ಶಿವಮೊಗ್ಗ: ಅವೈಜ್ಞಾನಿಕ ವಿದ್ಯುತ್ ದರ ಪರಿಷ್ಕರಣೆಯಿಂದ ಕೈಗಾರಿಕಾ ಉದ್ಯಮಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಹಾಗೂ ಕೆಇಆರ್‌ಸಿ ಮತ್ತು ಎಸ್ಕಾಂ ನೀತಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಶಿವಮೊಗ್ಗ ನಗರದ ಎಂಆರ್‌ಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮೆಸ್ಕಾಂ ವಿದ್ಯುತ್ ಬಿಲ್‌ನಲ್ಲಿ ಅವೈಜ್ಞಾನಿಕವಾಗಿ ಶೇ. 25 ರಿಂದ 75ರಷ್ಟು ಹೆಚ್ಚುವರಿ ದರ ನೀಡುತ್ತಿರುವುದು ಆತಂಕಕಾರಿಯಾಗಿದೆ. ಮೆಸ್ಕಾಂ ವಿದ್ಯುತ್ ದರ ಹೆಚ್ಚುವರಿ ಹೊರೆ ಆಗುತ್ತಿದ್ದು, ಏಕಾಏಕಿ ವಿದ್ಯುತ್ ದರ ಹೆಚ್ಚಿಸಿರುವುದು ಖಂಡನೀಯ. ಇದರಿಂದ ಕೈಗಾರಿಕೆ ಉದ್ದಿಮೆಗಳು ಮುಚ್ಚುವ ಭೀತಿಯಲ್ಲಿವೆ. ಸಾರ್ವಜನಿಕರಿಗೂ ಹೊರೆ ಆಗುತ್ತಿದೆ. ಕೂಡಲೇ ವಿದ್ಯುತ್ ದರ ಹೆಚ್ಚಳ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ದರದಲ್ಲಿನ ಫಿಕ್ಸೆಡ್ ಚಾರ್ಜ್ ಹಿಂದಿನಂತೆ ಮುಂದುವರೆಸಿಕೊಂಡು ಹೋಗಬೇಕು. ವಿದ್ಯುತ್ ಶಕ್ತಿಯ ಯೂನಿಟ್ ದರಗಳನ್ನು ಮಾರ್ಚ್ 2023ರ ನಿಗದಿತ ದರಗಳನ್ನೇ ಮುಂದುವರಿಸಬೇಕು. ಇಂಧನ ಬೆಲೆ ಅಸ್ಥಿರ ಪದ್ಧತಿಯಲ್ಲಿರುವುದರಿಂದ ಹೆಚ್ಚು ಹೊರೆಯಾಗುತ್ತಿದೆ. ಕರ್ನಾಟಕದಲ್ಲಿ ನೀರಿನಿಂದ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಇಂಧನ ಬೆಲೆ ಹೊರೆ ಕಡಿಮೆ ಇರುವುದರಿಂದ ಸರ್ಕಾರ ಶೇ. 50ರಷ್ಟು
ವಿನಾಯಿತಿ ಘೋಷಿಸಬೇಕು ಎಂದು ಮನವಿ ಮಾಡಿದರು.
ವಿದ್ಯುತ್ ದರದ ಮೇಲಿನ ತೆರಿಗೆಯನ್ನು ಹಾಲಿ ಶೇ 9 ರಿಂದ 3ಕ್ಕೆ ಇಳಿಸಿ 3-4 ವರ್ಷ ಶೇ 3 ದರವನ್ನು ನಿಗಧಿಪಡಿಸಬೇಕು. ಎಂಎಸ್‌ಎಂಇ ಉದ್ಯಮಗಳಿಗೆ ಸರ್ಕಾರದ ಅನುದಾನವನ್ನ ನಿಗಧಿಪಡಿಸಿ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಕೆಲವು ಶಾಸನ ಬದ್ಧ ಬದಲಾವಣೆಗಳನ್ನು ಮಾಡಬೇಕು. ಮೆಸ್ಕಾಂ ಖಾಸಗಿ ವಿದ್ಯುತ್ ಶಕ್ತಿ ಕಂಪನಿಗಳಿಂದ ವಿದ್ಯುತ್ ಖರೀದಿಸಿ 15 ಪೈಸೆ ಯೂನಿಟ್‌ಗೆ ವೆಚ್ಚ ಸೇರಿಸಿ ಕೈಗಾರಿಕೆಗಳಿಗೆ ಮರುವಿತರಣೆ ಮಾಡುವ ಮೂಲಕ ಉದ್ಯಮಕ್ಕೆ ಸಹಾಯ ಮಾಡಬೇಕು. ಮೆಸ್ಕಾಂಗೆ ಬಾಕಿ ಇರುವ 11 ಸಾವಿರ ಕೋಟಿ ರೂ. ಹಣವನ್ನು ವಸೂಲಿ ಮಾಡಲು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಆರು ತಿಂಗಳಿಗೊಮ್ಮೆ ವಿದ್ಯುತ್ ಪರಿಷ್ಕರಣೆಯನ್ನು ಬಿಟ್ಟು ಎರಡು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡುವ ಪದ್ಧತಿ ಅನುಸರಿಸುವುದು ಮತ್ತು ಅಳವಡಿಸಿಕೊಳ್ಳುವುದು. ಬಿಲ್ಲಿಂಗ್ ದಿನಾಂಕಗಳನ್ನು ಮೆಸ್ಕಾಂನಿಂದ ಪ್ರತಿ ತಿಂಗಳ 1 ರಿಂದ 30 ಅಥವಾ 31 ರವರೆಗೆ ಮಾತ್ರ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ನಂತರ ಮೆಸ್ಕಾಂ ಎಸ್‌ಇ ಹಾಗೂ ಜಿಲ್ಲಾಧಿಕಾರಿಗಳಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಸಂಯೋಜಿತ ಸಂಘ ಸಂಸ್ಥೆಗಳ ಪರವಾಗಿ ಮನವಿ ಸಲ್ಲಿಸಲಾಯಿತು. ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ರಮೇಶ್ ಕುಮಾರ್ ಹೆಗಡೆ ಸೇರಿದಂತೆ ನೂರಾರು ಉದ್ಯಮಿಗಳು ಹಾಜರಿದ್ದರು.
