ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವದ ವೈಶಿಷ್ಠ್ಯಪೂರ್ಣ ಕಾರ್ಯಕ್ರಮಗಳನ್ನು ಶಿವಮೊಗ್ಗ ನಗರದ ಎನ್‌ಇಎಸ್ ಮೈದಾನದಲ್ಲಿ ಜೂನ್ 20 ಹಾಗೂ 21ರಂದು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಹೇಳಿದರು.
ಜೂನ್ 20 ರಂದು ಬೆಳಗ್ಗೆ 10ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ಭಾಷಣಕಾರ ಗಂಗಾವತಿ ಪ್ರಾಣೇಶ್ ಅವರು “ಜೀವನವೇ ಹಾಸ್ಯ” ವಿಷಯ ಕುರಿತು ವಿಶೇಷ ಹಾಸ್ಯ ಲಹರಿ ನಡೆಸಿಕೊಡುವರು. ಜೂನ್ 21ರಂದು ಬೆಳಗ್ಗೆ 9.30ಕ್ಕೆ ಪದ್ಮವಿಭೂಷಣ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಮಾರೋಪ ಭಾಷಣ ಮಾಡುವರು ಎಂದು ತಿಳಿಸಿದರು.
ಜೂನ್ 20ರ ಮಧ್ಯಾಹ್ನ 3ಕ್ಕೆ ನಡೆಯುವ ಎನ್‌ಇಎಸ್ ಹಬ್ಬದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ನಟ ವಸಿಷ್ಠ ಸಿಂಹ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾಗಿರುವ ಶಿವಮೊಗ್ಗ ನಗರಸಭೆ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಗುವುದು. ನೃತ್ಯ, ಸಂಗೀತ, ನಾಟಕ, ಜಾನಪದ, ಮಿಮಿಕ್ರಿ, ಮ್ಯಾಜಿಕ್ ಶೋ ಪ್ರದರ್ಶನಗಳು ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಲಿದೆ ಎಂದು ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಮಾಹಿತಿ ನೀಡಿದರು.
ಡಾ. ಪಿ.ನಾರಾಯಣ ಮಾತನಾಡಿ, ಅಮೃತ ಮಹೋತ್ಸವದ ವಿಶೇಷ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಜೂನ್ 17ರಂದು ಎಂಟು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಶಿವಮೊಗ್ಗ ನಗರಾದ್ಯಂತ ಪ್ರಮುಖ ರಸ್ತೆಗಳಲ್ಲಿ “ಅಮೃತ ನಡಿಗೆ” ಆಯೋಜಿಸಲಾಗಿದೆ. ಜೂನ್ 21ರ ಬೆಳಗ್ಗೆ 6ಕ್ಕೆ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಉಪಸ್ಥಿತಿಯಲ್ಲಿ ಯೋಗ ಕಾರ್ಯಕ್ರಮ ಜರುಗಲಿದೆ. ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ರಮೇಶ್, ಟಿ.ಆರ್.ಅಶ್ವತ್ಥ್ ನಾರಾಯಣಶೆಟ್ಟಿ, ನಾರಾಯಣರಾವ್, ಮಧುರಾವ್, ಸುಧೀರ್, ಶಿವಕುಮಾರ್, ರಾಮಚಂದ್ರಮೂರ್ತಿ, ಅನಂತದತ್ತ, ಸೀತಾಲಕ್ಷ್ಮೀ, ರಾಮಚಂದ್ರ, ಹರಿಯಪ್ಪ, ನೃಪತುಂಗ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.