ಶಿವಮೊಗ್ಗ: ನಗರದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಸಾರ್ವಜನಿಕರ ಸಲಹೆ ಹಾಗೂ ಸಹಕಾರ ಅಗತ್ಯ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಚನ್ನಬಸಪ್ಪ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಸಮಾಜದ ಪ್ರಗತಿಗೆ ಕೊಡುಗೆ ನೀಡುತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು.
ಶಿವಮೊಗ್ಗ ನಗರದ ಅಭಿವೃದ್ಧಿಗೆ ಸಂಬಂಧಿಸಿ ಪ್ರತಿ ತಿಂಗಳು ಸಾರ್ವಜನಿಕರ ಜತೆಯಲ್ಲಿ ಸಭೆ ನಡೆಸಿ ಸಲಹೆ ಹಾಗೂ ಸಹಕಾರ ಪಡೆಯಲಾಗುವುದು. ಅಭಿವೃದ್ಧಿ ಕಾರ್ಯ ನಿರಂತರವಾಗಿ ಮುನ್ನಡೆಯಲು ಎಲ್ಲರೂ ಕೈಜೋಡಿಸಬೇಕು. ನನ್ನ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದು, ನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಪ್ರಸ್ತುತ ಶಾಸಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೇ ಮಾದರಿ ನಗರವಾಗಿ ಶಿವಮೊಗ್ಗ ರೂಪುಗೊಳ್ಳಲಿ, ನಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಅನೇಕ ಸಲಹೆ ಹಾಗೂ ಸಮಸ್ಯೆಗಳಿಗೆ ಸೂಕ್ತ ಉತ್ತರ ನೀಡಿದರು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಮಾಜಿ ಗವರ್ನರ್ ಎಚ್.ಎಲ್.ರವಿ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ ಪ್ರಮುಖರಿದ್ದರು.
ಕಡಿದಾಳ್ ಗೋಪಾಲ್, ಡಾ. ರವಿಕಿರಣ್, ಚಂದ್ರಶೇಖರಯ್ಯ, ಎಚ್.ಎಸ್.ಸೂರ್ಯನಾರಾಯಣ, ಐಎಂಎ ಅಧ್ಯಕ್ಷ ಡಾ. ಅರುಣ್, ಡಾ. ಪರಮೇಶ್ವರ್, ವಸಂತ್ ಹೋಬಳಿದಾರ್, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್, ನಾಗವೇಣಿ, ಜಯಂತಿ ವಾಲಿ, ರವಿ ಕೋಟೋಜಿ, ಚಂದ್ರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!