ಶಿವಮೊಗ್ಗ: ನಗು ಸಂತೋಷ ನಮ್ಮ ಮನಸ್ಸನ್ನು ಹಗುರಗೊಳಿಸುವುದರ ಜತೆಗೆ ಖಿನ್ನತೆ ದೂರವಾಗಿಸುತ್ತದೆ. ನಗು ಒಂದು ದಿವ್ಯ ಸಂಜೀವಿನಿ ಎಂದು ರಂಗಭೂಮಿ ಕಲಾವಿದ ಅಣ್ಣಪ್ಪ ಒಂಟಿಮಾಳಿಗಿ ಹೇಳಿದರು.
ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕೌಟುಂಬಿಕ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ನಗುವಿಗೆ ವಿಶೇಷ ಶಕ್ತಿ ಇದೆ. ಹಾಸ್ಯ ನಮ್ಮೊಳಗೆ ಹುದುಗಿರುತ್ತದೆ. ಆದರೆ ನಮ್ಮಲ್ಲಿ ಹಾಸ್ಯ ಪ್ರಜ್ಞೆ ಇರಬೇಕು. ಇನ್ನೂ ಹಾಸ್ಯ ಕಲಾವಿದರ ಸಂಖ್ಯೆಯು ಕ್ಷೀಣಿಸುತ್ತಿದೆ ಎಂದು ತಿಳಿಸಿದರು.
ಪ್ರತಿ ನಿತ್ಯ ನಮ್ಮ ನಿಜ ಜೀವನದಲ್ಲಿ ಸಾಕಷ್ಟು ಹಾಸ್ಯ ಪ್ರಸಂಗಗಳು ನಡೆಯುತ್ತಿರುತ್ತವೆ. ಅವುಗಳನ್ನು ಸ್ವೀಕರಿಸುವ ಪ್ರಜ್ಞೆ ನಮ್ಮೆಲ್ಲರಲ್ಲಿ ಇರಬೇಕು ಎಂದರು. ಅನೇಕ ಹಾಸ್ಯ ಪ್ರಸಂಗಗಳು ಹಾಸ್ಯ ಕವನಗಳು, ಹಾಸ್ಯ ಗೀತೆಗಳನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ರೋಟರಿ ಸಂಸ್ಥೆ ಸೇವಾ ಕಾರ್ಯಗಳ ಜತೆಯಲ್ಲಿ ಸಾಧಕರನ್ನು ಕಲಾವಿದರನ್ನು ಗುರುತಿಸಿ ಗೌರವಿಸುವ ಸಾರ್ಥಕ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.
ಹಾಸ್ಯ ನಮ್ಮಲ್ಲಿ ವಿಶೇಷ ಚೈತನ್ಯವನ್ನು ಮೂಡಿಸುತ್ತದೆ. ಸದಾ ಆರೋಗ್ಯದಿಂದ ಇರುವಂತೆ ಸಹಕಾರಿ ಆಗಿಸುತ್ತದೆ. ಹಾಸ್ಯ ಮನೋಭಾವ, ಹಾಸ್ಯ ಪ್ರಜ್ಞೆ ನಮ್ಮಲ್ಲಿ ಸದಾ ಜಾಗೃತ ಆಗಿರಬೇಕು ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ಕುಮಾರ್, ಚಂದ್ರಹಾಸ ಪಿ ರಾಯ್ಕರ್, ಮಾಜಿ ಗವರ್ನರ್ ಎಚ್.ಎಲ್.ರವಿ, ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರಯ್ಯ, ಮಾಜಿ ಅಧ್ಯಕ್ಷ ಆದಿಮೂರ್ತಿ, ಕಡಿದಾಳ್ ಗೋಪಾಲ್, ಡಾ. ಪರಮೇಶ್ವರ ಶಿಗ್ಗಾವ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ಗಣೇಶ್, ಡಾ. ಅರುಣ್, ಹುಲಿರಾಜ್, ನಾಗವೇಣಿ, ಇನ್ನರ್ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್ಕುಮಾರ್, ವಿಜಯ ರಾಯ್ಕರ್ ಉಪಸ್ಥಿತರಿದ್ದರು.