸಿಗಳ ಸಂಘದ ಅಧ್ಯಕ್ಷರಾದ ರಾಮಚಂದ್ರ ಎಸ್. ಸಿ., ಗೌರವಾಧ್ಯಕ್ಷರಾದ ಆದಿಮೂರ್ತಿ ಎಚ್. ಬಿ. ಉಪಸ್ಥಿತರಿದ್ದರು.