ವಿಘಟನಗೊಳ್ಳುತ್ತಿರುವ ಸಮಾಜಕ್ಕೆ ಬಸವತತ್ವವೇ ಪರಿಹಾರ: ಪ್ರೊ. ಡಿ. ವಿ.‌ ಪರಮಶಿವಮೂರ್ತಿ

ಶಂಕರಘಟ್ಟ, ಜೂ. 20: ಸಮಾಜದ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಮುಖ್ಯವಾಹಿನಿಗೆ ತಂದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಕಾರಣಕರ್ತವಾದ ಬಸವತತ್ವವೇ ವಿಘಟನೆಗೊಳ್ಳುತ್ತಿರುವ ಸಮಕಾಲೀನ ಸಮಾಜಕ್ಕೆ ನಿಜವಾದ ಪರಿಹಾರ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ. ವಿ. ಪರಮ ಶಿವಮೂರ್ತಿ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜ ಶಾಸ್ತ್ರ ವಿಭಾಗದ ಶ್ರೀ ಬಸವೇಶ್ವರ ಅಧ್ಯಯನ ಪೀಠದ ವತಿಯಿಂದ ಮಂಗಳವಾರ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮ ಮತ್ತು ಬಸವ ತತ್ವ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಹನ್ನೆರಡನೆಯ ಶತಮಾನದಲ್ಲಿ ವಚನ ಕ್ರಾಂತಿಯ ಮೂಲಕ ಕಾಯಕ ಜೀವಿಗಳನ್ನು ಒಗ್ಗೂಡಿಸಿ ಅನುಭವ ಮಂಟಪವನ್ನು ಕಟ್ಟುವ ಮೂಲಕ ನಾಡಿನ ಚರಿತ್ರೆಗೆ ಹೊಸ ತಿರುವು ಕೊಟ್ಟರು. ದೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಒಕ್ಕಲಿಗ ಮುತ್ತಯ್ಯ, ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಹೀಗೆ ಅಲಕ್ಷಿತ ಸಮುದಾಯದ ಉಪಕಸುಬುಗಳನ್ನು ಮಾಡುವ ಕಾಯಕ ಜೀವಿಗಳಿಗೆ ಶಿವಶರಣರೆಂಬ ಘನತೆ ದಕ್ಕಿಸಿಕೊಟ್ಟ ಕ್ರಾಂತಿಕಾರಿ ನಾಯಕ ಬಸವಣ್ಣ.

ಶ್ರೀಸಾಮಾನ್ಯನ ಸರಳಕನ್ನಡದಲ್ಲಿ ವಚನಗಳೆಂಬ ಹೊಸ ಪ್ರಕಾರವನ್ನು ಹುಟ್ಟುಹಾಕಿ ಶ್ರೇಷ್ಠ ಸಾಹಿತ್ಯ ರಚಿಸುವ ಮೂಲಕ ಕನ್ನಡ ಅಸ್ಮಿತೆಯನ್ನು ಶ್ರೀಮಂತಗೊಳಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲಬೇಕು ಎಂದು ಶ್ಲಾಘಿಸಿದರು.

ಪರೀಕ್ಷಾಂಗ ಕುಲಸಚಿವ ಪ್ರೊ.‌ ನವೀನ್ ಕುಮಾರ್ ಎಸ್. ಕೆ. ಮಾತನಾಡಿ, ಕ್ರಾಂತಿಕಾರಿ ಯುಗಪುರುಷರನ್ನು ದೈವೀಕ ಸ್ವರೂಪಕ್ಕೆ ಏರಿಸಿ, ಆರಾಧನೆಗೆ ಸೀಮಿತಗೊಳಿಸಿ, ಗುಡಿಗುಂಡಾರಗಳಲ್ಲಿ ಬಂಧಿಸಿ, ಸಮಾಜವನ್ನು ಯಥಾಸ್ಥಿತಿಯಲ್ಲಿಡುವ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರಗಳ ನಡುವೆ ಬಸವ ತತ್ವ ಸರ್ವಕಾಲಕ್ಕೂ ಪ್ರಸ್ತುತ ಎಂದರು.

ವಿಭಾಗದ ಅಧ್ಯಕ್ಷ ಪ್ರೊ. ಗುರುಲಿಂಗಯ್ಯ, ಪ್ರೊ. ಎಸ್. ಚಂದ್ರಶೇಖರ್, ಡಾ. ಈ. ಚಂದ್ರಶೇಖರ್, ಪ್ರೊ. ಅಂಜನಪ್ಪ, ಪ್ರೊ. ಪ್ರಶಾಂತ್ ನಾಯಕ್, ಶುಭಾ ಮರವಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!