ಶಿವಮೊಗ್ಗ : ಜೂನ್ 26 (ಕರ್ನಾಟಕ ವಾರ್ತೆ) : ನಗರದ ಸುತ್ತಮುತ್ತ ವಾಸಿಸುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ತರ ಬದುಕು ಅಸಹನೀಯವಾಗಿದ್ದು, ಅವರ ನೆಮ್ಮದಿಯ ಬದುಕಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಹಕರಿಸುವಂತೆ ಶಾಸಕ ಆರಗ ಜ್ಞಾನೇಂದ್ರ ಅವರು ಹೇಳಿದರು.
ಅವರು ನಿನ್ನೆ ಹೊಸನಗರ ತಾಲೂಕು ನಗರ ಹೋಬಳಿಯ ಮೂಡುಗೊಪ್ಪ ಗ್ರಾಮದಲ್ಲಿ ಏರ್ಪಡಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಇಲ್ಲಿ ವಾಸಿಸುವ ಅನೇಕ ಕುಟುಂಬಗಳು ಒಂದಿಲ್ಲೊಂದು ಸಮಸ್ಯೆಗಳಿಂದ ಬಾಧಿತರಾದವರು. ಹಲವು ದಶಕಗಳಿಂದ ತಮ್ಮ ಸ್ವಾದೀನದಲ್ಲಿರುವ ಭೂಮಿಯನ್ನು ಅರಣ್ಯ ಇಲಾಖೆಯ ಹೊಸಹೊಸ ಕಾನೂನು-ನಿಯಮಗಳಿಂದ ಸ್ವಂತದ್ದಾಗಿಸಿಕೊಳ್ಳಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ. ಇವೆಲ್ಲವುಗಳಿಗೆ ಶಾಶ್ವತ ಪರಿಹಾರ ದೊರೆಯಬೇಕು. ಅಲ್ಲದೆ ನಾಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತ್ಯಾಗ ಮಾಡಿದ ಜನರು ಇಂದಿಗೂ ಕತ್ತಲಲ್ಲಿರುವುದು ನೋವಿನ ಸಂಗತಿಯಾಗಿದೆ. ಎಲ್ಲೆಡೆ ಕಾಡು ನಾಶಗೊಳಿಸುತ್ತಿರುವ ಬಗ್ಗೆ ಆತಂಕವಿದ್ದರೆ, ಇಲ್ಲಿನ ಜನರಿಗೆ ಅರಣ್ಯ ಇರುವುದೇ ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು.
ಇಂದು ವಿವಿಧ ಇಲಾಖೆಗಳಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳ ಕಾರ್ಯದಕ್ಷತೆ ಪ್ರಶ್ನಿಸುವಂತಹದ್ದಾಗಿದೆ. ಆದರೆ, ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ್ ಅವರು ಎಲ್ಲಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಜನರ ಸಮಸ್ಯೆ ಇರುವಲ್ಲಿಗೆ ಕರೆತಂದು ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮ ಕೈಗೊಂಡು, ಜನರ ಆಶೋತ್ತರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ಸಂತಸ ತಂದಿದೆ ಎಂದರು.
ಅರಣ್ಯ ಪ್ರದೇಶದಲ್ಲಿ ವಾಸಿಸುವ ವನವಾಸಿಗಹಳಿಗೆ ಅಗತ್ಯ ಮೂಲಭೂತ ಸೌಕರ್ಯಗಳು ಒದಗಿಸುವುದು ಸಾಧ್ಯವಾಗುತ್ತಿಲ್ಲ. ಕೊಡಚಾದ್ರಿ ಮತ್ತು ನಗರಕೋಟೆ ಹಿನ್ನೀರಿನ ಪ್ರದೇಶ ನಯನ ಮನೋಹರವಾಗಿವೆ. ಪ್ರವಾಸೋದ್ಯಮಕ್ಕೆ ಇಲ್ಲಿ ವಿಫುಲ ಅವಕಾಶವಿದ್ದು, ಜಿಲ್ಲಾಧಿಕಾರಿಗಳು ಈ ಭಾಗದ ಪ್ರದೇಶಾಭಿವೃಧ್ದಿಗೆ ಆದ್ಯತೆ ನೀಡಬೇಕೆಂದರು.