ಕೋಟ್
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಿರುವುದು ಕೈಗಾರಿಕಾ ಉದ್ಯಮಿಗಳಿಗೆ ಅನ್ಯಾಯವಾಗಿದೆ. ಹೆಚ್ಚುವರಿ ಹೊರೆಯಾಗಿ ಉದ್ಯಮ ನಡೆಸಲು ಕಷ್ಟಕರವಾದ ಸನ್ನಿವೇಶ ನಿರ್ಮಾಣವಾಗಿದೆ. ನಷ್ಟದಲ್ಲಿ ಸಂಸ್ಥೆ ನಡೆಸುವುದು ಕಷ್ಟವಾಗಿ ಮುಚ್ಚುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಅವೈಜ್ಞಾನಿಕ ವಿದ್ಯುತ್ ದರ ಪರಿಷ್ಕರಣೆ ಹಿಂಪಡೆಯಬೇಕು.
| ಎಸ್.ರುದ್ರೇಗೌಡ, ಕೈಗಾರಿಕೋದ್ಯಮಿ
ಕೋಟ್
ವಿದ್ಯುತ್ ದರ ಪರಿಷ್ಕರಣೆಯಿಂದ ಕೈಗಾರಿಕಾ ಉದ್ಯಮಗಳಿಗೆ ತುಂಬಾ ಹೊಡೆತ ಬೀಳಲಿದ್ದು, ಉದ್ಯಮ ಉಳಿವಿನ ಪ್ರಶ್ನೆಯಾಗಿದೆ. ಕೈಗಾರಿಕೋದ್ಯಮಿಗಳ ಪರವಾಗಿ ರಾಜ್ಯ ಸರ್ಕಾರವು ಕೂಡಲೇ ಕೆಇಆರ್‌ಸಿಗೆ ದರ ಪರಿಷ್ಕರಣೆ ಆದೇಶ ರದ್ದುಗೊಳಿಸುವಂತೆ ಮೇಲ್ಮನವಿ ಸಲ್ಲಿಸಬೇಕು ಹಾಗೂ ರಾಜ್ಯಾದ್ಯಂತ ವಿದ್ಯುತ್ ದರ ಏರಿಕೆ ಕುರಿತು ನಡೆಯುತ್ತಿರುವ ಪ್ರತಿಭಟನೆಗಳನ್ನು ಸ್ವಾಯತ್ತ ಸಂಸ್ಥೆ ಆಗಿರುವ ಕೆಇಆರ್‌ಸಿಯು ಗಮನಿಸಿ ಸ್ವಯಂ ಪ್ರೇರಿತವಾಗಿ ದರ ಪರಿಷ್ಕರಣೆ ಹಿಂಪಡೆಯುವ ಬಗ್ಗೆ ಪರಿಶೀಲನೆ ನಡೆಸಬೇಕು. ವಿದ್ಯುತ್ ಬೆಲೆ ಏರಿಕೆಗೂ ಮುನ್ನ ಇದ್ದ ದರವನ್ನೇ ಮುಂದುವರೆಸಬೇಕು. ವಿದ್ಯುತ್ ದರ ಪರಿಷ್ಕರಣೆ ಆದೇಶ ರದ್ದುಪಡಿಸದೇ ಇದ್ದರೆ ರಾಜ್ಯಾದ್ಯಂತ ಬಂದ್ ನಡೆಸುವ ಮೂಲಕ ಹೋರಾಟ ಮಾಡುವುದು ನಿಶ್ಚಿತ.
| ಎನ್.ಗೋಪಿನಾಥ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