94ಸಿ ಅಡಿಯಲ್ಲಿ ಜಮೀನು ಮಂಜೂರಾತಿಗೆ ಅವಕಾಶ ಕೊಡಿ. ನಗರ ಹೋಬಳಿಯ ಅನೇಕ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು. ಅರ್ಜಿಗಳ ವಿಲೇವಾರಿಗೆ ತ್ವರಿತಗತಿಯ ಕ್ರಮ ಅಗತ್ಯ. ಎಲ್ಲಾ ಹಂತದ ಅಧಿಕಾರಿಗಳು ಸಮಾಧಾನವಾಗಿ ಸಮಸ್ಯೆಗಳನ್ನು ಗಮನಿಸಿ ಜನಹಿತ ಕ್ರಮ ಕೈಗೊಳ್ಳಬೇಕು. ನೌಕರರ ಇಂತಹ ಕಾರ್ಯದಿಂದಾಗಿ ಇಲಾಖೆಗಳ ಹಾಗೂ ಅಧಿಕಾರಿಗಳ ಗೌರವ ಹೆಚ್ಚಾಗಲಿದೆ ಎಂದವರು ನುಡಿದರು.
ಜನತಾದರ್ಶನದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಮಾತನಾಡಿ, ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಈ ಜನತಾ ದರ್ಶನದ ಉದ್ದೇಶವಾಗಿದೆ. ಆದರೆ, ಎಲ್ಲ ಸಮಸ್ಯೆಗಳನ್ನು ಬರೆಹರಿಸಿಬಿಡುತ್ತೇವೆ ಎಂಬ ಭ್ರಮೆ ನಮಗಿಲ್ಲ. ಆದರೆ, ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜನತಾ ದರ್ಶನದಲ್ಲಿ ಸುಮಾರು 145ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಅರ್ಜಿಗಳಲ್ಲಿ ಸ್ಥಳೀಯವಾಗಿ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಲಾಗುವುದು. ಉಳಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ರವಾನಿಸಿ ನಿಗಧಿತಪಡಿಸಿಸ ಕಾಲಮಿತಿಯೊಳಗಾಗಿ ಕ್ರಮಕ್ಕೆ ಸೂಚಿಸಲಾಗುವುದು ಎಂದರು.
ಅರಣ್ಯಭೂಮಿಯ ಸಮಸ್ಯೆಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಈಗಾಗಲೇ ಗಮನಸೆಳೆಯಲಾಗಿದೆ. ಅಲ್ಲದೇ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಸಭೆಯ ಅಗತ್ಯವಿದೆ. ಈ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಇಲ್ಲಿನ ಜನಜೀವನ ಸಮಸ್ಯೆಗಳಿರುವುದನ್ನು ಗಮನಿಸಿದೆ. ವಿದ್ಯುತ್, ವಸತಿ, ಶಿಕ್ಷಣ, ಸಂತ್ರಸ್ತರ ಮನೆ ಜಮೀನಿನ ಸಮಸ್ಯೆಗಳನ್ನು ಗುರುತಿಸಿದ್ದೇವೆ. ಜಿಲ್ಲಾಡಳಿತ ನೀಡಿದ ಮಾತಿನಂತೆ ಜಿಲ್ಲಾಡಳಿತವೇ ಇಲ್ಲಿಗೆ ಧಾವಿಸಿದೆ. ಸಮಸ್ಯೆಗಳ ಪರಿಹಾರಕ್ಕೆ ಮತ್ತು ವಾಸ್ತವದ ಅರಿವು ಆಗಲಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಲತಾನಾಗೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷ ವಾಸಪ್ಪಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್, ತಾ.ಪಂ.ಸ. ಸುಬ್ರಹ್ಮಣ್ಯ, ಶ್ರೀಮತಿ ಸುಮಾ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಮಸ್ಯೆಗಳ ಮಹಾಪೂರ : ನಗರ ಹೋಬಳಿಯ ಗ್ರಾಮಸ್ಥರು ಪಡಿತರ ವಿತರಣೆ, ಶೈಕ್ಷಣಿಕ ಸೌಲಭ್ಯಗಳು, ಬಗರ್‍ಹುಕುಂ ಸಾಗುವಳಿ, ಹಕ್ಕುಪತ್ರ, ನಿವೇಶನ, ರಸ್ತೆ ದುರಸ್ತಿ, ಪ್ರವಾಸೋದ್ಯಮ ಸೌಲಭ್ಯಗಳು, ನೀರು ವಿದ್ಯುತ್ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳಲ್ಲಿ ಲಿಖಿತ ಸಮಸ್ಯೆಗಳನ್ನು ಖುದ್ದಾಗಿ ಮತ್ತು ಮೌಖಿಕವಾಗಿ ಸಲ್ಲಿಸಿದರು. ಸುಮಾರು ಸಾವಿರಕ್ಕೂ ಹೆಚ್ಚು ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!